ಸನ್ಮಾರ್ಗ ವಾರ್ತೆ
–ಡಾ. ಎ.ಎ. ಹಲೀಮ್
ಖಿಲಾಫತರ್ರಾಶೀದ್ನ ಯುಗವು ಕೊನೆಗೊಳ್ಳುವುದರೊಂದಿಗೆ ಇಸ್ಲಾಮೀ ಲೋಕದ ಆಧಿಪತ್ಯವು ವಿವಿಧ ವಂಶಗಳ ನಿಯಂತ್ರಣಕ್ಕೆ ಬಂತು. ಉಮವಿಗಳು, ಅಬ್ಬಾಸಿಗಳು, ಸಲ್ಜೂಖಿಗಳು, ಫಾತ್ವಿಮಿಯರು, ಉಸ್ಮಾನಿಗಳು ಮುಂತಾದ ಪ್ರಮುಖ ವಂಶಗಳು ಬಳಿಕ ಆಡಳಿತ ನಡೆಸಿದವು.
ಇವರಲ್ಲಿ ಅಬ್ಬಾಸಿಗಳ ಬಳಿಕ ಅತ್ಯಂತ ಪ್ರಬಲವಾದ ಸಾಮ್ರಾಜ್ಯವನ್ನು ಕಟ್ಟಿದವರು ತುರ್ಕಿಯ ಉಸ್ಮಾನಿ ಆಡಳಿತ (687/1288). ಉಸ್ಮಾನ್ ಖಾನ್ ಎಂಬವರು ಈ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು. ಇದು ಆರು ಶತಮಾನಗಳಿಗೂ ಹೆಚ್ಚು ಕಾಲ ಮುಸ್ಲಿಮ್ ಪ್ರಪಂಚದ ಕೇಂದ್ರವಾಗಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಮುಸ್ಲಿಮ್ ಜಗತ್ತಿನಲ್ಲಿ ಹೊರಹೊಮ್ಮಿದ ವಿಭಿನ್ನ ರಾಜವಂಶಗಳಲ್ಲಿ ಖಿಲಾಫತುರ್ರಾಶೀದ್ನ ವಿಶೇಷತೆಗಳನ್ನು ಉಸ್ಮಾನಿಗಳು ಹೊಂದಿದ್ದರು. ನ್ಯಾಯನಿಷ್ಠೆ, ಪ್ರಾಮಾಣಿಕತೆ, ಸಮಾಲೋಚನೆ, ಹಿಂಸೆಯನ್ನು ಸಹಿಸದಿರುವುದು, ರಾಜಿ, ಸಾರ್ವಜನಿಕ ಕಲ್ಯಾಣದಲ್ಲಿ ಆಸಕ್ತಿ, ಕಾನೂನು ಮತ್ತು ನ್ಯಾಯಾಂಗದ ಆಡಳಿತಕ್ಕೆ ಗೌರವ, ಶಿಕ್ಷಣ ಮತ್ತು ವಿದ್ವಾಂಸರಿಗೆ ಆದರ, ಇಸ್ಲಾಮೀ ಶರೀಅತ್ನೊಂದಿಗೆ ಬದ್ಧತೆ, ಭೌತಿಕತೆಯ ನಾಗರಿಕತೆಯ ಬಣ್ಣದ ಬದುಕಿನ ಸುಖಲೋಲುಪತೆಯ ಬಗ್ಗೆ ವಿರಕ್ತಿ, ಸರಳ ಜೀವನ ಮೊದಲಾದ ಮೌಲ್ಯಗಳನ್ನು ಅವರು ಉಳಿಸಿಕೊಂಡರು. ಈ ಗುಣ ಲಕ್ಷಣಗಳು ಉಸ್ಮಾನಿಗಳಿಗೆ ಇತರ ಆಡಳಿತ ವರ್ಗಗಳಿಗಿಂತ ಹೆಚ್ಚು ಕಾಲ ಉಳಿಯಲು ಸಹಾಯ ಮಾಡಿತು.
