ಸನ್ಮಾರ್ಗ ವಾರ್ತೆ
ತಂತ್ರ ಕುತಂತ್ರ ಷಡ್ಯಂತರದಲ್ಲಿ ದೆಹಲಿಯ ಮತದಾರರು
ಈ ಬಾರಿಯ ದೆಹಲಿಯ ಚುನಾವಣೆ ಅರವಿಂದ ಕೇಜ್ರಿವಾಲರಿಗೆ 2013ರಂತೆಯೂ ಇಲ್ಲ 2015ರಂತೆಯೂ ಇಲ್ಲ. 2015 ರಲ್ಲಿ 67 ಸೀಟುಗಳನ್ನು ಗೆದ್ದಿದ್ದ ಕೇಜ್ರಿವಾಲ್ 2020ರಲ್ಲಿ 62 ಸೀಟ್ ಗಳನ್ನು ತನ್ನದಾಗಿಸಿಕೊಂಡಿದ್ದರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅವರದು ಏನೇನೂ ಅಲ್ಲ ಎಂಬುದು ಆಗ ಸಾಬೀತಾಗಿತ್ತು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ.
ಕೇಜ್ರಿವಾಲ್ ಬಹುಮತ ಸಾಬೀತು ಪಡಿಸಲು ಬೇಕಾದ 36 ಸೀಟುಗಳನ್ನಾದರೂ ಗೆಲ್ಲಲಿದ್ದಾರೆಯೇ ಎಂಬ ಶಂಕೆ ಮೂಡ ತೊಡಗಿದೆ. ಕೇಜ್ರಿವಾಲರನ್ನು ಹಣಿಯಲು ಕೇವಲ ಬಿಜೆಪಿ ಸಿದ್ಧವಾಗಿರುವುದಲ್ಲ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತನಗೆ ಕೊಟ್ಟ ಹೊಡೆತವನ್ನು ಕಾಂಗ್ರೆಸ್ ಇಲ್ಲಿ ತೀರಿಸಿಕೊಳ್ಳಲು ಸಜ್ಜಾಗಿದೆ. ಇದರ ಮಧ್ಯೆ ಬಹುಜನ ಸಮಾಜ ಪಕ್ಷದ ಮಾಯಾವತಿ ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಎಸ್ಪಿ ಒಡೆಯುವ ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಮತಗಳು ದೆಹಲಿ ಚುನಾವಣೆಯ ಆಟವನ್ನೇ ಬದಲಿಸಲಿವೆ.
ಕಳೆದ 26 ವರ್ಷಗಳಿಂದ ದೆಹಲಿಯ ಗದ್ದುಗೆಯಿಂದ ಹೊರಗಿದ್ದ ಬಿಜೆಪಿ ಮತ್ತೊಮ್ಮೆ ಇಲ್ಲಿ ಜಯಭೇರಿ ಬಾರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ದೆಹಲಿಯ ವಿಧಾನಸಭೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ಇಡೀ ದೇಶವನ್ನೇ ಗೆದ್ದರೂ ಕೇಂದ್ರ ಸ್ಥಾನ ದೆಹಲಿ ತನ್ನದಲ್ಲ ಎನ್ನುವಂತ ಸ್ಥಿತಿ ಇತ್ತು. ಆದರೆ ಈ ಬಾರಿ ಎಲ್ಲವೂ ಉಲ್ಟಾಪುಲ್ಟಾ ಆಗುವ ಲಕ್ಷಣಗಳು ಗೋಚರಿಸುತ್ತಿವೆ.
ಬಿಜೆಪಿಯ ಎಲ್ಲ ತಂತ್ರ, ಕುತಂತ್ರ, ಷಡ್ಯಂತ್ರಗಳನ್ನು ಮೀರಿ ಬಹುಮತಕ್ಕೆ ಹತ್ತಿರವಾಗುವ ಸಂಖ್ಯೆಯನ್ನು ಪಡೆದರೂ ಹೆಚ್ಚು ದಿನ ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಮಾಡಿದಂತೆ, ಮಹಾರಾಷ್ಟ್ರದಲ್ಲಿ ಮಾಡಿದಂತೆ, ಗೋವಾದಲ್ಲಿ ನೋಡಿದಂತೆ ದೆಹಲಿಯಲ್ಲಿಯೂ ಆಪರೇಷನ್ ಲೋಟಸ್ ನಡೆಸುವುದು ಗ್ಯಾರಂಟಿ ಎನ್ನುವ ರಾಜಕೀಯ ವಿಶ್ಲೇಷಕರೂ ಕಾಣ ಸಿಗುತ್ತಿದ್ದಾರೆ. . ಅದೆಲ್ಲಾ ಆ ಬಳಿಕದ ಮಾತು ಇಲ್ಲಿ ಕೇಜ್ರಿವಾಲ್ ಮತ್ತೆ ಅಧಿಕಾರಕ್ಕೆ ಬರುತ್ತಾರೆಯೇ ಎಂಬುದೇ ಪ್ರಶ್ನೆ.
