ರಾಜಸ್ಥಾನದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದ ಪ್ರಧಾನಿ ನರೇಂದ್ರ ಮೋದಿ!

0
1800

ಸನ್ಮಾರ್ಗ ವಾರ್ತೆ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ಸುದ್ದಿಗಳು ಬರುತ್ತಿರುವ ನಡುವೆಯೇ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಎಲ್ಲ ರಾಜ್ಯಗಳಿಗೆ ತೆರಳಿ, ಎನ್‌ಡಿಎ ಪರ ಮತ ಯಾಚನೆ ನಡೆಸುತ್ತಿದ್ದಾರೆ.

ಇಂದು ರಾಜಸ್ಥಾನದ ಬನ್ಸ್‌ವಾರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಪ್ರಧಾನಿ ಮೋದಿಯೇ ಖುದ್ದು ಮುಸಲ್ಮಾನರ ವಿರುದ್ಧ ದ್ವೇಷ ಭಾಷಣಗೈದಿದ್ದು, ದೊಡ್ಡ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅಲ್ಲದೇ, ತಮ್ಮ ಭಾಷಣದಲ್ಲಿ ಧರ್ಮವನ್ನು ಎಳೆದು ತರುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಸಮಾವೇಶದಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಟೀಕಿಸುವ ಭರದಲ್ಲಿ ಮುಸ್ಲಿಮ್ ಸಮುದಾಯವನ್ನು ಎಳೆದು ತಂದ ಮೋದಿ, “ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮ್ ಸಮುದಾಯಕ್ಕೆ ನೀಡುವುದೇ ಕಾಂಗ್ರೆಸ್‌ನ ಗ್ಯಾರಂಟಿ” ಎಂದು ಹೇಳಿಕೆ ನೀಡಿದ್ದಾರೆ. ಸುಮಾರು ಒಂದೂವರೆ ನಿಮಿಷದ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವಿವಾದ ಎಬ್ಬಿಸಿದೆ.

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, “ಈ ದೇಶದ ಸಂಪತ್ತಿನ ಮೊದಲ ಅಧಿಕಾರ ಇರುವುದು ಮುಸ್ಲಿಮರಿಗೆ ಎಂದು ಈ ಮೊದಲಿದ್ದ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಇದರ ಅರ್ಥ ಏನೆಂದರೆ, ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಯಾರಿಗೆ ಹೆಚ್ಚು ಮಕ್ಕಳಿದ್ದಾರೋ ಅವರಿಗೆ ನೀಡುವುದಾಗಿದೆ. ನುಸುಳುಕೋರರಿಗೆ ಹಂಚಲಿದೆ. ನೀವು ಕಷ್ಟಪಟ್ಟು ದುಡಿದು ಗಳಿಸಿದ ಸಂಪತ್ತು, ಹಣವನ್ನು ನುಸುಳುಕೋರರಿಗೆ ನೀಡಬೇಕೇ? ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ಇದು ಕಾಂಗ್ರೆಸ್‌ನ ಪ್ರಣಾಳಿಕೆ ಹೇಳುತ್ತಿದೆ. ದೇಶದ ಜನರ ವೈಯಕ್ತಿಕ ಆಸ್ತಿಗಳನ್ನು ಕಸಿದು, ಅವುಗಳನ್ನು ಕಾಂಗ್ರೆಸ್ ಮುಸ್ಲಿಮರಿಗೆ ನೀಡಲಿದೆ. ಇದು ನಗರ ನಕ್ಸಲರ ಯೋಚನೆಯಾಗಿದೆ. ನಮ್ಮ ಹೆಣ್ಣು ಮಕ್ಕಳ ಮಂಗಳಸೂತ್ರ ಕೂಡ ಉಳಿಯುವುದಿಲ್ಲ. ಅಲ್ಲಿಯವರೆಗೂ ಬೇಕಾದರೆ ಕಾಂಗ್ರೆಸ್ ಹೋಗಬಹುದು ಎಂದು ನಾನು ಹೇಳಬಯಸುತ್ತೇನೆ” ಎಂದು ವಿವಾದಾತ್ಮಕ ಹಾಗೂ ದ್ವೇಷ ಭಾಷಣಗೈದಿದ್ದಾರೆ.

“ಬಿಜೆಪಿಗೆ ಇದು ವಿನಾಶಕಾರಿ. ಮೊದಲ ಹಂತದ ಮತದಾನದ ನಂತರ ನರೇಂದ್ರ ಮೋದಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆ. ಮತ್ತೊಮ್ಮೆ ಧರ್ಮದ ಹೆಸರಿನಲ್ಲಿ ಮತ ಕೇಳಿದ್ದಾರೆ. ಕಾಂಗ್ರೆಸ್ ಮತ್ತು ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಜನರ ವೈಯಕ್ತಿಕ ಆಸ್ತಿಗಳನ್ನು ಕಸಿದುಕೊಳ್ಳುತ್ತದೆ ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರಿಗೆ ನೀಡುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದು 10 ವರ್ಷಗಳ ಕಾಲ ನಮ್ಮ ದೇಶವನ್ನಾಳಿದ ಪ್ರಧಾನಿಯ ಸ್ಥಿತಿ. ಇವರ ಮನಸ್ಥಿತಿ ಊಹಿಸಿ. ಮೋದಿಯವರಿಂದ ಇದು ತೀರಾ ಹತಾಶೆಯ ಮಾತು. ಚುನಾವಣಾ ಆಯೋಗವು ಇನ್ನೂ ನಿದ್ರಿಸುವುದನ್ನು ಮುಂದುವರೆಸಿದರೆ ಬಹಳ ಕಷ್ಟವಿದೆ” ಎಂದು ನೆಟ್ಟಿಗರೊಬ್ಬರು ವಿಡಿಯೋ ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಈ ವೀಡಿಯೋ ವೈರಲಾಗಿದ್ದು, ಚುನಾವಣಾ ಆಯೋಗವು ನಿದ್ರಿಸುತ್ತಿದೆಯೇ ಎಂದು ನೆಟ್ಟಿಗರು ಹಾಗೂ ವಿಪಕ್ಷಗಳ ಮುಖಂಡರು ಪ್ರಶ್ನಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here