ಉಸ್ಮಾನಿ ಸಾಮ್ರಾಜ್ಯದ ಸ್ಥಾಪಕರಾದ ಒಂದನೇ ಉಸ್ಮಾನ್ (657/1257-726/1326), ಪುತ್ರ ಊರ್ಖಾನ್ (687/1288-761/1360)ನಿಗೆ ನೀಡಿದ ಅಂತ್ಯೋಪದೇಶದಲ್ಲಿ ಅವರ ಹಾಗೂ ಅವರು ಸ್ಥಾಪಿಸಿದ ಸಾಮ್ರಾಜ್ಯದ ವಿಶಿಷ್ಟ ಗುಣ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತದೆ.
ಒಟ್ಟೋ ಮನ್ (ಉಸ್ಮಾನಿಯಾ) ಇತಿಹಾಸಕಾರ ಆಶಿಕ್ ಚೆಲಂಬಿ ಇದನ್ನು ಹೀಗೆ ದಾಖಲಿಸಿರುವರು: “ಪ್ರೀತಿಯ ಮಗನೇ, ಅನುಯಾಯಿಗಳಿಗೆ ಸಹಾಯ ಮಾಡು, ಸೈನಿಕರೊಂದಿಗೆ ಔದಾರ್ಯವನ್ನು ತೋರಿಸಿ, ಶಕ್ತಿ ಮತ್ತು ಸಂಪತ್ತಿನಲ್ಲಿ ಶೈತಾನನು ನಿನ್ನನ್ನು ವಂಚಿಸದಿರಲಿ. ಶರೀಅತ್ ಜನರಿಂದ ದೂರವಾಗದಂತೆ ಜಾಗರೂಕತೆ ವಹಿಸು. ಮಗನೇ, ನಾವು ಅಧಿಕಾರದ ಆನಂದಕ್ಕಾಗಿ ಅಥವಾ ಯಾರಿಗಾದರೂ ಆಧಿಪತ್ಯ ದೊರೆಯಲಿ ಎಂಬುದಕ್ಕಾಗಿ ಯುದ್ಧ ಮಾಡುವವರಲ್ಲ. ನಾವು ಇಸ್ಲಾಮಿನಂತೆ ಜೀವಿಸುತ್ತೇವೆ. ಇಸ್ಲಾಮಿಗಾಗಿ ಮರಣ ಹೊಂದುತ್ತೇವೆ. ನೀನೂ ಹಾಗೆಯೇ ಇರಬೇಕು. ಮಗನೇ, ಸೃಷ್ಟಿಕರ್ತನ ಪ್ರೀತಿಯೇ ನಮ್ಮ ಗುರಿಯೆಂದು ನಿನಗೆ ತಿಳಿದಿದೆಯಲ್ಲವೇ. ಎಲ್ಲೆಡೆಯೂ ಧರ್ಮದ ಪ್ರಭೆಯು ಹರಡುತ್ತಿದೆ. ಆದ್ದರಿಂದ ಪ್ರತಾಪಶಾಲಿಯೂ ಮಹಾನನೂ ಆದ ಅಲ್ಲಾಹನಿಗೆ ತೃಪ್ತಿಯಾಗಿರುವುದನ್ನು ಮಾತ್ರ ನೀನು ಹೇಳಬೇಕು.”
