ಸಂಪತ್ತಿನ ವಿಷಯದಲ್ಲಿ ನಿಮ್ಮ ಮನೋಭಾವ ಹೇಗಿದೆ?

0
125

ಸನ್ಮಾರ್ಗ ವಾರ್ತೆ

ಇಸ್ಲಾಮ್ ಧರ್ಮದ ಪ್ರಕಾರ ಈ ಭೂಮ್ಯಾಕಾಶಗಳಲ್ಲಿರುವ ಎಲ್ಲಾ ಸಂಪತ್ತಿನ ಸಂಪೂರ್ಣ ಒಡೆತನ ಮತ್ತು ಸರ್ವಾಧಿಕಾರ ಅಲ್ಲಾಹನದ್ದಾಗಿದೆ. ಸಂಪತ್ತಿನ ಮೇಲಿನ ಇಸ್ಲಾಮಿನ ದೃಷ್ಟಿಕೋನವು ಆಧ್ಯಾತ್ಮಿಕ ಮತ್ತು ಸಮಗ್ರವಾಗಿದೆ. ಅದನ್ನು ಹೇಗೆ ಗಳಿಸಬೇಕು, ಹೇಗೆ ಖರ್ಚು ಮಾಡಬೇಕು ಮತ್ತು ಹೇಗೆ ಹಂಚಿಕೊಳ್ಳಬೇಕು ಎಂಬುದರ ಕುರಿತು ಸ್ಪಷ್ಟವಾದ ನೀತಿ, ನಿಯಮ ಮತ್ತು ನಿರ್ದೇಶನಗಳನ್ನು ಕುರ್ ಆನ್ ನೀಡುತ್ತದೆ.

ಕಾನೂನುಬದ್ಧವಾದ ಮತ್ತು ಧರ್ಮಸಮ್ಮತವಾದ ವಿಧಾನಗಳ ಮೂಲಕ ಸಂಪತ್ತನ್ನು ಗಳಿಸಲು ಇಸ್ಲಾಂ ಪ್ರೋತ್ಸಾಹಿಸುತ್ತದೆ. ಝಕಾತ್ ಮತ್ತು ದಾನ ಧರ್ಮಗಳ ಮೂಲಕ ಬಡವರಿಗೆ ಶ್ರೀಮಂತರಲ್ಲಿರುವ ಸಂಪತ್ತಿನ ಪುನರ್ವಿತರಣೆಯನ್ನು ಖಚಿತಪಡಿಸುತ್ತದೆ. ಸಂಪತ್ತು ಇಹಲೋಕ ಜೀವನದ ಪರೀಕ್ಷೆಯಾಗಿದೆ.

“ಜನರಿಗೆ ಇಂದ್ರಿಯಾಭಿಲಾಷೆಗಳಾದ ಸ್ತ್ರೀಯರು, ಮಕ್ಕಳು, ಚಿನ್ನ- ಬೆಳ್ಳಿಗಳ ರಾಶಿ, ಆಯ್ದ ಕುದುರೆಗಳು, ಜಾನುವಾರುಗಳು ಮತ್ತು ಕೃಷಿ ಭೂಮಿ- ಇವುಗಳನ್ನು ಅತ್ಯಾಕರ್ಷಕವಾಗಿ ಮಾಡಲಾಗಿದೆ. ಆದರೆ ಇವೆಲ್ಲ ಇಹಲೋಕದ ಕೆಲವೇ ದಿನಗಳ ಜೀವನ ಸಾಧನಗಳು.” (ಪವಿತ್ರ ಕುರ್ ಆನ್ 3:14)

