ನವದೆಹಲಿ: ಚೀನಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಮೇಲೆ ಮುಂದಿನ ಮೂರು ತಿಂಗಳ ವರೆಗೆ ಭಾರತ ಸರ್ಕಾರ ನಿಷೇಧ ಹೇರಿದ್ದು, ಆಮದು ನಿಷೇಧಕ್ಕೆ ಒಳಪಟ್ಟಿರುವ ಹಾಲಿನ ಉತ್ಪನ್ನಗಳಲ್ಲಿ ಚಾಕೊಲೇಟ್ಗಳು, ಕ್ಯಾಂಡಿಗಳು, ಕನ್ಫೆಕ್ಷನರಿ ಮತ್ತಿತರ ಪದಾರ್ಥಗಳು ಸೇರಿವೆ.
ಚೀನಾದಿಂದ ಆಮದಾಗುವ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ನಿರ್ಬಂಧಗಳನ್ನು ಹೇರುವ ಮುನ್ನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಂಬಂಧಿಸಿದ ಇಲಾಖೆಯೊಂದಿಗೆ ಸಭೆ ನಡೆಸಿರುವುದಾಗಿ ಎವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ತಿಳಿಸಿದೆ.
ಚೀನಾದಿಂದ ಆಮದಾಗುತ್ತಿದ್ದ ಹಾಲಿನ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್ ಹಾಗೂ ರಸಗೊಬ್ಬರಗಳ ತಯಾರಿಕೆಗೆ ಬಳಸುವ ಮೆಲಾಮೈನ್ ಎಂಬ ಹಾನಿಕಾರಕ ರಾಸಾಯನಿಕ ಅಂಶ ಕಂಡು ಬಂದಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನಿಷೇಧ ಹೇರಿದೆ. ನಿಷೇಧವು ಬುಧವಾರ ಸಂಜೆಯಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ವಿದೇಶಾಂಗ ವಾಣಿಜ್ಯ ವಹಿವಾಟು ಮಹಾ ನಿರ್ದೇಶನಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2008ರ ಅಕ್ಟೋಬರ್ 24ರಂದು ಚೀನಾದಿಂದ ಆಮದಾಗುವ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಮೆಲಾಮೈನ್ ಕಂಡು ಬಂದ ಹಿನ್ನೆಲೆಯಲ್ಲಿ ಭಾರತ ಮೊದಲ ಬಾರಿಗೆ ನಿಷೇಧ ಹೇರಿತ್ತು. ಹಾಲಿನ ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು 2018ರ ಡಿಸೆಂಬರ್ 24ರಂದು ಮಾರ್ಪಾಡು ಮಾಡಲಾಗಿತ್ತು. ಇದು ಏಪ್ರಿಲ್ 23ಕ್ಕೆ ಕೊನೆಗೊಂಡಿತ್ತು.












