ಶುಚಿತ್ವಕ್ಕೆ ಇಸ್ಲಾಮ್ ಕೊಡುವ ಮಹತ್ವ ಏನು?

0
328

ಸನ್ಮಾರ್ಗ ವಾರ್ತೆ

✍️ ಖಾಲಿದ್ ಮೂಸಾ ನದ್ವಿ

ಮಾನಸಿಕ ಶುಚಿತ್ವಕ್ಕೆ ಮಹತ್ವ ನೀಡುವ ಇಸ್ಲಾಮ್ ದೈಹಿಕ ಶುಚಿತ್ವಕ್ಕೂ ಮಹತ್ವ ನೀಡುತ್ತದೆ. ದೇಹ, ಉಡುಪು, ವಾಹನ, ಮನೆ, ಪಾದರಕ್ಷೆಗಳು ಹೀಗೆ ಎಲ್ಲವನ್ನೂ ಶುಚಿಯಾಗಿಡಬೇಕೆಂದು ಇಸ್ಲಾಮ್ ಬಯಸುತ್ತದೆ.

ಬಾಹ್ಯ ಶುಚಿತ್ವದ ಕುರಿತು ಪ್ರವಾದಿ(ಸ)ರವರ ಮಾತುಗಳು ಸುಪ್ರಸಿದ್ಧವಾಗಿವೆ. ಶುಚಿತ್ವ ಈಮಾನಿನ ಅರ್ಧಾಂಶವಾಗಿದೆ ಎಂಬುದು ಆ ಮಹತ್ತರವಾದ ವಚನವಾಗಿದೆ.

ಮನೆಯ ಸುತ್ತಮುತ್ತಲೂ ಶುಚಿತ್ವ ಪಾಲಿಸಿರಿ. ಮಾಲಿನ್ಯ ನೀಗಿಸಿರಿ. ಹಲ್ಲುಜ್ಜಿರಿ. ಉಗುರು ಕತ್ತರಿಸಿರಿ. ಬಟ್ಟೆಯನ್ನು ತೊಳೆಯಿರಿ, ಸ್ನಾನ ಮಾಡಿರಿ. ಗಡ್ಡ ಮತ್ತು ತಲೆಗೂದಲನ್ನು ಸುಂದರವಾಗಿರಿಸಿರಿ ಮುಂತಾದ ಹಲವು ವಿಚಾರಗಳು ಇಸ್ಲಾಮ್ ಧರ್ಮದಲ್ಲಿ ಕಾಣಬಹುದು.

ಶುಚಿತ್ವದ ಪೂರ್ವ ಸಿದ್ಧತೆಯೊಂದಿಗೆ ನಾವು ನಮಾಝ್ ಪ್ರವೇಶಿಸುತ್ತೇವೆ. ಎರಡು ಮಾಲಿನ್ಯಗಳು ನಿಮ್ಮಲ್ಲಿ ತೊಂದರೆಯುಂಟು ಮಾಡಿದರೆ ನೀವು ನಮಾಝ್‌ಗೆ ಪ್ರವೇಶಿಸಬಾರದು. ಎಂದು ಪ್ರವಾದಿ(ಸ) ಉಪದೇಶಿಸಿದ್ದಾರೆ. ಅಂತಹ ಸ್ಥಿತಿಯಲ್ಲಿ ಭಯಭಕ್ತಿ ಮನಸಲ್ಲಿ ಉಳಿಯದು. ನಮಾಝ್‌ನಲ್ಲಿ ಏಕಾಗ್ರತೆ ದೊರೆಯದು. ದೇಹವು ಏಕಾಗ್ರತೆಗೆ ಪಾಕಗೊಂಡರೆ ಮನದಲ್ಲಿ ಭಯ ಭಕ್ತಿ ತುಂಬುತ್ತದೆ.

ಮಸೀದಿಯಲ್ಲಿರುವ ಶೌಚಾಲಯಗಳ ಸೌಕರ್ಯ ರೂಪಿಸುವಲ್ಲಿ ಮಸೀದಿಯ ಆಡಳಿತ ಕಮಿಟಿ ತೋರುವ ಗೌರವ ಇಸ್ಲಾಮಿನಲ್ಲಿ ಶುಚಿತ್ವಕ್ಕಿರುವ ಮಹತ್ವವನ್ನು ತಿಳಿಯಬಹುದು.

