ಲಾಹೋರ್,ಮೇ 8: ಪಾಕಿಸ್ತಾನದ ಲಾಹೋರಿನಲ್ಲಿರುವ ಸೂಫಿ ದರ್ಗಾದಲ್ಲಿ ನಡೆದ ಸ್ಫೋಟದಲ್ಲಿ ಮೂರು ಮಂದಿ ದಾರುಣವಾಗಿ ಮೃತಪಟ್ಟಿದ್ದು ಹದಿನೈದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರೆಲ್ಲರೂ ಪೊಲೀಸರು ಎಂದು ಪ್ರಾಥಮಿಕ ವರದಿ ತಿಳಿಸಿದೆ. ಸೂಫಿ ದರ್ಗಾಕ್ಕೆ ಮಹಿಳೆಯರು ಪ್ರವೇಶಿಸುವ ಬಾಗಿಲಿನ ಬಳಿ ಪಾರ್ಕ್ ಮಾಡಿದ ಎರಡು ಪೊಲೀಸ್ ಜೀಪ್ನ ಸಮೀಪ ಸ್ಫೋಟ ಸಂಭವಿಸಿತು. ಪಾಕಿಸ್ತಾನದ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೆಯ ನಗರ ಲಾಹೋರ್ ಆಗಿದ್ದು ಇಲ್ಲಿನ ಹನ್ನೊಂದನೇ ಶತಮಾನದ ಸೂಫಿ ದರ್ಗಾ ದಾತ್ತ ದರ್ಬಾರ್ನಲ್ಲಿ ಸ್ಫೋಟ ಸಂಭವಿಸಿದೆ. ದಕ್ಷಿಣ ಏಷ್ಯಾದಲ್ಲಿಯೇ ಬಹುದೊಡ್ಡ ದರ್ಗಾಗಳಲ್ಲಿಯೇ ಒಂದು ಎಂಬ ಪ್ರತೀತಿ ಇದಕ್ಕಿದೆ. ಈ ಹಿಂದೆ, 2010ರಲ್ಲಿಯೂ ದರ್ಗಾವನ್ನು ಗುರಿಯಾಗಿರಿಸಿ ಸ್ಫೋಟ ನಡೆದಿತ್ತು. ಅಂದಿನ ಆತ್ಮಾಹುತಿ ದಾಳಿಯಲ್ಲಿ 40 ಮಂದಿ ಮೃತಪಟ್ಟಿದ್ದರು. ಬಾಂಬ್ ಸ್ಫೋಟದ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.












