ಹೊಸದಿಲ್ಲಿ,ಮೇ 9: ಮಾಜಿ ಪ್ರಧಾನಿ ರಾಜೀವ್ ಗಾಂಧಿ 1984ರ ಸಿಖ್ಖ್ ವಿರೋಧಿ ದಂಗೆಗೆ ಕರೆ ನೀಡಿದ್ದರು ಎಂದು ಬಿಜೆಪಿ ಆರೋಪಿಸಿದೆ. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕಚೇರಿ ದಂಗೆಗೆ ಕರೆ ನೀಡಿತ್ತು ಎಂದು ಬಿಜೆಪಿ ಟ್ವೀಟ್ ಮಾಡಿದೆ. ಭಾರತ ಕಂಡ ಅತ್ಯಂತ ದೊಡ್ಡ ನರಮೇಧ ಸಿಕ್ಖ್ ವಿರೋಧಿ ದಂಗೆಯಾಗಿದ್ದು, ಸರಕಾರ ತನ್ನ ಸ್ವಂತ ಪ್ರಜೆಗಳನ್ನು ಕೊಂದು ಹಾಕಿದೆ ಎಂದು ನಾನಾವತಿ ಆಯೋಗದ ದಾಖಲೆಯಲ್ಲಿದೆ ಎಂದು ಬಿಜೆಪಿ ಹೇಳಿದೆ. ಈ ಕರ್ಮ ಫಲದ ನ್ಯಾಯಕ್ಕಾಗಿ ದೇಶ ಕಾಯುತ್ತಿದೆ ಎಂದು ಬಿಜೆಪಿ ಟ್ವೀಟಿಸಿದೆ.ಈಗಾಗಲೇ ರಾಜೀವ್ ಗಾಂಧಿ ನಂಬರ್ ವನ್ ಭ್ರಷ್ಟಾಚಾರಿಯಾಗಿ ಜೀವನ ಕೊನೆಗೊಳಿಸಿದರೆಂದು ಮೋದಿ ಆರೋಪಿಸಿ ವಿವಾದ ಸೃಷ್ಟಿಸಿದ್ದಾರೆ. ಇದರ ಬೆನ್ನಿಗೆ ರಾಜೀವ್ ಗಾಂಧಿ ಕುಟುಂಬ ನೌಕಾ ಸೇನೆಯ ಹಡಗಿನಲ್ಲಿ ರಜೆಯನ್ನು ಕಳೆಯಿತೆಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಮೋದಿಗೆ ಅವರ ಕರ್ಮಫಲ ಕಾದಿದೆ ಎಂದು ಉತ್ತರಿಸಿದ್ದರು.