ಬಗ್ದಾದ್ನ ಪತನದ ಬಳಿಕ ಎದ್ದು ನಿಂತ ಅತ್ಯಂತ ಪ್ರಬಲ ಮತ್ತು ಮುಸ್ಲಿಮ್ ಲೋಕದ ಸಂಪೂರ್ಣ ಪ್ರತಿನಿಧಿಯೆಂದು ಹೇಳಿಕೊಳ್ಳಲು ಅರ್ಹತೆಯಿರುವ ಸಾಮ್ರಾಜ್ಯ ಎಂಬ ನೆಲೆಯಲ್ಲಿ ಉಸ್ಮಾನೀ ಸಾಮ್ರಾಜ್ಯವು ಮಾನವ ಇತಿಹಾಸದ ಒಂದು ವಿಸ್ಮಯವಾಗಿದೆ. ಉಸ್ಮಾನಿ ಸಾಮ್ರಾಜ್ಯಕ್ಕೆ ಅದರ ಉತ್ಥಾನ ಕಾಲದಲ್ಲಿ ಅರಬಿಯನ್ನರ ಸಾಮ್ರಾಜ್ಯದಷ್ಟು ವಿಸ್ತಾರವಿತ್ತು. ಅದು ಭದ್ರತೆಯ ವಿಷಯದಲ್ಲಿ ಅತ್ಯಂತ ಸಶಕ್ತ ಸರ್ಕಾರವಾಗಿತ್ತು. ಇಸ್ಲಾಮೀ ಇತಿಹಾಸದ ಅತ್ಯಂತ ದೀರ್ಘಾಯುಷ್ಯವಿದ್ದ ಆಡಳಿತವೂ ಉಸ್ಮಾನಿ ಸಾಮ್ರಾಜ್ಯವಾಗಿತ್ತು. 1288ರಿಂದ 1700ರ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿಯೂ 1700 ರಿಂದ 1800ರ ವರೆಗೆ ಸಾಮಾನ್ಯವಾಗಿಯೂ, 1800ರ ಬಳಿಕ 1924ರ ವರೆಗೆ ಅವನತಿಗೊಳ್ಳುತ್ತಲೂ ಅದು ಆಡಳಿತ ನಡೆಸಿತು.
ಉಸ್ಮಾನಿ ಸಾಮ್ರಾಜ್ಯವು ಇಸ್ಲಾಮೀ ಇತಿಹಾಸದ ಹಲವು ನಿರ್ಣಾಯಕ ಸಂದರ್ಭಗಳಲ್ಲಿ ಚುಕ್ಕಾಣಿ ಹಿಡಿಯಿತು. ಅದರಲ್ಲಿ 857/1453ರ ಐತಿಹಾಸಿಕವಾದ ಕಾನ್ಸೆಟಾಂಟಿನೋಪಲ್ ವಿಜಯ ಹೆಚ್ಚು ಪ್ರಮುಖವಾಗಿದೆ. ಈ ಪಟ್ಟಣವನ್ನು ಮಣಿಸಲು ಮುಸ್ಲಿಮರು ಉಮವಿ ಖಿಲಾಫತ್ನ ಸ್ಥಾಪಕ ಅಮೀರ್ ಮುಆವಿಯಾರ ಕಾಲದಿಂದಲೇ ಪ್ರಯತ್ನ ಆರಂಭಿಸಿದ್ದರು. ಬಳಿಕ ಅರಬಿಗಳು ಮತ್ತು ತುರ್ಕಿಗಳಲ್ಲಿ ಹಲವರು ಅದಕ್ಕೆ ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. ಕೊನೆಗೆ, ಉಸ್ಮಾನಿ ಸುಲ್ತಾನ್ ಮುಹಮ್ಮದುಲ್ ಫಾತಿಹ್ ಆ ನಿರ್ಣಾಯಕವಾದ ವಿಜಯವನ್ನು ಗಳಿಸಿದರು. 54 ದಿನಗಳ ಮುತ್ತಿಗೆಯ ಬಳಿಕ 857/1453 ಮೇ 29 ರಂದು ಕಾನ್ಸ್ಟಾಂಟಿನೋಪಲ್ ಶರಣಾಯಿತು. ಹೀಗೆ ಪೌರ್ವಾತ್ಯ ರೋಮನ್ ಸಾಮ್ರಾಜ್ಯದ 1100 ವರ್ಷ ಹಳೆಯದಾದ ರಾಜಧಾನಿಯು ವಶವಾಯಿತು.