ಇಷ್ಟು ದಿನ ಕಾಂಗ್ರೆಸ್ ನವರು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವನ್ನ ಬಿಜೆಪಿಯ ಬಿ ಟೀಮ್ ಎಂದು ವ್ಯಂಗ್ಯವಾಡುತ್ತಿದ್ದರು. ದೆಹಲಿಯಲ್ಲಿ ಈಗ ಇಂತಹದ್ದೇ ವ್ಯಂಗ್ಯಕ್ಕೆ ಕಾಂಗ್ರೆಸ್ ಗುರಿಯಾಗಿದೆ. ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬಿಜೆಪಿ ಫಂಡಿಂಗ್ ಮಾಡುತ್ತಿದೆ ಎಂದು ದೆಹಲಿಯ ಮುಖ್ಯಮಂತ್ರಿ ಆತಿಶಿ ಸಿಂಗ್ ಆರೋಪಿಸಿದ್ದಾರೆ.
ಹೆಚ್ಚು ಕಡಿಮೆ ಕಳೆದ 13 ವರ್ಷಗಳಿಂದ ದೆಹಲಿ ವಿಧಾನಸಭೆಯಲ್ಲಿ ಅಧಿಕಾರ ವಂಚಿತವಾಗಿರುವ ಕಾಂಗ್ರೆಸ್ ಈ ಬಾರಿ ಹೆಚ್ಚು ಪ್ರಬಲ ಸ್ಪರ್ಧೆ ಒಡ್ಡಲು ಸಿದ್ಧವಾಗಿದೆ. ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸೀಟ್ ಪಡೆಯಲು ಸಾಧ್ಯವಾಗದೇ ಇದ್ದ ಕಾಂಗ್ರೆಸ್ ಈ ಬಾರಿ ಕನಿಷ್ಠ 5 ರಿಂದ 6 ಸೀಟ್ ಗೆಲ್ಲುವ ನಿರೀಕ್ಷೆ ಹೊಂದಲಾಗಿದೆ. ಹಾಗೆಯೇ ಇದು ಆಮ್ ಆದ್ಮಿ ಪಕ್ಷವನ್ನ ಮುಳುಗಿಸುವ ಸಾಧ್ಯತೆಯೂ ಇದೆ.
ಹೇಗೆ ಗುಜರಾತ್ ನಲ್ಲಿ ಕೇಜ್ರಿವಾಲ್ ಕಾಂಗ್ರೆಸ್ಸಿನ ಓಟಗಳನ್ನು ಕಟ್ ಮಾಡಿದ್ದರೋ ಹಾಗೆಯೇ ದೆಹಲಿಯಲ್ಲಿ ಕೇಜ್ರಿವಾಲರ ಓಟುಗಳನ್ನು ಕಾಂಗ್ರೆಸ್ ಕಟ್ ಮಾಡುವ ಮತ್ತು ಆಧಿಕಾರದಿಂದ ಆಮ್ ಆದ್ಮಿ ಪಕ್ಷವನ್ನು ದೂರ ಇಡುವ ಆ ಮೂಲಕ ಬಿಜೆಪಿ ಅನಾಯಾಸವಾಗಿ ಅಧಿಕಾರಿಕ್ಕೆ ಬರುವಂತೆ ಮಾಡುವ ಸಾಧ್ಯತೆಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ದೆಹಲಿಯಲ್ಲಿ ಕೇಜ್ರಿವಾಲ್ ಗೆಲ್ಲುವುದು ಮಾತ್ರವಲ್ಲ 50 ಕ್ಕಿಂತ ಹೆಚ್ಚು ಸೀಟುಗಳೊಂದಿಗೆ ಅಧಿಕಾರಕ್ಕೆ ಬರಬೇಕಿದೆ. ಆಮ್ ಆದ್ಮಿ ಪಕ್ಷಕ್ಕೆ ಪಡೆಯುವ ಸ್ಥಾನ 40ಕ್ಕಿಂತ ಕಡಿಮೆ ಆದರೆ ಖಂಡಿತವಾಗಿಯೂ ಆಪರೇಷನ್ ಕಮಲಕ್ಕೆ ಬಲಿಯಾಗುತ್ತಾರೆ. ಮಹಾರಾಷ್ಟ್ರದಲ್ಲಿ ಹೇಗೆ ಶಿವಸೇನೆಯನ್ನು ಮತ್ತು ಎನ್ ಸಿಪಿಯನ್ನು ಅಮಿತ್ ಶಾ ಒಡೆದು ಅಧಿಕಾರ ಸ್ಥಾಪಿಸಿದರು, ಮಧ್ಯಪ್ರದೇಶದಲ್ಲಿ ಹೇಗೆ ಕಮಲನಾಥರಿಗೆ ಕೈಕೊಟ್ಟರೋ, ಕರ್ನಾಟಕದಲ್ಲಿ ಹೇಗೆ 17 ಶಾಸಕರನ್ನು ಮುಂಬೈಗೆ ಕರೆದೊಯ್ದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಿದರೋ ದೆಹಲಿಯಲ್ಲಿ ಕೆಜ್ರಿವಾಲ್ ಆಡಳಿತಕ್ಕೂ ಹಾಗೆಯೇ ಆಗಬಹುದು.
