ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕನಾಗಿಸಿದ್ದು ಅಮೆರಿಕದ ರಾಜತಾಂತ್ರಿಕ ವಿಜಯ- ಮೈಕ್ ಪೊಂಪಿಯೊ

0
514

ವಾಷಿಂಗ್ಟನ್,ಮೇ 2: ಜೈಷೆ ಮುಹಮ್ಮದ್ ಭಯೋತ್ಪಾದಕ ಮಸೂದ್ ಅಝರ್‍ನನ್ನು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕನೆಂದು ಘೋಷಿಸಿರುವುದು ಅಮೆರಿಕದ ರಾಜತಾಂತ್ರಿಕ ವಿಜಯ ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದರು. ವಿಶ್ವಸಂಸ್ಥೆಯ ಕ್ರಮವನ್ನು ಸ್ವಾಗತಿಸಿ ಅವರು ಟ್ವಿಟರ್‍ನಲ್ಲಿ ಪೋಸ್ಟ್ ಹಾಕಿದ್ದು ಅಮೆರಿಕದ ಪ್ರತಿನಿಧಿ ತಂಡವನ್ನು ಅವರು ಅಭಿನಂದಿಸಿದ್ದಾರೆ.

ಮಸೂದ್ ಅಝರ್‍ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿದ ವಿಶ್ವಸಂಸ್ಥೆಯ ಕ್ರಮಕ್ಕಾಗಿ ಕಾರ್ಯವೆಸಗಿದ ಅಮೆರಿಕದ ಪ್ರತಿನಿಧಿಗಳಿಗೆ ಅಭಿನಂದನೆಗಳು. ತುಂಬ ಸಮಯದಿಂದ ಈ ಕ್ರಮಕ್ಕಾಗಿ ಕಾದಿದ್ದೆವು. ಇದು ಭಯೋತ್ಪಾದನೆಯ ವಿರುದ್ಧ ಅಮೆರಿಕದ ರಾಜತಾಂತ್ರಿಕ ಮತ್ತು ಜಾಗತಿಕ ಸಮೂಹದ ವಿಜಯವಾಗಿದೆ. ಮಾತ್ರವಲ್ಲ ದಕ್ಷಿಣ ಏಷ್ಯದಲ್ಲಿನ ಶಾಂತಿ ಸ್ಥಾಪನೆಯತ್ತ ಇಟ್ಟಿರುವ ಪ್ರಥಮ ಹೆಜ್ಜೆಯೆಂದು ಪೊಂಪಿಯೊ ಬಣ್ಣಿಸಿದ್ದಾರೆ.
ಜೈಷೆ ಮುಹಮ್ಮದ್ ಮುಖ್ಯಸ್ಥನನ್ನು ಬ್ಲಾಕ್ ಲಿಸ್ಟ್‌ಗೆ ಸೇರ್ಪಡೆ ಮಾಡಿದ್ದು ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಕಿತ್ತೆಸೆಯುವ ಅಂತಾರಾಷ್ಟ್ರೀಯ ಸಮೂಹದ ಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತಿದೆ. ಹತ್ತು ವರ್ಷಗಳ ಬಳಿಕ ಚೀನ ನೈಜಪ್ರಜ್ಞೆಯಲ್ಲಿ ಕೆಲಸ ಮಾಡಿತು ಎಂದು ವೈಟ್ ಹೌಸ್ ಪ್ರತಿಕ್ರಿಯಿಸಿದೆ

ಭಾರತದ ಪುಲ್ವಾಮ ಭಯೋತ್ಪಾದನಾ ದಾಳಿಯ ಬಳಿಕ ಪುನಃ ಅಮೆರಿಕ,ಫ್ರಾನ್ಸ್, ಇಂಗ್ಲೆಂಡ್, ರಷ್ಯದ ಬೆಂಬಲದಲ್ಲಿ ಮಸೂದ್‍ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂದು ಪ್ರಸ್ತಾವ ಮಂಡಿಸಲಾಗಿತ್ತು. ಇದನ್ನು ಆಗ ಚೀನವಿರೋಧಿಸಿತ್ತು. ಹೆಚ್ಚು ಅಧ್ಯಯನ ಮಾಡಿದ ಬಳಿಕ ತೀರ್ಮಾನಿಸಬೇಕೆಂದು ಚೀನಾ ಹೇಳಿತ್ತು. ಆದರೆ ಕೊನೆಗೆ ಚೀನ ತನ್ನ ವಿರೋಧವನ್ನು ಹಿಂಪಡೆಯಿತು. ವಿಷಯವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ಬಳಿಕ ಮಸೂದ್ ಅಝರ್‍ನನ್ನು ಭಯೋತ್ಪಾದಕ ಎಂದು ಘೋಷಿಸುವುದನ್ನು ವಿರೋಧಿಸುವುದಿಲ್ಲ ಎಂದು ಚೀನಾ ತಿಳಿಸಿತು.