ಮನುಷ್ಯನನ್ನು ಸಂಪತ್ತನ್ನು ಪ್ರೀತಿಸುವ ಮತ್ತು ಅತೀ ಹೆಚ್ಚು ಪಡೆಯಬೇಕೆಂದು ಅತಿಯಾಸೆ ಪಡುವ ರೀತಿಯಲ್ಲೇ ಸೃಷ್ಟಿಸಲಾಗಿದೆ. ಸಂಪತ್ತು ಅಲ್ಲಾಹನು ತನ್ನ ಸೃಷ್ಟಿಗಳಿಗೆ ಲೌಖಿಕ ಜೀವನವನ್ನು ಆಸ್ವಾದಿಸಲು, ಅವರ ಒಳಿತಿಗಾಗಿ ನೀಡಿದ ಅನುಗ್ರಹವಾಗಿದೆ. ತಮ್ಮ ಕುಟುಂಬದವರ ಮೂಲಭೂತ ಬೇಡಿಕೆಗಳನ್ನು ಈಡೇರಿಸಲು ಧರ್ಮಸಮ್ಮತ ಮಾರ್ಗಗಳಲ್ಲಿ ಹಣ ಸಂಪಾದನೆ ಮಾಡುವುದು ಸತ್ಕರ್ಮ ಹಾಗೂ ಆರಾಧನೆಯಾಗಿದೆ. ಸಂಪತ್ತಿನ ಬಗ್ಗೆ ಸತ್ಯ ವಿಶ್ವಾಸಿಗಳ ವರ್ತನೆ ಹಾಗೂ ಮನೋಭಾವ ಯಾವ ರೀತಿಯಾಗಿರಬೇಕೆಂದು ಕುರ್ ಆನ್ ನಲ್ಲಿ ತಿಳಿಸಲಾಗಿದೆ.

ಸಂಪತ್ತು ನಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದ ಘಟಕವಾಗಿದೆ. ಸಂಪತ್ತಿನ ವಿಷಯದಲ್ಲಿ ಮನುಷ್ಯನ ಮನಸ್ಸಿನಲ್ಲಿ ಆಸೆ, ಅತಿಯಾಸೆ, ದುರಾಸೆ, ಜಿಪುಣತೆ, ಸಂತೃಪ್ತಿ ಎಂಬ ಭಾವನೆಗಳಿರುವುದು ಸಾಮಾನ್ಯವಾಗಿದೆ. ಒಂದು ನಿರ್ದಿಷ್ಟವಾದ ಗುರಿಗಳು ಮತ್ತು ಆಸೆಗಳಿಲ್ಲದಿದ್ದರೆ ಜೀವನ ನಡೆಸಲು ಸಾಧ್ಯವಿಲ್ಲ. ಮನುಷ್ಯರಿಗೆ ಆಸೆಗಳು ಅಪರಿಮಿತವಾಗಿದೆ ಎಂದು ಆಧುನಿಕ ಅರ್ಥಶಾಸ್ತ್ರವು ವಿವರಿಸುತ್ತದೆ. ಧರ್ಮಸಮ್ಮತ ವಸ್ತುಗಳನ್ನು ಆಗ್ರಹಿಸುವುದು ಮತ್ತು ಉತ್ತಮ ಜೀವನವನ್ನು ಬಯಸುವುದು ಧರ್ಮಸಮ್ಮತವಾಗಿದೆ.

