ಅಮೇರಿಕಾದ ಫೋನಿಕ್ಸ್ ಆರಿಜೋನಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಎರಡನೇ ಬಾರಿಗೆ ಭಾರತವನ್ನು ಪ್ರತಿನಿಧಿಸಲು ಯುವ ವಿಜ್ಞಾನಿ ಸಿ.ಎಸ್. ಮೊಹಮ್ಮದ್ ಸುಹೇಲ್ ಅವರು ಮೇ 9 ರಂದು ದೆಹಲಿಯಿಂದ ಅಮೇರಿಕಾಕ್ಕೆ ತೆರಳುತ್ತಿದ್ದಾರೆ. ನಾಗಮಂಗಲ ತಾಲ್ಲೂಕಿನ ಚಿಣ್ಯ ಗ್ರಾಮದ ಶ್ರೀರಂಗಪಟ್ಟಣದಲ್ಲಿ ನೆಲೆಸಿರುವ ಸಾಹಿತ್ಯ ದಂಪತಿಗಳಾದ ಅನಾರ್ಕಲಿ ಸಲೀಂ ಚಿಣ್ಯ ಮತ್ತು ಡಾ. ಪರ್ವೀನ್ ಸಲೀಂ ಅವರ ಪುತ್ರ ಇವರು.
18 ವರ್ಷದ ಸುಹೇಲ್ ಗೆ ಇತ್ತೀಚೆಗಷ್ಟೇ 2018 ನೇ ಸಾಲಿನ ಅನ್ವೇಷಣಾ ವಿಭಾಗದಲ್ಲಿ ಪ್ರಧಾನ ಮಂತ್ರಿ ಬಾಲ ಶಕ್ತಿ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ನವದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಳೆದ ಜನವರಿ 22 ರಂದು ಮಾನ್ಯ ರಾಷ್ಟ್ರಪತಿಗಳು ಮೊಹಮ್ಮದ್ ಸುಹೇಲ್ ಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮೊದಲಿಗನಾಗಿ ಪ್ರಶಸ್ತಿ ಸ್ವೀಕರಿಸಿ ರಾಷ್ಟ್ರಪತಿಗಳ ಪ್ರಶಂಸೆಗೆ ಪಾತ್ರವಾದ ಸುಹೇಲ್ ಗೆ ಒಂದು ಲಕ್ಷ ನಗದು, ಹತ್ತು ಸಾವಿರ ರೂನ ಪುಸ್ತಕಗಳು, ಚಿನ್ನದ ಪದಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿತ್ತು.
ಜನವರಿ 24 ರಂದು ಮಾನ್ಯ ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಸಂವಾದದಲ್ಲಿ ಭಾಗಿಯಾದ ಸುಹೇಲ್ ಗೆ ಅಮೂಲ್ಯ ನೆನಪಿನ ಉಡುಗೊರೆ ನೀಡಿ ಪ್ರಧಾನಿಗಳು ಪ್ರಶಂಸಿಸಿದರು.
ಜನವರಿ 26 ರಂದು ದೆಹಲಿಯ ಇಂಡಿಯಾ ಗೇಟ್ ನ ರಾಜ್ ಪಥ್ ನಲ್ಲಿ ನಡೆದ 70 ನೇ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಸದಾವಕಾಶವನ್ನು ಸಹ ಸುಹೇಲ್ ಗೆ ಕಲ್ಪಿಸಲಾಗಿತ್ತು.
ಎರಡು ಬಾರಿ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿರುವ ಸುಹೇಲ್, ಕ.ರಾ.ವಿ.ಪ ಮೂಲಕ ಎರಡು ಬಾರಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ವಿಜ್ಞಾನ ಸಮಾವೇಶದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಅವರು ಗಳಿಸಿರುವ 400 ಕ್ಕೂ ಹೆಚ್ಚು ಪ್ರಶಸ್ತಿಗಳಲ್ಲಿ 25 ಕ್ಕೂ ಹೆಚ್ಚು ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯ ಪ್ರಶಸ್ತಿಗಳಿರುವುದು ವಿಶೇಷವಾಗಿದೆ.
