ಹೊಸದಿಲ್ಲಿ,ಮೇ 4: ಭಾರತದ ಸೈನ್ಯ ನರೇಂದ್ರಮೋದಿಯ ಖಾಸಗಿ ಆಸ್ತಿಯಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಭೂಸೇನೆ, ನೌಕಾ ಸೇನೆ, ವಾಯುಸೇನೆ ಮೋದಿಯ ಆಸ್ತಿಯಲ್ಲ; ದೇಶದ ಆಸ್ತಿಯಾಗಿದೆ. ಯುಪಿಎ ಕಾಲದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕನ್ನು ವೀಡಿಯೊ ಗೇಮ್ ಎಂದು ಅಪಹಾಸ್ಯ ಮಾಡುವಾಗ ಮೋದಿ ಕಾಂಗ್ರೆಸನ್ನು ಅಪಮಾನಿಸಿದಂತಾಗುವುದಿಲ್ಲ. ಬದಲಾಗಿ ಸೈನ್ಯವನ್ನು ಅವರು ಅಪಮಾನಿಸಿದ್ದಾರೆ ಎಂದು ರಾಹುಲ್ ಆರೋಪಿಸಿದರು. ಕಾಂಗ್ರೆಸ್ ಸೈನ್ಯವನ್ನು ಖಾಸಗೀಕರಣಗೊಳಿಸಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದರು. ದೇಶದ ಬಹುದೊಡ್ಡ ವಿಷಯ ನಿರುದ್ಯೋಗ ಮತ್ತು ಆರ್ಥಿಕ ಕ್ಷೇತ್ರದ ಪತನವಾಗಿದೆ. ಎರಡು ಕೋಟಿ ಉದ್ಯೋಗ ಅವಕಾಶ ಸೃಷ್ಟಿಸುವೆ ಎಂದ ಮೋದಿ ಆ ಬಗ್ಗೆ ಅವರಿಗೆ ಈಗ ಏನು ಹೇಳಲಿಕ್ಕಿದೆ ಎಂದು ದೇಶವು ಅವರನ್ನು ಕೇಳುತ್ತಿದೆ. ಅವರು ನಿರುದ್ಯೋಗದ ಕುರಿತು, ರೈತರ ಕುರಿತು ಒಂದು ಮಾತನ್ನೂ ಆಡುವುದಿಲ್ಲ. ಅವರಿಗೆ ಈ ಬಗ್ಗೆ ಏನೂ ಹೇಳುವುದಕ್ಕಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ದೇಶದಲ್ಲಿರುವ ಮೂಲಭೂತ ಸಮಸ್ಯೆಗಳಾದ ಉದ್ಯೋಗ, ಆರ್ಥಿಕತೆ, ಕೃಷಿಯ ಕುರಿತ ಸಂವಾದಕ್ಕೆ ಅವರು ಸಿದ್ಧರಿದ್ದಾರೆಯೇ ಎಂದು ಮೋದಿಗೆ ರಾಹುಲ್ ಸವಾಲು ಹಾಕಿದರು. ಪ್ರಧಾನಿ ತಜ್ಞರೂ ಅಲ್ಲ. ಅವರು ತಜ್ಞರ ಅಭಿಪ್ರಾಯವನ್ನು ಕೇಳುವುದೂ ಇಲ್ಲ. ನಾವು ಉದ್ಯೋಗದ ಕುರಿತು, ಭ್ರಷ್ಟಾಚಾರದ ಕುರಿತು ಸಂವಾದಿಸಬಹುದು. ನನಗೆ ಹತ್ತು ನಿಮಿಷ ಸಮಯವಕಾಶ ಕೊಟ್ಟರೆ ಸಾಕು. ಅನಿಲ್ ಅಂಬಾನಿಯ ಮನೆಯ ಹೊರತು ಬೇರೆ ಎಲ್ಲಿ ಬೇಕಾದರೂ ಸಂವಾದಕ್ಕೆ ತಾನು ಸಿದ್ಧ ಎಂದು ರಾಹುಲ್ ಹೇಳಿದರು. ಮೋದಿಗೆ ದೇಶದ ಕುರಿತು ಯಾವ ಯೋಜನೆಯೂ ಇಲ್ಲ. ಚುನಾವಣೆ ಮುಗಿಯುವಾಗ ಮೋದಿ ಹೊರಹೋಗು ಸ್ಥಿತಿಯಿದೆ. ರಫೇಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಲ್ಲಿ ಕೇಸು ನಡೆಯುತ್ತಿದೆ. ಕೋರ್ಟನ್ನು ಸೇರಿಸಿ ನೀಡಿದ ಹೇಳಿಕೆಗೆ ಕ್ಷಮೆಯಾಚಿಸಿದ್ದೇನೆ. ಬಿಜೆಪಿ ಅಥವಾ ಮೋದಿಯೊಂದಿಗೆ ಕ್ಷಮೆಯಾಚಿಸಿಲ್ಲ. ಕಾವಲುಗಾರ ಕಳ್ಳ ಎಂಬುದು ಈಗಲೂ ಕಾಂಗ್ರೆಸ್ಸಿನ ಘೋಷಣೆಯಾಗಿದೆ ಎಂದು ರಾಹುಲ್ ಹೇಳಿದರು.
ಮಸೂದ್ ಅಝರ್ ವಿರುದ್ಧ ಬಲವಾದ ಕಾನೂನು ಕ್ರಮ ಜರಗಿಸಬೇಕು. ಆದರೆ ಪಾಕಿಸ್ತಾನಕ್ಕೆ ಮರಳಿ ಕಳುಹಿಸಿದ್ದು ಯಾರು. ಯಾರು ಭಯೋತ್ಪಾದನೆಯ ಮುಂದೆ ತಲೆ ತಗ್ಗಿಸಿ ಆತನನ್ನು ಬಿಡುಗಡೆಗೊಳಿಸಿದ್ದು? ಕಾಂಗ್ರೆಸ್ಸಲ್ಲ, ಬಿಜೆಪಿ ಸರಕಾರ ಹಾಗೆ ಮಾಡಿದೆ ಎಂದು ರಾಹುಲ್ ಹೇಳಿದರು.
ಯುಪಿಎ ಕಾಲದಲ್ಲಿ ರಾಹುಲ್ರ ಬಿಸಿನೆಸ್ ಪಾಲುದಾರನಿಗೆ ರಕ್ಷಣಾ ಗುತ್ತೆ ನೀಡಲಾಗಿದೆ ಎನ್ನುವ ಅಮಿತ್ ಶಾರ ಆರೋಪವನ್ನು ರಾಹುಲ್ ತಳ್ಳಿ ಹಾಕಿದರು. ತನಿಖೆ ಮಾಡಿ. ಯಾವ ತನಿಖೆಯನ್ನೂ ಎದುರಿಸಲು ಸಿದ್ಧನಿದ್ದೇನೆ. ತಪ್ಪಾಗಿರುವುದನ್ನು ನಾನು ಮಾಡಿಲ್ಲ ಎಂದು ರಾಹುಲ್ ಹೇಳಿದರು.