ಮನುಷ್ಯನ ದುಃಖ, ಮಾನಸಿಕ ಒತ್ತಡ, ಚಿಂತೆ, ಆತಂಕ, ಖಿನ್ನತೆ, ಮಾನಸಿಕ ಸಂಘರ್ಷಗಳಿಗೆ ತಮ್ಮ ಬಳಿ ಇಲ್ಲದಿರುವುದರ ಬಗ್ಗೆ ಚಿಂತೆಯೇ ಮೂಲ ಕಾರಣವಾಗಿದೆ. ಅತ್ಯಾಸೆ ಎಂಬುದು ಆರ್ಥಿಕ ಅಥವಾ ಹಣಕಾಸಿನ ಸಮಸ್ಯೆ ಅಲ್ಲ, ಬದಲಾಗಿ ಅದೊಂದು ಮಾನಸಿಕ ಸಮಸ್ಯೆಯಾಗಿದೆ. ತಮ್ಮ ಸಂಪತ್ತಿನ ಕಾರಣದಿಂದಾಗಿ ಸಮಯಕ್ಕೆ ಸರಿಯಾಗಿ ನಿದ್ದೆಬಾರದೆ ನಿದ್ರೆಯ ಮಾತ್ರೆಗಳನ್ನು ಸೇವಿಸಿ ಮಲಗುವ ಎಷ್ಟೋ ಶ್ರೀಮಂತರನ್ನು ದಿನನಿತ್ಯ ಕಾಣಬಹುದಾಗಿದೆ. ಯಾವುದೇ ಚಿಂತೆಯಿಲ್ಲದೆ ಸುಖ ಸಮೃದ್ಧವಾಗಿ ನಿದ್ರಿಸುವ ಎಷ್ಟೋ ಬಡವರಿದ್ದಾರೆ. ಆಧುನಿಕ ಕಾಲದಲ್ಲಿ ಹೊಸ ಮಾದರಿಯ ಮನೆ, ವಸ್ತ್ರ, ವಾಹನ, ಗಾಜೆಟ್ ಇತ್ಯಾದಿ ಭೌತಿಕ ವಸ್ತುಗಳನ್ನು ಗಳಿಸಲು ಮನುಷ್ಯರ ಮಧ್ಯೆ ಸ್ಪರ್ಧೆ, ಪೈಪೋಟಿ ನಡೆಯುತ್ತಿದೆ. ಆಡಂಭರ ತೋರಿಕೆ, ಪ್ರದರ್ಶನದಂತಹ ಮನೋಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅತೀ ಅಗತ್ಯವಿಲ್ಲದ ವಸ್ತುಗಳಿಗಾಗಿ ಆಸೆ ಪಡಬೇಡಿರಿ. ತಮಗೆ ಅಗತ್ಯವಿಲ್ಲದ, ಖರೀದಿಸಲು ಸಾಧ್ಯವಿಲ್ಲದ ವಸ್ತುಗಳನ್ನು ನೋಡದಿರುವುದೇ ಉತ್ತಮ. ಸಂಪತ್ತಿನೊಂದಿಗೆ ಅತಿಯಾದ ಮೋಹ ಸನ್ಮಾರ್ಗದಿಂದ ದೂರ ಸರಿಯುವಂತೆ ಮಾಡಬಹುದು.

ಜಿಪುಣತೆ ಎಂಬುದು ಸ್ವತಃ ತಮ್ಮ ಮತ್ತು ಕುಟುಂಬದವರ ಮೂಲಭೂತ ಬೇಡಿಕೆ ಮತ್ತು ಅಗತ್ಯಕ್ಕೆ ಖರ್ಚು ಮಾಡಲು ಇಷ್ಟವಿಲ್ಲದಿರುವ ಮನೋಭಾವ. ಇದು ಬದುಕನ್ನು ಶೋಚನೀಯವಾಗಿ ಮಾಡಬಹುದು. ಸಂಪತ್ತಿನ ವಿಷಯದಲ್ಲಿ ಅಲ್ಲಾಹನ ಆಜ್ಞೆ ಪಾಲಿಸಲು ನಿರಾಕರಿಸುವುದು, ಬಡವರ ದರಿದ್ರರ ಹಕ್ಕುಗಳನ್ನು ನೀಡಲು ನಿರಾಕರಿಸುವುದು ಮನುಷ್ಯನನ್ನು ಸ್ವಾರ್ಥಿ ಮತ್ತು ಕೃತಘ್ನನಾಗಿ ಮಾಡುತ್ತದೆ. ಇದು ಮನುಷ್ಯನಲ್ಲಿ ದುರಾಸೆಯನ್ನುಂಟು ಮಾಡಬಹುದು. ಸಂಪತ್ತು ಅಲ್ಲಾಹನ ಅನುಗ್ರಹವೆಂಬುದನ್ನು ಮರೆತು ಬಿಡುತ್ತಾನೆ. ಹಣ ಖರ್ಚು ಮಾಡುವುದರಿಂದ ಸಂಪತ್ತಿನ ಹೆಚ್ಚಳವಾಗುತ್ತದೆ ಎಂದು ಇಸ್ಲಾಮ್ ಕಲಿಸುತ್ತದೆ. ದಾನ ಧರ್ಮ ಮಾಡುವುದರಿಂದ ಸಂಪತ್ತು ಕಡಿಮೆಯಾಗಿ ಬಡವನಾಗುವೆನೆಂದು ಶೈತಾನನು ಮನಸ್ಸಿನಲ್ಲಿ ಸದಾ ಪ್ರಚೋದಿಸುತ್ತಾನೆ.