“ದೇವನು ನನಗೆ ಕೈಸರ್ ಮತ್ತು ಕಿಸ್ರಾರ ಬೀಗದ ಕೈಗಳನ್ನು ನೀಡಿರುವನು” ಎಂಬ ಪ್ರವಾದಿ(ಸ)ರ ಮಾತಿನ ಸಾಕ್ಷಾತ್ಕಾರವಾಯಿತು. ಕಾನ್ಸ್ಟಾಂಟಿನೋಪಲ್ನ್ನು ವಶಪಡಿಸುವುದರೊಂದಿಗೆ ಉಸ್ಮಾನಿ ಸಾಮ್ರಾಜ್ಯದ ಮುಖ ಚಹರೆಯೇ ಬದಲಾಯಿತು. ಅದು ಸಶಕ್ತವಾದ ಸಾಮ್ರಾಜ್ಯವಾಗಿ ಬೆಳೆಯಿತು. ವ್ಯಾಪಾರ, ರಾಜಕೀಯ ರಂಗಗಳಲ್ಲಿ ಉನ್ನತಿಗೇರಲು ಉಸ್ಮಾನಿಗಳಿಗೆ ಸಾಧ್ಯವಾಯಿತು. ಯುರೋಪ್ ಮತ್ತು ಪರಿಸರ ಪ್ರದೇಶಗಳ ಹಲವಾರು ನಾಡುಗಳು ಅವರ ವಶವಾದವು.
ಸಮರ್ಥರೂ, ಆಡಳಿತ ನಿಪುಣರೂ ಆದ ಹಲವಾರು ಖಲೀಫರು ಉಸ್ಮಾನಿ ಸಾಮ್ರಾಜ್ಯದಲ್ಲಿದ್ದರು. ಎರಡನೇ ಮುಹಮ್ಮದ್ (ಅಲ್ ಫಾತಿಹ್: 1451-1481), ದ್ವಿತೀಯ ಬಾಯಸೀದ್ (1481-1512)ರ ಮಗ ಒಂದನೇ ಸಲೀಮ್ (1512-1520), ಸುಲೈಮಾನ್ ಅಲ್ಖಾನೂನಿ (1520- 1566), ದ್ವಿತೀಯ ಸಲೀಮ್ (1566-1574), ಮೂರನೇ ಮುರಾದ್ (1574-1595), ಮೂರನೇ ಮುಹಮ್ಮದ್ (1595-1603), ಒಂದನೇ ಅಹ್ಸದ್ (1603-1617) ಮುಂತಾದವರು ಅವರಲ್ಲಿ ಪ್ರಮುಖರು. ಯುರೋಪ್ನ ಭಾಗವಾಗಿರುವ ಬೋಸ್ನಿಯಾ, ಕೊಸೋವೋ, ಅಲ್ಬೇನಿಯಾ ಮುಂತಾದ ಪ್ರದೇಶಗಳಲ್ಲಿ ಇಸ್ಲಾಮಿನ ಪ್ರಚಾರವಾದದ್ದು ತುರ್ಕಿಯನ್ನರ ಆಡಳಿತ ಕಾಲದಲ್ಲಾಗಿತ್ತು.