ಕೇವಲ ನಮಾಝ್ ಮಾತ್ರವಲ್ಲ ಆರಾಧನೆ. ಶೌಚಾಲಯಕ್ಕೆ ಹೋಗಿ ಮಲಮೂತ್ರ ವಿಸರ್ಜನೆ ಮಾಡಿ ದೇಹವನ್ನು ಶುಚಿಗೊಳಿಸಿ ನಮಾಝ್‌ಗೆ ಸಿದ್ಧವಾಗಿಸುವುದು ಕೂಡ ಆರಾಧನೆ ಭಾಗವಾಗಿದೆ. ಶೌಚಾಲಯಕ್ಕೆ ಹೋಗುವಾಗ ಕೂಡ ಪಿಶಾಚಿಯ ಉಪಟಳದಿಂದ ಅಲ್ಲಾಹನ ಅಭಯ ಯಾಚಿಸುವ ಪ್ರಾರ್ಥನೆ ಪ್ರಾರ್ಥಿಸಿಯೇ ಹೋಗಬೇಕು. ಮರಳುವಾಗಲೂ ತನ್ನ ಮಾಲಿನ್ಯ ನೀಗಿಸಿ ತೃಪ್ತಿ ಸುಖ ಪ್ರಾಪ್ತಿ ನೀಡಿದ ಅಲ್ಲಾಹನಿಗೆ ಸ್ತುತಿಸಿ ಹೊರ ಬರಬೇಕು.

ನಮಾಝ್‌ಗೆ ಪ್ರವೇಶಿಸುವುದಕ್ಕಿಂತ ಮುಂಚೆ ಸ್ನಾನ ಮಾಡಿ ವುಝೂ ನಿರ್ವಹಿಸಿ ಸಿದ್ಧವಾಗಬೇಕು. ಸ್ನಾನವು ಇಸ್ಲಾಮಿನ ಅನುಷ್ಠಾನ ಘಟಕವಾಗಿದೆ. ಮನುಷ್ಯನು ದೊಡ್ಡ ಅಶುದ್ಧಿಗೆ ತುತ್ತಾದರೆ ಸ್ನಾನದ ಮೂಲಕ ಶುದ್ಧಿಯಾಗುತ್ತಾನೆ. ಆದ್ದರಿಂದ ಅದು ಅನುಷ್ಠಾನ ಘಟಕವಾಗಿದೆ. ಪತಿ ಪತ್ನಿಯರು ಪರಸ್ಪರ ಲೈಂಗಿಕ ಸಂಬಂಧ ಬೆಳೆಸಿದರೂ ಸ್ನಾನ ಮಾಡಿಯೇ ನಮಾಝ್ ನಿರ್ವಹಿಸಬೇಕು. ಅದರ ಹೊರತಾದ ಇಂದ್ರಿಯ ಸ್ಖಲನವಾದರೂ ನಮಾಝ್ ನಿರ್ವಹಿಸಲು ಸ್ನಾನ ಮಾಡಬೇಕು. ಮಾತ್ರವಲ್ಲ ಆರ್ತವದ ಸಂದರ್ಭದಲ್ಲಿಯೂ ಅವಧಿ ಮುಗಿದ ಬಳಿಕ ಸ್ನಾನ ಮಾಡಿಯೇ ನಮಾಝ್ ಪ್ರವೇಶಿಸಬೇಕು.