“ನಿಮ್ಮ ಪ್ರಭುವಿನ ಕೃಪೆಯನ್ನು ವಿತರಿಸುವವರು ಇವರೇನು? ಲೌಕಿಕ ಜೀವನದಲ್ಲಿ ಇವರ ಉಪಜೀವನ ಸಾಧನಗಳನ್ನು ನಾವು ಇವರ ನಡುವೆ ಹಂಚಿದ್ದೇವೆ ಮತ್ತು ಇವರು ಪರಸ್ಪರರಿಂದ ಸೇವೆ ಪಡೆಯುವಂತಾಗಲು ನಾವು ಇವರಲ್ಲಿ ಕೆಲವರಿಗೆ ಇನ್ನು ಕೆಲವರಿಗಿಂತ ಅನೇಕ ಮೇಲ್ಮೆ ನೀಡಿರುವೆವು.” (ಪವಿತ್ರ ಕುರ್ ಆನ್ 43:32)

ಅಲ್ಲಾಹನು ನೀಡಿದ ಸಂಪತ್ತಿನಲ್ಲಿ ಸಂತೃಪ್ತರಾಗುವುದು ಇದು ಸತ್ಯ ವಿಶ್ವಾಸದ ಅತ್ಯಂತ ಶ್ರೇಷ್ಠ ಪದವಿಯಾಗಿರುತ್ತದೆ. ಅಲ್ಲಾಹ್ (ಅರ್ರಝ್ಝಾಕ್) ಅವನ ಇಚ್ಚೆಯಂತೆ ಎಲ್ಲಾ ಜನರಿಗೆ ಜೀವನಾಧಾರವನ್ನು ನೀಡುವವನು ಎಂಬ ದೃಢವಾದ ವಿಶ್ವಾಸವಿರಬೆಕು. ಮನುಷ್ಯನ ಜೀವನಾಧಾರ, ಆದಾಯ, ಆರ್ಥಿಕ ಸ್ಥಿತಿ ಗತಿಗಳು ಅವನ ತಾಯಿಯ ಗರ್ಭಾಶಯದಲ್ಲಿ 40 ದಿನಗಳಿರುವಾಗಲೇ ತೀರ್ಮಾನವಾಗುತ್ತದೆ. ಜನರ ಜೀವನೋಪಾಯ ಅವರ ವಿದ್ಯಾಭ್ಯಾಸ ಮತ್ತು ಪ್ರತಿಭೆಗಳು ತೀರ್ಮಾನಿಸುವುದಿಲ್ಲ. ಸಂಪತ್ತಿನ ವಿಷಯದಲ್ಲಿ ಸಂಪೂರ್ಣವಾಗಿ ಅಲ್ಲಾಹನ ಮೇಲೆ ಅವಲಂಬಿತರಾಗಿರಿ. ನಿಮ್ಮ ಮೇಲಾಧಿಕಾರ ಭಡ್ತಿ ನೀಡದಿದ್ದರೆ ಅವರನ್ನು ದ್ವೇಷಿಸಬೇಡಿರಿ. ಸಂಪತ್ತನ್ನು ಪ್ರೀತಿಯ ಮಾನದಂಡವಾಗಿ ಪರಿಗಣಿಸಬೇಡಿರಿ. ನಿಮ್ಮ ತಂದೆ, ಪತಿ, ಸಹೋದರ, ಮಕ್ಕಳು ಅಥವಾ ಇನ್ಯಾವುದೇ ಬಂಧು ನಿಮ್ಮ ಎಲ್ಲಾ ಬೇಡಿಕೆ, ಆಸೆ, ಆಕಾಂಕ್ಷೆಗಳನ್ನು ಪೂರೈಸುತ್ತಿಲ್ಲ ಅಥವಾ ಅವರ ಕೈಯಲ್ಲಿ ಹಣವಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ದ್ವೇಷಿಸಬೇಡಿರಿ. ಪ್ರೀತಿಯನ್ನು ಯಾವಾಗಲೂ ಹಣ ಕೊಟ್ಟು ತಂದ ಉಡುಗೊರೆಯಿಂದಲೇ ನಿರೀಕ್ಷಿಸಬೇಡಿರಿ. ನಿಷ್ಕಳಂಕ ಪ್ರೀತಿಗೆ ಉತ್ತಮ ಮಾತು ಮತ್ತು ವರ್ತನೆ ಸಾಕು.

