ಕಣ್ಣೂರ್,ಮೇ 2: ಲೋಕಸಭಾ ಚುನಾವಣೆಯಲ್ಲಿ ಕಣ್ಣೂರಿನ ಪಿಲಾತ್ತರದಲ್ಲಿ ನಕಲಿ ಮತದಾನ ಮಾಡಿದ ಘಟನೆಯಲ್ಲಿ ಸಿಪಿಎಂ ಗ್ರಾಮಪಂಚಾಯತ್ ಸದಸ್ಯೆ ಸಹಿತ ಮೂವರ ವಿರುದ್ಧ ಕೇಸು ದಾಖಲಾಗಿದೆ. ಪಂಚಾಯತ್ ಸದಸ್ಯೆ ಸಲೀನಾ, ಕೆ.ಪಿ ಸುಮಯ್ಯಾ, ಪದ್ಮಿನಿ ಎಂಬವರ ವಿರುದ್ಧ ಪರಿಯಾರಂ ಪೊಲೀಸರು ಕೇಸು ದಾಖಲಿಸಿದ್ದು ಮೂವರು ನಕಲಿ ಮತದಾನ ಮಾಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ದೃಢಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು, ಕಣ್ಣೂರ್ ಜಿಲ್ಲೆಯಲ್ಲಿ ನಕಲಿ ಮತದಾನ ನಡೆದಿರುವ ವೀಡಿಯೊ ದೃಶ್ಯಗಳನ್ನು ಕಾಂಗ್ರೆಸ್ ಹೊರಬಿಟ್ಟಿತ್ತು. ಕಾಸರಗೋಡು ಪಾರ್ಲಿಮೆಂಟ್ ಕ್ಷೇತ್ರದ ಕಣ್ಣೂರ್ ಚೆರುತಾಯಂ ಗ್ರಾಮಪಂಚಾಯತ್ನ ಪಿಲಾತ್ತರ ಎಯುಪಿ ಸ್ಕೂಲ್ 19ನೆ ನಂಬರಿನ ಬೂತ್ನಲ್ಲಿ ನಕಲಿ ಮತದಾನ ನಡೆದ ದೃಶ್ಯಗಳು ಬಹಿರಂಗವಾಗಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದ ಕಯ್ಯೂರ್ ಚೀಮೇನಿ ಪಂಚಾಯತ್ನ ಕುಳಿಯಾಡ್ ಸರಕಾರಿ ಹೈಸ್ಕೂಲ್ 48ನೆ ಬೂತ್ನಲ್ಲಿ ನಕಲಿ ಮತದಾನದ ವೀಡಿಯೊ ದೃಶ್ಯಗಳನ್ನು ಮಾಧ್ಯಮಗಳು ಹೊರಬಿಟ್ಟಿದ್ದವು.
ಬೇರೆ ವ್ಯಕ್ತಿ, ಬೇರೆ ಮತಗಟ್ಟೆ, ನಕಲಿ ಗುರುತು ಚೀಟಿ ಉಪಯೋಗಿಸಿ ಮತದಾನ ಮಾಡುತ್ತಿರುವ ದೃಶ್ಯಗಳು ಬಹಿರಂಗವಾಗಿವೆ. ಚುನಾವಣಾ ಆಯೋಗ ಸ್ಥಾಪಿಸಿದ ವೆಬ್ಕಾಸ್ಟಿಂಗ್ನ ದೃಶ್ಯಗಳೇ ಬಹಿರಂಗಗೊಂಡಿದ್ದು ಘಟನೆಯ ಗಂಭೀರತೆ ಇನ್ನಷ್ಟು ಹೆಚ್ಚಲು ಕಾರಣವಾಗಿತ್ತು. ಅರ್ಧ ಗಂಟೆಯಲ್ಲಿ ಮಹಿಳೆ ಓರ್ವಳೇ ಎರಡು ಬಾರಿ ಮತದಾನ ಮಾಡುವ ದೃಶ್ಯಗಳಿವೆ. 19ನೆ ಮತಗಟ್ಟೆಯ 774 ನಂಬರ್ ಮತದಾರಳಾದ ಪದ್ಮಿನಿ ಅರ್ಧಗಂಟೆಯೊಳಗೆ ಎರಡು ಬಾರಿ ಮತದಾನ ಮಾಡಿದ್ದಾರೆ.