ಫೆಲೆಸ್ತೀನ್ ಉಸ್ಮಾನಿಗಳ ಅಧೀನದಲ್ಲಿ
ಇಸ್ಲಾಮಿನ ಪ್ರಥಮ ಕಿಬ್ಲಾ ಬೈತುಲ್ ಮುಕದ್ದಿಸ್ ಸೇರಿದಂತೆ ಫೆಲೆಸ್ತೀನ್ನ ಪ್ರದೇಶವು ಉಸ್ಮಾನಿ ಖಿಲಾಫತ್ನ ಅಧೀನಕ್ಕೆ ಸುಲ್ತಾನ್ ಒಂದನೇ ಸಲೀಮ್ (875/1470-926/1520) ಕಾಲದಲ್ಲಿ ಬಂತು. 922 ರಜಬ್ 25/1516 ಆಗಸ್ಟ್ 24ಕ್ಕೆ ಮರ್ಜ್ ದಾಬಿಖ್ನಲ್ಲಿ ನಡೆದ ಯುದ್ಧದಲ್ಲಿ ಉಸ್ಮಾನಿ ಸೈನ್ಯವು ಮಂಲೂಕ್ಗಳನ್ನು ಸೋಲಿಸಿ, ಸಿರಿಯಾ, ಈಜಿಪ್ಟ್, ಫೆಲೆಸ್ತೀನ್ ಪ್ರದೇಶಗಳಲ್ಲಿ ವಿಜಯ ಹೊಂದಿತು. ಕೈರೋದಲ್ಲಿ ಮಕ್ಕಾದ ಕಅಬಾದ ಬೀಗದ ಕೈಯನ್ನು ಸುಲ್ತಾನ್ ಸಲೀಮ್ರಿಗೆ ನೀಡಲಾಯಿತು. ಖಾದಿಮುಲ್ ಹರಮೈನ್ ಎಂಬ ಹೆಸರಿಗೆ ಸುಲ್ತಾನ್ ಸಲೀಂ ಭಾಜನರಾದರು. ಈಜಿಪ್ಟ್ ನಲ್ಲಿದ್ದ ಕೊನೆಯ ಅಬ್ಬಾಸಿ ಖಲೀಫಾ ಅಲ್ ಮುತವಕ್ಕಿಲ್ ಅಲಲ್ಲಾ, ಸುಲ್ತಾನ್ ಸಲೀಮ್ರಿಗೆ ಖಿಲಾಫತ್ ಅನ್ನು ವಹಿಸಿದರು. ಇದರೊಂದಿಗೆ ಅವರು ಜಾಗತಿಕ ಮುಸ್ಲಿಮರ ಖಲೀಫಾ ಮತ್ತು ಇಸ್ಲಾಮೀ ಲೋಕದ ನಾಯಕರಾಗಿ ಅಂಗೀಕರಿಸಲ್ಪಟ್ಟರು.
ಅವರ ಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯವು ಪರ್ಶಿಯನ್ ಸಮುದ್ರದಿಂದ ಕಾಸ್ಪಯನ್ ಸಮುದ್ರದವರೆಗೂ, ಯುಪ್ರೆಟಿಸ್ ನದಿಯಿಂದ ಮಾವಶಾಅನ್ನಹ್ರ್ನವರೆಗೆ ವ್ಯಾಪಿಸಿತ್ತು. 1516 ರಿಂದ ಸುದೀರ್ಘ ನಾಲ್ಕು ಶತಮಾನಗಳ ಕಾಲ ಆ ಪವಿತ್ರ ಭೂಮಿಯನ್ನು ಅವರು ಕಾಪಾಡಿದರು. ಉಸ್ಮಾನಿ ಸಾಮ್ರಾಜ್ಯದ ಪರಿಧಿಯಲ್ಲಿ ಅರಬ್ ರಾಜ್ಯಗಳು ಪ್ರವೇಶಿಸುವುದರೊಂದಿಗೆ ಫೆಲೆಸ್ತೀನ್ ಸಮಸ್ಯೆಯೊಂದಿಗಿನ ಅವರ ಸಂಬಂಧ ಆರಂಭಗೊಂಡಿತೆಂದು ಹೇಳಬಹುದು. ಫೆಲೆಸ್ತೀನ್ನ ವಿಷಯದಲ್ಲಿ ಉಸ್ಮಾನಿ ತುರ್ಕಿಗಳು ವಹಿಸಿದ ಪಾತ್ರವು ಸೂಕ್ತ ಪರಿಗಣನೆಯೊಂದಿಗೆ ಇತಿಹಾಸದಲ್ಲಿ ವಿವರಿಸಲಾಗಿಲ್ಲವೆಂಬುದು ಒಂದು ವಾಸ್ತವಿಕತೆಯಾಗಿದೆ.