2018 ರ ಮೇ ಮಾಹೆಯಲ್ಲಿ ಅಮೆರಿಕಾದ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಮಂಗಳೂರು ಸಮೀಪದ ವಿವೇಕಾನಂದ ಕಾಲೇಜಿನ ಸ್ವಸ್ತಿಕ್ ಪದ್ಮ ಎಂಬ ವಿದ್ಯಾರ್ಥಿಯ ಜೊತೆ ಭಾರತವನ್ನು ಪ್ರತಿನಿಧಿಸಿ “ಅಪೌಷ್ಟಿಕತೆ”ಗೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನಾ ಪ್ರಬಂಧ ಮಂಡಿಸಿ ಎರಡನೇ ಗ್ರಾಂಡ್ ವಾರ್ಡ್ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ಸುಹೇಲ್ ಅವರ ಸಾಧನೆಗೆ ಅಮೇರಿಕದ ಪ್ರತಿಷ್ಠಿತ ಸಾಮ್ ವಿದ್ ಶಿಕ್ಷಣ ಸಂಸ್ಥೆಯು ಖ್ಯಾತ ವಿಜ್ಞಾನಿ ದಿ. ಎ.ಪಿ.ಜೆ ಅಬ್ದುಲ್ ಕಲಾಂ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಸಂಶೋಧನಾ ಪ್ರಬಂಧಕ್ಕೆ ನಾಲ್ಕು ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ.
ಸಿ.ಎಸ್ ಸುಹೇಲ್ ಹೆಸರನ್ನು ಮೈನರ್ ಪ್ಲಾನೆಟ್ ಗೆ ಇಡಲಾಗಿದ್ದು, ಇದು ಇವರ ಸಾಧನೆಗೆ ಸಿಕ್ಕ ಬಹು ದೊಡ್ಡ ಮಾನ್ಯತೆಯಾಗಿದೆ.
ರಾಜ್ಯ ಅಸಾಧಾರಣ ಪ್ರತಿಭಾ ಪ್ರಶಸ್ತಿ , ರಾಜ್ಯ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ರೋಟರಿ ವಿಜ್ಞಾನಿ, ಕಲಾಶ್ರೀ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು 18 ವರ್ಷ ತುಂಬುವ ಮೊದಲೇ ಪಡೆದಿರುವ ಮೊಹಮ್ನದ್ ಸುಹೇಲ್ ಈಗ 2019 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಹೊಸ ಎತ್ತರಕ್ಕೆ ಏರಿದ್ದಾರೆ.
2013 ಮತ್ತು 2018 ರಲ್ಲಿ ಎರಡು ಬಾರಿ ರಾಜ್ಯವಯುವ ವಿಜ್ಞಾನಿ ಪ್ರಶಸ್ತಿ, 2017 ಮತ್ತು 2018 ರಲ್ಲಿ ಸತತವಾಗಿ ಎರಡು ಬಾರಿ ಐರಿಸ್ ರಾಷ್ಟ್ರೀಯ ಗ್ರಾಂಡ್ ಅವಾರ್ಡ್, 2018 ರ ಜಿಗ್ನಾಸಾ ವಿಶೇಷ ರಾಷ್ಟ್ರೀಯ ಪ್ರಶಸ್ತಿ, 2018 ರ ಅಗಸ್ತ್ಯ ರಾಷ್ಟೀಯ ಪ್ರಶಸ್ತಿ , 2015 ರ ಚಂದನ ದೂರದರ್ಶನ ರಾಜ್ಯ ಮಟ್ಟದ ವಿಜ್ಞಾನ ಥಟ್ ಅಂತ ಹೇಳಿ ಕಾರ್ಯಕ್ರಮದ ಪ್ರಥಮ ಬಹುಮಾನ ಪಡೆದಿರುವ ಸುಹೇಲ್ ಅವರನ್ನು ನೋಬೆಲ್ ಪ್ರಶಸ್ತಿ ಪುರಸ್ಕೃತ ಶ್ರೀ ಕೈಲಾಶ್ ಸತ್ಯಾರ್ಥಿ ಅವರು ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ಇಂಡಿಯನ್ ಸೈನ್ಸ್ ಕಾಂಗ್ರೇಸ್ ಸಮಾವೇಶದಲ್ಲಿ ಪ್ರಶಂಸಿಸಿದ್ದಾರೆ.