ಸ್ನಾನ ಕಡ್ಡಾಯವಾದವನು ಸ್ನಾನದ ಮೂಲಕವೂ ಸ್ನಾನ ಮಾಡಲು ಬಾಧ್ಯತೆಯಿಲ್ಲದವನು ಸ್ವತಂತ್ರವಾಗಿ ನಿರ್ವಹಿಸುವ ಪ್ರಕ್ರಿಯೆಯಾಗಿದೆ ಅಂಗಸ್ನಾನ. ಅಂಗಸ್ನಾನ ಮತ್ತು ಸ್ನಾನ ಅಲ್ಲಾಹನ ಆದೇಶವಾಗಿದೆ. ಮುಖ ಕೈ ಕಾಲು ತೊಳೆದು ತಲೆಯನ್ನು ಸವರುವುದು ವುಝೂ ಆಗಿದೆ. ಅದು ಪೂರ್ತಿಯಾದರೆ ಮಾತ್ರ ನಮಾಝ್ ಸ್ವೀಕಾರಾರ್ಹವಾಗುತ್ತದೆ. ಮುಖವನ್ನು ಸಂಪೂರ್ಣವಾಗಿ ತೊಳೆಯಬೇಕು. ಎರಡೂ ಕೈಗಳನ್ನು ಮುಂಗೈ ತನಕ ತೊಳೆಯಬೇಕು. ತಲೆಯನ್ನು ಸಂಪೂರ್ಣವಾಗಿ ಸವರಬೇಕು. ಎರಡೂ ಪಾದಗಳು ಸಂಪೂರ್ಣವಾಗಿ ಹಿಂಭಾಗದ ತನಕ ತೊಳೆಯಬೇಕು. ಅಂಗಸ್ನಾನ ನಿರ್ವಹಿಸುವಾಗ ಈ ಅಂಶಗಳತ್ತ ಗಮನಹರಿಸದಿದ್ದರೆ ವುಝೂ ಪೂರ್ಣವಾಗದು, ವುಝೂ ಅಪೂರ್ಣಗೊಂಡರೆ ನಮಾಝ್ ಕೂಡ ಅಪೂರ್ಣವಾಗುವುದು.

ಒಮ್ಮೆ ಪ್ರವಾದಿ ವರ್ಯರು(ಸ) ಹೇಳಿದರು, “ಕಾಲಿನ ಹಿಂಭಾಗವನ್ನು ನಿರ್ಲಕ್ಷಿಸುವವರಿಗೆ ನಾಶವಿದೆ.”
ಸಾಮಾನ್ಯವಾಗಿ ಮುಂಗೈಯ ಭಾಗ ಮತ್ತು ಪಾದದ ಹಿಂಬಾಗವನ್ನು ಅಂಗಸ್ನಾನ ನಿರ್ವಹಿಸುವಾಗ ನಿರ್ಲಕ್ಷಿಸುವುದಿದೆ. ಇದರಿಂದ ವುಝೂ. ಅಪೂರ್ಣವಾಗುತ್ತವೆ ಭೌತಿಕವಾಗಿ ತೊಳೆದು ಶುಚಿಗೊಳಿಸುವುದಲ್ಲ ವುಝೂ, ವುಝೂವಿನಲ್ಲಿ ಅವಯವಗಳು ಶುಚಿಗೊಳ್ಳುತ್ತದೆ ನಿಜ. ಅವಯವಗಳಲ್ಲಿ ನೀರು ಹರಿದಾಡಿದಂತೆ ಆತನ ಪಾಪಗಳೂ ತೊಳೆದು ಹೋಗುತ್ತದೆ. ಎಂದು ಪ್ರವಾದಿ ವರ್ಯರು(ಸ) ಕಲಿಸಿರುತ್ತಾರೆ.

ಅಂಗಸ್ನಾನದಿಂದ ಮಾನಸಿಕವಾಗಿಯೂ ಶುದ್ಧರಾಗುತ್ತಾರೆ. ಅಬೂ ಹುರೈರಾ(ರ)ರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು, ಅಂತಿಮ ದಿನದಂದು ನನ್ನ ಸಮುದಾಯದ ಜನತೆಯ ಕೈ ಕಾಲುಗಳು ಅಂಗಸ್ನಾನದ ಕಾರಣದಿಂದ ಪ್ರಕಾಶಮಾನವಾಗಿ ಹೊಳೆಯುತ್ತಿರುವಂತೆ ಹಾಜರಾಗುವರು. ಆದ್ದರಿಂದ ಸಾಧ್ಯವಾಗುವವರೆಲ್ಲರೂ ತಮ್ಮ ಅಂಗಾಂಗಗಳನ್ನು ಸಂಪೂರ್ಣವಾಗಿ ತೊಳೆಯಲಿ. ಈ ಹದೀಸ್ ಇಮಾಮ್ ಬುಖಾರಿ ಮತ್ತು ಇಮಾಮ್ ಮುಸ್ಲಿಮ್ ಸಹೀಹ್ ಎಂದಿದ್ದಾರೆ.