ಉಸ್ಮಾನಿ ಇತಿಹಾಸದ ವಿಶೇಷ ಅಧ್ಯಯನ ನಡೆಸಿದ ಇಸ್ತಾಂಬುಲ್ನ ಸಹಾಬುದ್ದೀನ್ ಸಈಮ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಮುಹಮ್ಮದ್ ಹರ್ಬ್ (ಜನನ- 1941) ಈ ವಿಷಯದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಅರಬಿ ಸಂಶೋಧಕರೂ, ಅರಬ್ ಜಗತ್ತಿನಲ್ಲಿ ಉಸ್ಮಾನಿಗಳ ಕುರಿತು ಅಧ್ಯಯನಕ್ಕೆ ನಾಂದಿ ಹಾಕಿದವರೆಂದೂ ಗುರುತಿಸಲ್ಪಡುತ್ತಾರೆ.
ಜೋರ್ಡಾನಿಯನ್ ಚಿಂತಕರೂ, ಗ್ರಂಥಕರ್ತರೂ, ಪತ್ರಕರ್ತರೂ ಆದ ಝಿಯಾದ್ ಮೆಹ್ಮೂದ್ ಅಬೂ ಗನೀಮ (1937-2015) ಮೊದಲಾದವರು ಈ ವಿಷಯದಲ್ಲಿ ಮಹತ್ವಪೂರ್ಣವಾದ ವಿವರಗಳನ್ನು ಹೊರತಂದಿದ್ದಾರೆ.
ಅಬೂ ಗನೀಮ ಬರೆಯುತ್ತಾರೆ: “ಅರಬ್- ಮುಸ್ಲಿಮ್ ಇತಿಹಾಸಕಾರರು ಅಥವಾ ಪಾಶ್ಚಾತ್ಯ ಇತಿಹಾಸಕಾರರು ಒಮ್ಮೆಯೂ ಫೆಲೆಸ್ತೀನಿ ಸಮಸ್ಯೆಯಲ್ಲಿ ಉಸ್ಮಾನಿಗಳ ಪಾತ್ರ ಕುರಿತು ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತವಾಗಿ ವಿವರಿಸಿಲ್ಲ. ವಿಶೇಷವಾಗಿ ಯಹೂದಿಯರಿಂದಲೂ ಯಹೂದಿಯರಿಂದ ಪ್ರಭಾವಿತರಾದವರಿಂದಲೂ ಅದು ಆಗಲಿಲ್ಲ. ಮಾತ್ರವಲ್ಲ, ಪಾಶ್ಚಾತ್ಯ ಚರಿತ್ರೆಗಾರರಲ್ಲಿ ಹೆಚ್ಚಿನವರು ತುರ್ಕಿಗಳ ಪಾತ್ರವನ್ನು ಮರೆಮಾಚಲು ಪ್ರಯತ್ನಿಸಿದರು. ಅರಬ್ ಜನತೆಯೊಂದಿಗೆ ಸೌಹಾರ್ದತೆಯಿಂದ ಬಾಳಲು ಶ್ರಮಿಸಿದ ತುರ್ಕಿಗಳ ಕ್ರಿಯಾತ್ಮಕ ನಿಲುವುಗಳು, ಯಹೂದಿಯರನ್ನೂ ಅವರ ಸಂರಕ್ಷಕರನ್ನೂ ಬಹಳವಾಗಿ ಬೆವರಿಳಿಸಿತ್ತು. ಎರಡು ವಿಭಾಗವನ್ನು ತಮ್ಮಿಂದ ದೂರವಿರಿಸಲು ಶ್ರಮಿಸಿದವರು ತುರ್ಕಿ ಮತ್ತು ಅರಬಿಗಳು ತಮ್ಮೊಂದಿಗಿರುವ ಗೆಳೆತನವನ್ನು ಮರೆಮಾಚಲು ಪ್ರಯತ್ನಿಸಿದರು.
[ಮುಂದುವರಿಯುವುದು]












