ಮತ್ತೆ ಬಿಹಾರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ

0
1135

ಸನ್ಮಾರ್ಗ ವಾರ್ತೆ

ಪಟ್ನ: ಬಿಹಾರದ ಪಟ್ನ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಭಾಗಶಃ ಕುಸಿದು ಬಿದ್ದಿದೆ. ಆದಿತ್ಯವಾರ ರಾತ್ರಿ ಈ ಘಟನೆ ನಡೆದಿದ್ದು, ಜೀವಹಾನಿಯಾಗಿಲ್ಲ, ಯಾರಿಗೂ ಗಾಯಗಳಾಗಿಲ್ಲ.

ಈ ಹಿಂದೆ ಬಿಹಾರದಲ್ಲಿ ಹಲವು ಸೇತುವೆ ಕುಸಿದ ಘಟನೆಗಳು ನಡೆದಿವೆ. ಕ್ರಾಸ್ ವೇಗಳು ಕೂಡ ಕುಸಿದು ಬಿದ್ದಿದ್ದವು. ಈಗ ಹೊಸದಾಗಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಬಿದ್ದಿದೆ.

ಬಿಹಾರ ಸ್ಟೇಟ್ ರೋಡ್ ಡೆವಲಪ್‍ಮೆಂಟ್ ಕಾರ್ಪೊರೇಷನ್‍ನ ಮೇಲ್ನೋಟದಲ್ಲಿ ಬಕ್ತಿಯಾರ್‍ಪುರ-ತಾಜ್‍ಪುರ ಗಂಗಾ ಮಹಾಸೇತು ಸೇತುವೆ ಕಟ್ಟಲಾಗುತ್ತಿದೆ. ಇದರ ಗಾರ್ಡರುಗಳ ಬೇರಿಂಗ್‍ಗಳನ್ನು ಬದಲಿಸಿ ಇಡುವ ಸಮಯದಲ್ಲಿ ಘಟನೆ ಸಂಭವಿಸಿದೆ. ಕಂಭಗಳಲ್ಲಿ ಗಾರ್ಡರುಗಳನ್ನು ಇಡುವ ವೇಳೆ ಅದರಲ್ಲೊಂದು ಕುಸಿದು ಬಿದ್ದಿದೆ. ಜನರಿಗೆ ಅಪಾಯಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಸದ್ಯ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲನೆ ಮಾಡುತ್ತೇವೆ ಎಂದು ಡೆವಲಪ್ ಮೆಂಟ್ ಕಾರ್ಪೊರೇಷನ್ ಚೀಫ್ ಜನರಲ್ ಮ್ಯಾನೇಜರ್ ಚಂದ್ರ ಗುಪ್ತ ಹೇಳಿದರು.

ಹಲವು ವರ್ಷಗಳಿಂದ ಸೇತುವೆ ಕೆಲಸ ನಡೆಯುತ್ತಿದೆ ಎಂದು ಸಂಬಂಧಪಟ್ಟವರು ತಿಳಿಸಿದರು. 2011 ಜೂನ್‍ನಲ್ಲಿ 5.57 ಕಿಲೋಮೀಟರ್ ದೂರದ ಭಕ್ತಿಯಾರ್‍ಪುರ-ತಾಜ್‍ಪುರ ಗಂಗಾ ಮಹಾ ಸೇತುವಿನ ನಿರ್ಮಾಣದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶಂಕು ಸ್ಥಾಪನೆ ಮಾಡಿದ ನಂತರ ಕಾಮಗಾರಿ ಶುರುವಾಗಿತ್ತು. 1,602.74 ಕೋಟಿ ರೂಪಾಯಿ ಯೋಜನೆಗೆ ಒಟ್ಟು ಖರ್ಚಾಗಿದೆ. ಸಮಷ್ಠಿ ಪುರದ ಎನ್‍ಎಚ್ 28 ಮತ್ತು ಪಟ್ನದ ಎನ್‍ಎಚ್31ನ್ನು ಈ ಸೇತುವೆ ಜೋಡಿಸುತ್ತದೆ.