ಇಸ್ರತ್ ಜಹಾನ್ ಎನ್‍ಕೌಂಟರ್ ಪ್ರಕರಣ: ಡಿಐಜಿ ವಂಜಾರ, ಎನ್.ಕೆ. ಅಮೀನ್ ಖುಲಾಸೆ

0
557

ಹೊಸದಿಲ್ಲಿ,ಮೇ 2: ಇಸ್ರತ್ ಜಹಾನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಮಾಜಿ ಗುಜರಾತ್ ಪೊಲೀಸಧಿಕಾರಿ ಡಿಐಜಿ ವಂಜಾರ, ಎನ್.ಕೆ. ಅಮೀನ್‍ರ ವಿರುದ್ಧ ಆರೋಪಗಳನ್ನು ಕೋರ್ಟು ರದ್ದು ಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಎಲ್ಲ ಶಿಕ್ಷಾ ಕ್ರಮಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಸಿಬಿಐ ಕೋರ್ಟು ತನ್ನ ಆದೇಶದಲ್ಲಿ ತಿಳಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ಡಿಐಜಿ ವಂಜಾರ, ಎಸ್ಪಿ ಅಮೀನ್ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಕೋರ್ಟು ಆದೇಶ ಹೊರಡಿಸಿದೆ.

ಗುಜರಾತ್ ಭಯೋತ್ಪಾದನಾ ವಿರೋಧಿ ಸ್ಕ್ವಾಡ್ ಮುಖ್ಯಸ್ಥರಾಗಿದ್ದ ವಂಜಾರ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಎನ್.ಕೆ. ಅಮೀನ್, ಇಬ್ಬರನ್ನೂ ವಿಚಾರಣೆಗೆ ಗುರಿಪಡಿಸಲು ಗುಜರಾತ್ ಸರಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಕೋರ್ಟು ಕೇಸನ್ನು ರದ್ದು ಪಡಿಸಿದೆ. ಇದೇ ವೇಳೆ ವಂಜಾರ ಮತ್ತು ಅಮೀನ್‍ರನ್ನು ಆರೋಪ ಮುಕ್ತಗೊಳಿಸಿದ್ದು ನ್ಯಾಯಕ್ಕೆ ವಿರುದ್ಧವಾಗಿದ್ದು ಸತ್ಯ ಸ್ಥಿತಿಯನ್ನು ಮರೆಮಾಚಲಾಗಿದೆ ಎಂದು ಇಸ್ರತ್ ಜಹಾನ್ ತಾಯಿ ಶಮೀಮಾ ಕೌಸರ್ ಕೋರ್ಟಿನಲ್ಲಿ ವಾದಿಸಿದರು. ಆದರೆ ಈ ವಾದವನ್ನು ಕೋರ್ಟು ಪುರಸ್ಕರಿಸಿಲ್ಲ. 2004ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ನಕಲಿ ಎನ್‍ಕೌಂಟರ್ ಮೂಲಕ ಇಸ್ರತ್ ಜಹಾನ್, ಜಾವೇದ್ ಶೇಖ್ ಯಾನೆ ಪ್ರಾಣೇಶ್ ಪಿಳ್ಳೆ, ಅಂಜದ್ ಅಕ್ಬರಲಿ ರಾಣ, ನಿಶಾನ್ ಜೊಹರ್‍ರನ್ನು ಅಹ್ಮದಾಬಾದ್‍ನಲ್ಲಿ ಎನ್‍ಕೌಂಟರ್ ನಡೆಸಲಾಗಿತ್ತು.