ಮನುಷ್ಯನು ಶ್ರೀಮಂತನೇ ಎಂಬುದು ಅವನು ಧರಿಸುವ ವಸ್ತ್ರ, ವಾಸಿಸುವ ಮನೆ ಅಥವಾ ಚಲಾಯಿಸುವ ವಾಹನ ತೀರ್ಮಾನಿಸುವುದಿಲ್ಲ. ಬದಲಾಗಿ ಅವನಿಗೆ ನೀಡಿದ ಸಂಪತ್ತಿನಲ್ಲಿ ಅವನ ಮನಸ್ಸಿನಲ್ಲಿ ಎಷ್ಟು ಸಂತೃಪ್ತನಾಗಿರುವನು ಮತ್ತು ಸಂತೋಷನಾಗಿದ್ದಾನೆ ಎಂಬುದು ತೀರ್ಮಾನಿಸುತ್ತದೆ. ಅಲ್ಲಾಹನು ನೀಡಿದುದರಲ್ಲಿ ಸಂತೃಪ್ತರಾಗುವಾಗ ಮತ್ತು ಕೃತಜ್ಞತೆ ಸಲ್ಲಿಸಿದಾಗ ಮಾತ್ರ ಮನಸ್ಸಿನಲ್ಲಿ ಶ್ರೀಮಂತಿಕೆಯ ಭಾವನೆ ಉಂಟಾಗುತ್ತದೆ. ಭವಿಷ್ಯದಲ್ಲಿ ಏನಾಗುವುದೆಂದು ತಿಳಿಯದಿದ್ದರೂ, ನೀವು ಪರಿಶ್ರಮಿಸಿದ ನಂತರವೂ ಸಂಪತ್ತು ಪಡೆಯದಿದ್ದಾಗಲೂ ಅಲ್ಲಾಹನ ತೀರ್ಮಾನಗಳಿಗೆ ಬದ್ಧರಾಗಿರಬೇಕೆಂದು ಸತ್ಯವಿಶ್ವಾಸವು ಬಯಸುತ್ತದೆ. ಕೆಲವೊಮ್ಮೆ ಅಲ್ಲಾಹನು ಸಂಪತ್ತನ್ನು ನೀಡಿಯೂ ಮತ್ತು ನೀಡದೆಯೂ ಪರೀಕ್ಷಿಸಬಹುದು.

ಪ್ರವಾದಿ ಮುಹಮ್ಮದ್(ಸ) ಹೇಳಿದರು: “ನೀವು (ಐಶ್ವರ್ಯ ಮತ್ತು ಸ್ಥಾನಮಾನದಲ್ಲಿ) ನಿಮಗಿಂತ ಕೆಳಗಿರುವವರನ್ನು ನೋಡಿರಿ. ನಿಮಗಿಂತ ಮೇಲಿರುವವರನ್ನು ನೋಡಬೇಡಿ. ನಿಮಗೆ ಅಲ್ಲಾಹನು ಕೊಟ್ಟಿರುವ ಅನುಗ್ರಹಗಳು ನಿಮ್ಮ ದೃಷ್ಟಿಯಲ್ಲಿ ನಿಕೃಷ್ಟವಾಗದಿರಲು ಈ ಕ್ರಮವು ಬಹಳ ಸಹಾಯಕವಾಗುವುದು.” (ಅಬೂ ಹುರೈರಾ(ರ), ಮುಸ್ಲಿಮ್)

ಹಣ ಸಂಪಾದಿಸುವ ಮಧ್ಯೆಯೂ ಆರಾಧನೆಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಸಂತೃಪ್ತಿ ಎಂಬುದು ಮನುಷ್ಯನಿಗೆ ಆಧ್ಯಾತ್ಮಿಕ ಸಂತೋಷದಿಂದ ಉಂಟಾಗುತ್ತದೆ. ತಮಗೆ ಸಿಕ್ಕಿದ ಸಂಪತ್ತಿನಿಂದ ತಮಗೂ, ಕುಟುಂಬ ಮತ್ತು ಸಮಾಜಕ್ಕೂ ಉಪಕಾರವಾದಾಗ ಮಾತ್ರ ಸ್ವರ್ಗಕ್ಕೆ ದಾರಿದೀಪವಾಗುವುದು.

✍️ಖದೀಜ ನುಸ್ರತ್