ಪ್ರಕಾಶಮಾನವಾಗಿ ಎಂದು ಅರ್ಥ ಬರುವ ಅದಾಅ ಎಂಬ ಪದದಿಂದ ನಾಮ ಪದವಾಗಿ ವುಝೂ ಬಂದಿದೆ. ಅಬೂಹುರೈರಾ(ರ) ವರದಿ ಮಾಡಿದ ಮತ್ತೊಂದು ಹದೀಸ್ ಹೀಗಿದೆ:
ಒಮ್ಮೆ ಪ್ರವಾದಿವರ್ಯರು(ಸ) ಸಹಾಬಿಗಳ ಜೊತೆ ಕೇಳಿದರು, ಸಣ್ಣ ಪಾಪಗಳು ಮಾಸುವ, ನಿಮ್ಮ ದರ್ಜೆಯನ್ನು ಉನ್ನತಿಗೇರಿಸುವ ಒಂದು ವಿಚಾರವನ್ನು ನಾನು ನಿಮಗೆ ಹೇಳಿ ಕೊಡಲೇ? ಸಹಾಬಿಗಳು “ಸರಿ. ಹೇಳಿರಿ” ಎಂದಾಗ, “ಅತ್ಯಂತ ಸಂಕಷ್ಟದ ಸಂದರ್ಭದಲ್ಲಿಯೂ ವುಝೂ ಸಂಪೂರ್ಣಗೊಳಿಸಿರಿ. ಹೆಜ್ಜೆಗಳನ್ನು ವರ್ಧಿಸಿರಿ. ಒಂದು ನಮಾಝ್ ಬಳಿಕ ಮತ್ತೊಂದು ನಮಾಝ್‌ನ ನಿರೀಕ್ಷೆಯಲ್ಲಿರಿ” ಎಂದು ಹೇಳಿದರು.

ಪ್ರವಾದಿ(ಸ) ಹೇಳಿದರು, “ಮೇಲೆ ಹೇಳಿದ ವಿಚಾರವು ಒಂದು ಸೇನಾ ಸಿದ್ಧತೆಯಂತಿದೆ. ಅದೇ ರೀತಿಯ ಎಚ್ಚರಿಕೆಯು ಸೇನಾ ಸನ್ನಾಹವಾಗಿದೆ”. (ಮುಸ್ಲಿಮ್)

ವುಝೂ ನಿರ್ವಹಿಸಿದ ಬಳಿಕದ ಪ್ರಾರ್ಥನೆಯನ್ನೂ ಪ್ರವಾದಿವರ್ಯರು(ಸ) ಕಲಿಸಿರುತ್ತಾರೆ. ಅಲ್ಲಾಹನಲ್ಲದೆ ಇಲಾಹ್ ಇಲ್ಲ ಎಂದು ನಾನು ಸಾಕ್ಷ್ಯ ವಹಿಸುತ್ತೇನೆ. ಅವನು ಏಕೈಕನು. ಅವನಿಗೆ ಭಾಗೀದಾರರು ಯಾರೂ ಇಲ್ಲ. ಪ್ರವಾದಿ ಮುಹಮ್ಮದ್ ಅಲ್ಲಾಹನ ದಾಸರೂ ಸಂದೇಶ ವಾಹಕರೂ ಆಗಿದ್ದಾರೆ ಎಂದು ನಾನು ಸಾಕ್ಷ್ಯ ವಹಿಸುತ್ತೇನೆ. ಅಲ್ಲಾಹನೇ ನೀನು ನನ್ನನ್ನು ಪಶ್ಚಾತ್ತಾಪ ಪಡುವವರಲ್ಲಿ ಪರಿಶುದ್ಧಿಯುಳ್ಳವರ ಸಾಲಲ್ಲಿ ಸೇರಿಸು. ಅಲ್ಲಾಹನೇ ನೀನು ಪರಿಶುದ್ಧನು. ಸರ್ವ ಸ್ತುತಿಗಳೆಲ್ಲವೂ ನಿನಗೆ ಮೀಸಲು. ನಿನ್ನ ಹೊರತು ಅನ್ಯ ಆರಾಧ್ಯರಿಲ್ಲ. ನಿನ್ನಲ್ಲಿ ಕ್ಷಮೆ ಯಾಚಿಸುತ್ತೇನೆ. ನಿನ್ನೆಡೆಗೇ ನಾನು ಮರಳುತ್ತೇನೆ.”

