ಹೊಸದಿಲ್ಲಿ,ಎ.8: ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಗೊಳಿಸಿದ್ದು ಅದಕ್ಕೆ ‘ಸಂಕಲ್ಪಪತ್ರ್’ ಎಂದು ಹೆಸರಿರಿಸಿದೆ. ರಾಷ್ಟ್ರೀಯತೆ, ಹಿಂದುತ್ವ, ಅಭಿವೃದ್ಧಿ, ಜನಕಲ್ಯಾಣ, ರೈತಕಲ್ಯಾಣ ಚುನಾವಣಾ ಪ್ರಣಾಳಿಕೆಯಲ್ಲಿರುವ ಮುಖ್ಯ ವಿಷಯಗಳಾಗಿವೆ. ಪ್ರಣಾಳಿಕೆಯಲ್ಲಿ 75 ಯೋಜನೆಗಳಿದ್ದು ರೈತರಿಗೆ 25 ಲಕ್ಷ ಕೋಟಿ ರೂಪಾಯಿ ಕಲ್ಯಾಣ ಯೋಜನೆ, ಸೌಹಾರ್ದ ವಾತಾವರಣದಲ್ಲಿ ರಾಮಮಂದಿರ ನಿರ್ಮಾಣ, ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ, ಏಕರೂಪ ನೀತಿ ಸಂಹಿತೆ ಜಾರಿಯನ್ನು ಬಿಜೆಪಿ ಮುಂದಿಟ್ಟಿದ್ದು ಇದೇ ವೇಳೆ ಕಳೆದ ಐದು ವರ್ಷಗಳನ್ನು ಸುವರ್ಣ ಕಾಲವೆಂದು ಅಮಿತ್ ಶಾ ಪ್ರತಿಪಾದಿಸಿದರು. 2014ರದ್ದು ನಿರೀಕ್ಷೆಯ ಚುನಾವಣೆಯಾಗಿತ್ತು. 2019 ಬೇಡಿಕೆಗಳ ಚುನಾವಣೆಯಾಗಿದೆ ಎಂದರು. ಮೋದಿ ಸರಕಾರದ ಅವಧಿಯಲ್ಲಿ ಗಡಿ ಸುರಕ್ಷಿತವಾಯಿತು. ದೇಶದ ಅಭಿಮಾನ ಆಕಾಶದೆತ್ತರ ಏರಿತು. ಆರು ಕೋಟಿ ಜನರನ್ನು ಸಂಪರ್ಕಿಸಿ ಪ್ರಣಾಳಿಕೆ ಸಿದ್ಧಪಡಿಸಲಾಯಿತು ಎಂದು ಅಮಿತ್ ಶಾ ಹೇಳಿದರು.












