ಚೀನಾ: ಸರಕಾರದಿಂದ ಕ್ಸಿನ್ಜಿಯಾಂಗ್ ಮಸೀದಿಗಳ ಧ್ವಂಸ- ವರದಿ

0
859

ಬೀಜಿಂಗ್,ಮೇ 8: ಪಶ್ಚಿಮ ಕ್ಸಿನ್ಜಿಯಾಂಗ್‌ನ ಪ್ರದೇಶದಲ್ಲಿರುವ ಮುಸ್ಲಿಮರ ಮಸೀದಿಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಚೀನಾದ ಸರಕಾರ ಕೆಡವುತ್ತಿದೆ ಎಂದು ವರದಿಯಾಗಿದೆ. ಎರಡು ವರ್ಷಗಳಲ್ಲಿ ಚೀನಾ 31 ಮಸೀದಿಗಳನ್ನು ಧ್ವಂಸ ಮಾಡಿದೆ. ಉಯಿಗುರ್ ಮುಸ್ಲಿಮರು ವಾಸವಿರುವ ಪ್ರದೇಶದ ಆಧ್ಯಾತ್ಮಿಕ ಕೇಂದ್ರಗಳನ್ನು ನಾಶಪಡಿಸಲಾಗಿದೆ ಎಂದು ಗಾರ್ಡಿಯನ್ ನಡೆಸಿದ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. ದೇಶದ ದೊಡ್ಡ ತೀರ್ಥಯಾತ್ರಾ ಕೇಂದ್ರವಾದ ಇಮಾಮ್ ಆಸಿಂ ಮಕ್ಬರ, ಮತ್ತು ದೇಶದ ದೊಡ್ಡ ಮಸೀದಿಗಳಲ್ಲೊಂದಾದ ಕಾರ್ಗಿಲಿಕ್ ಮಸೀದಿಯನ್ನು ಕೂಡ ಚೀನಾ ನಾಶಪಡಿಸಿದೆ.

ಉಯಿಗುರ್ ಮುಸ್ಲಿಮರ ವಿರುದ್ಧ ಚೀನದ ಸರಕಾರ ದಮನ ನೀತಿಯನ್ನು ಮುಂದುವರಿಸಿದ್ದಕ್ಕೆ ಇದು ಪ್ರತ್ಯಕ್ಷ ಉದಾಹರಣೆಯಾಗಿದೆ. ಈ ವಲಯದ ಸೂಕ್ಷ್ಮ ಉಪಗ್ರಹ ಚಿತ್ರಗಳನ್ನು ಪರಿಶೀಲಿಸಿ ನಾಶಪಡಿಸಿದ ಮಸೀದಿಗಳ ಸರಿಯಾದ ಲೆಕ್ಕವನ್ನು ಗಾರ್ಡಿಯನ್ ಪತ್ರಿಕೆ ಸಂಗ್ರಹಿಸಿದೆ. ಪ್ರದೇಶ ವಾಸಿಗಳು ಗುರುತಿಸಬಹುದಾದ 91 ಧಾರ್ಮಿಕ ಕೇಂದ್ರಗಳು ಹಾಗೂ ಚಿತ್ರಗಳನ್ನು ಅಧ್ಯಯನ ಮಾಡಲಾಗಿದೆ. 2016ರಿಂದ 2018ರ ನಡುವೆ 31 ಮಸೀದಿಗಳು ನಾಶಗೊಳಿಸಲಾಗಿದೆ ಎಂದು ಅಧ್ಯಯನದಲ್ಲಿ ಸ್ಪಷ್ಟವಾಗಿದೆ. 15 ಮಸೀದಿಗಳು ಸಂಪೂರ್ಣ ನೆಲಕಚ್ಚಿವೆ. ಕೆಲವು ಮಸೀದಿಗಳ ಮಿನಾರಗಳು ಇತ್ಯಾದಿಗಳನ್ನು ಕೆಡವಲಾಗಿದೆ. ಮಸೀದಿಗಳ ಹೊರಗಿನ ರೂಪವನ್ನು ನಾಶಪಡಿಸಲಾಗಿದೆ ಎಂದು ವರದಿ ತಿಳಿಸಿದೆ.