ಈ ಪ್ರಾರ್ಥನೆಯ ಅರಬಿ ಮೂಲವನ್ನು ಕಲಿತು ಅರ್ಥೈಸಿ ಹೃದಯಾಂತರಾಳದಿಂದ ಪ್ರಾರ್ಥಿಸಿದಾಗ ಪ್ರತೀ ವುಝೂವಿನಲ್ಲಿಯೂ ಒಂದು ವರ್ಣಿಸಲಸಾಧ್ಯವಾದ ಆಧ್ಯಾತ್ಮಿಕವಾದ ಧನ್ಯತೆಯ ಅನುಭವವಾಗುವುದು.

ನಮಾಝ್‌ಗಿಂತ ಮುಂಚೆ ಅದಾನ್ ಮತ್ತು ಇಖಾಮತ್ ನೀಡಬೇಕು. ಅದಾನ್ ಒಂದು ಎಚ್ಚರಿಕೆಯ ಕರೆಯಾಗಿದೆ. ದಿನವೂ ಐದು ಹೊತ್ತಿನಲ್ಲಿ ಆಲಿಸುವ ಈ ಸುಶ್ರಾವ್ಯ ಕರೆಯು ಇಸ್ಲಾಮೀ ಸಮಾಜದ ಉಜ್ವಲವಾದ ಘೋಷಣೆಯಾಗಿದೆ. ಅದು ಆಲಸ್ಯ ದಿಂದ ಮುಕ್ತನಾಗಿ ಕರ್ಮರಂಗಕ್ಕೆ ಉತ್ಸಾಹ ಭರಿತರಾಗಿ ಮರಳಲು ಪ್ರೇರೇಪಿಸುತ್ತದೆ. ಅಲ್ಲಾಹು ಅಕ್ಬರ್ ಎಂಬ ಆ ಕರೆಯು ಅಲ್ಲಾಹನು ಮಹಾನನು ಎಂದು ಹೇಳುವಾಗ ಉಳಿದೆಲ್ಲವೂ ತೃಣ ಸಮಾನವಾಗುತ್ತದೆ. ಯಾರೂ ಕೂಡಾ ಮಹಾನನೆಂದು ಹೇಳಿಕೊಂಡು ಸಮಾಜದಲ್ಲಿ ಬಿರುಕು ಸೃಷ್ಟಿಸಬಾರದೆಂಬ ಸತ್ಯ ಆ ಕರೆಯಲ್ಲಿ ಅಡಗಿದೆ. ಅದಾನ್ ಅಲ್ಲಾಹನ ಮಹಾನತೆ ಮತ್ತು ಪ್ರವಾದಿ ವರ್ಯರ(ಸ) ಪ್ರವಾದಿತ್ವವನ್ನು ನಿರಂತರ ಸ್ಮರಿಸಲ್ಪಡುವ ಕರ್ಮವಾಗಿದೆ. ಅದು ಸತ್ಯ ಸಂದೇಶವನ್ನು ನಿರಂತರ ಜನರಿಗೆ ಕೇಳಿಸುವ ಪ್ರಕ್ರಿಯೆಯಾಗಿದೆ.

ಯಶಸ್ಸಿನ ಹಾದಿ ಪ್ರಾರ್ಥನೆಯಿಂದಾಗಿದೆ. ನಮಾಝ್‌ನ ಹಾದಿ ಆಧ್ಯಾತ್ಮಿಕವಾದ ಧನ್ಯತೆಯ ಹಾದಿಯಾಗಿದೆ ಎಂದು ಅದಾನ್ ಹೇಳುತ್ತದೆ.