ಅಬುಧಾಬಿ,ಮೇ 3: ಅನುಗ್ರಹ, ಕರುಣೆಯ ಕಾಲವದ ರಮಝಾನ್ನ್ನು ಸ್ವಾಗತಿಸಲು ಜಗತ್ತು ಸಜ್ಜಾಗುತ್ತಿದ್ದು ಸಾವಿರಾರು ಕೈದಿಗಳನ್ನು ಬಿಡುಗಡೆಗೊಳಿಸಲು ಯುಎಇ ತೀರ್ಮಾನಿಸಿದೆ. ಅಧ್ಯಕ್ಷ ಶೇಖ್ ಖಲೀಫ ಮತ್ತು ಶಾರ್ಜ, ರಾಸಲ್ಕೈಮ, ಉಮ್ಮುಲ್ ಕುವೈನ್ ಆಡಳಿತಗಾರರು ಕೈದಿಗಳ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ. ವಿವಿಧ ಜೈಲುಗಳಲ್ಲಿ ವಿವಿಧ ಅಪರಾಧಗಳಲ್ಲಿ ಶಿಕ್ಷೆಗೊಳಗಾಗಿರುವ 3005 ಕೈದಿಗಳನ್ನು ಬಿಡುಗಡೆಗೊಳಿಸಿ ಅವರ ಆರ್ಥಿಕ ಹೊಣೆಗಾರಿಕೆಯನ್ನು ಈಡೇರಿಸಲಾಗುವುದು ಎಂದು ಶೇಖ್ ಖಲೀಫ ಬಿನ್ ಝಾಯಿದ್ ಅಲ್ ನಹ್ಯಾನ್ರ ಆದೇಶದಲ್ಲಿ ತಿಳಿಸಲಾಗಿದೆ.
ಜೀವನದ ಒಂದು ವಿಶೇಷ ಸಂದರ್ಭದಲ್ಲಿ ಅಪರಾಧ ಎಸಗಿದ್ದ ಮನುಷ್ಯರಿಗೆ ತಪ್ಪನ್ನು ತಿದ್ದಲು ಮತ್ತು ಹೊಸ ಜೀವನ ಆರಂಭಿಸಿ ಕುಟುಂಬದಲ್ಲಿ ಸಂತೋಷ ಮೂಡಿಸಲು ಅವಕಾಶ ನೀಡುವುದರ ಅಂಗವಾಗಿ ಶೇಖ್ ಖಲೀಫ ಕೈದಿಗಳ ಬಿಡುಗಡೆಗೆ ತೀರ್ಮಾನಿಸಿದ್ದಾರೆ. ಶಾರ್ಜದ ಜೈಲುಗಳಲ್ಲಿ ಇರುವ 377 ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂ ಕೌನ್ಸಿಲ್ ಸದಸ್ಯ ಶಾರ್ಜ ಆಡಳಿತಾಧಿಕಾರಿ ಶೇಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸ್ಮಿ ಆದೇಶ ಹೊರಡಿಸಿದ್ದಾರೆ. ಭಾರತೀಯರ ಸಹಿತ ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಲಿದೆ. ಜೈಲುವಾಸದಲ್ಲಿನ ಉತ್ತಮ ನಡತೆಯನ್ನು ಪರಿಗಣಿಸಿ ಕೈದಿಗಳ ಬಿಡುಗಡೆ ಮಾಡಲಾಗುತ್ತಿದೆ ಎಂದು ಶಾರ್ಜ ಪೊಲೀಸ್ ಕಮಾಂಡರ್ ಇನ್ ಚೀಫ್ ಸೈಫ್ ಮುಹಮ್ಮದ್ ಅಲ್ ಸರಿ ಅಲ್ ಶಂಸಿ ಹೇಳಿದರು.
ರಾಸಲ್ಕೈಮದಿಂದ 306 ಕೈದಿಗಳು ಬಿಡುಗಡೆಗೊಳ್ಳಲಿದ್ದಾರೆ ಎಂದು ಆಡಳಿತಗಾರ ಶೇಖ್ ಝಾಯಿದ್ ಬಿನ್ ಸಖರ್ ಅಲ್ ಖಾಸ್ಮಿ ಹೇಳಿದ್ದಾರೆ.
ಉಮ್ಮುಲ್ ಕುವೈನ್ನಿಂದ ಕೆಲವು ಕೈದಿಗಳನ್ನು ಬಿಡುಗಡೆಗೊಳಿಸಲು ಆಡಳಿತಗಾರ ಶೇಖ್ ಸವೂದ್ ಬಿನ್ ರಾಶಿದ್ ಅಲ್ ಮುಅಲ್ಲರು ಆದೇಶ ಹೊರಡಿಸಿದ್ದಾರೆ. ಬಿಡುಗಡೆಗೊಂಡ ಕೈದಿಗಳಿಗೆ ರಮಝಾನ್ನ ಆರಂಭದಲ್ಲಿಯೇ ಕುಟುಂಬವನ್ನು ಸೇರಲು ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.