ಇವರ ಎರಡು ಸಂಶೋಧನೆಗಳಿಗೆ ಪೇಟೆಂಟ್ ಕೂಡ ದೊರೆಯುತ್ತಿದ್ದು, ಕೇಂದ್ರ ಸರ್ಕಾರದ ” ಪೋಷಣ್ ಅಭಿಯಾನ್” ಕಾರ್ಯಕ್ರಮಕ್ಕೆ ಅತ್ಯಂತ ಕಿರಿಯ ವಯಸ್ಸಿನಲ್ಲೇ ” ರಾಷ್ಟ್ರೀಯ ಆರೋಗ್ಯ ಸಲಹೆಗಾರರಾಗಿ” ನೇಮಿಸುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಸುಹೇಲ್ ನ ಈ ಎಲ್ಲ ಸಾಧನೆಗಳಿಗೆ ಮಾರ್ಗದರ್ಶಕಿಯಾಗಿ, ಪ್ರೇರಕಿಯಾಗಿ, ಸ್ಪೂರ್ತಿಯಾಗಿ ನಿಂತಿರುವ ಶಕ್ತಿಯೆಂದರೆ ತಾಯಿ ಹಾಗೂ ಸರ್ಕಾರಿ ಪ್ರೌಢಶಾಲಾ ಕನ್ನಡ ಅಧ್ಯಾಪಕಿ, ಕವಯತ್ರಿ ಡಾ.ಪರ್ವೀನ್ ಸಲೀಂ ಅವರು. ಇವರು ಮೂಲ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಎಂಬುದು ವಿಶೇಷ. ಡಾ. ಪರ್ವೀನ್ ಅವರು ಉಳ್ಳಾಲ ಸಮೀಪದ ಪಂಡಿತ್ ಹೌಸ್ ನವರು.
ಸುಹೇಲ್ ಅವರ ಪ್ರಾಥಮಿಕ ,ಪ್ರೌಢಶಾಲಾ ಶಿಕ್ಷಣ ಹಾಗೂ ಪ್ರಥಮ ಪಿಯುಸಿ ಶಿಕ್ಷಣವು ಶ್ರೀರಂಗಪಟ್ಟಣದಲ್ಲೇ ನಡೆದಿದ್ದು, ಮಂಗಳೂರಿನ ಸೆಂಟ್ ಅಲೋಷಿಯಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಗೆ ಸೇರಿದ್ದರೂ ಕಳೆದ ವರ್ಷ ಮತ್ತು ಈ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಸದಾವಕಾಶ ದೊರೆತ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ.
ಮಂಗಳೂರಿನ ಸಿ ಫಾಲ್ ಲರ್ನಿಂಗ್ ಸಂಸ್ಥೆ ಮತ್ತು ಕಣಚೂರು ಮೆಡಿಕಲ್ ಸೈನ್ಸ್ ನ ಡಾ.ರೋಹನ್ ,ಯೆನೆಪೋಯ ವಿವಿಯ ಡಾ.ಸಿಂಧುಪ್ರಿಯ, ಡಾ.ರೇಖಾ ಪಿಡಿ, ಡಾ.ಸುಧಾಕರ್ ಪ್ರಸಾದ್, ಸೋನಿಯಾ ಜೋಸೆಫ್ ಮತ್ತು ಪುಣೆ ಐಐ ಎಸ್ ಇಆರ್ ನ ಡಾ.ಶ್ರೀನಿವಾಸ್ ಹೋತಾ, ಕರಾವಿಪದ ಕೃಷ್ಣೇಗೌಡ ರವರ ಸಹಕಾರವನ್ನು ಮರೆಯಲಾಗದು ಎನ್ನುತ್ತಾರೆ ಸುಹೇಲ್.