ಪ್ರತಿ ಬಾರಿ ದೆಹಲಿಯ ಸಮುದ್ರವನ್ನು ಆರಾಮವಾಗಿ ದಾಟಿ ಬರುತ್ತಿದ್ದ ಕೇಜ್ರಿವಾಲ್ ಈ ಬಾರಿ ಕಠಿಣ ಸವಾಲುಗಳನ್ನು ಎದುರಿಸಿ ಹೋಗಬೇಕಿದೆ. ಅಂದುಕೊಂಡಷ್ಟು ಸುಲಭವಿಲ್ಲ ಈ ಬಾರಿಯ ದಾರಿ.
ಈ ಬಾರಿಯ ಚುನಾವಣೆ ಕೇಜ್ರಿವಾಲರ ಪಾಲಿಗೆ ಬೆಂಕಿಯ ಸಮುದ್ರ, ಇಲ್ಲಿ ಅವರು ಮುಳುಗಿಯೇ ದಡಸೆರಬೇಕಾಗಿದೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಆದರೆ ದಿಲ್ಲಿಯಲ್ಲಿ ಅಧಿಕಾರ ಹಿಡಿಯುವುದು ಅದಕ್ಕೆ ಸಾಧ್ಯ ಆಗ್ತಾ ಇಲ್ಲ, ಕಳೆದ 26 ವರ್ಷಗಳಿಂದ ದೆಹಲಿಯಲ್ಲಿ ಅಧಿಕಾರ ಸ್ಥಾಪಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಬಂದಿದೆ. ಅದು ಎಲ್ಲಡಿಯು ಸಫಲವಾಗುತ್ತಿದೆ ಮಹಾರಾಷ್ಟ್ರದಲ್ಲಿ ಹರಿಯಾಣದಲ್ಲಿ ಮಧ್ಯಪ್ರದೇಶದಲ್ಲಿ, ತನ್ನ ತಂತ್ರ ಕುತಂತ್ರ ಎಲ್ಲವನ್ನು ಸಫಲ ಮಾಡಿಕೊಂಡು ಬರುತ್ತಿದೆ. ದೂರದೃಷ್ಟವಶಾತ್ ದೆಹಲಿ ಎಂಬ ಚಿಕ್ಕ ರಾಜ್ಯದ ಮೇಲೆ ಅದಕ್ಕೆ ಸಾಧಿಸಲು ಸಾಧ್ಯವಾಗ್ತಾ ಇಲ್ಲ.
ಆದರೆ ಈಗ ಹರಿಯಾಣ ಹೇಗೋ, ಮಹಾರಾಷ್ಟ್ರ ಹೇಗೋ ಮಧ್ಯಪ್ರದೇಶ ಹೇಗೆ ತನ್ನ ತೆಕ್ಕೆ ಪಡೆದಿದೆಯೋ ಹಾಗೆ ಬಿಜೆಪಿ ದೆಹಲಿಯನ್ನು ಕೂಡ ಅನಾಯಾಸವಾಗಿ ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ.
ವಿಪಕ್ಷದವರು, ಇವಿಎಂ, ಇವಿಎಂ ಎಂದು ಬೊಬ್ಬೆ ಹೊಡೆಯುತ್ತಲೇ ಇದ್ದಾರೆ. ಆದರೆ ಬಿಜೆಪಿ ಆಡುತ್ತಿರುವ ಅಸಲಿ ಆಟವೇ ಬೇರೆಯಾಗಿದೆ. ಇದು ಚುನಾವಣಾ ಆಯೋಗದ ಸಯೋಗದಲ್ಲಿ ನಡೆಯುತ್ತಿರುವ ಆಟ. ಇದು ಮತದಾರರನ್ನು ಡಿಲೀಟ್ ಮಾಡುವ ಮತದಾರರನ್ನು ಸೇರಿಸುವ ಆಟ.
ಇದು ಕಣ್ಣಿಗೆ ಕಾಣುತ್ತಿದ್ದರು ಏನೂ ಮಾಡಲಾಗದ ಹತಾಶ ಸ್ಥೀತಿಯಲ್ಲಿ ಕೇಜ್ರಿವಾಲ್ ಇದ್ದಾರೆ.
ಅರವಿಂದ ಕೆಜ್ರಿವಾಲ್ ಸ್ಪರ್ಧಿಸುವ ನಯಿ ದೆಹಲಿ ಒಂದೇ ಮತ ಕ್ಷೇತ್ರದಲ್ಲಿ 60050 ಮತಗಳನ್ನು ಡಿಲೀಟ್ ಮಾಡಲಾಗಿದೆ, ಹಾಗೆಯೇ 10,005 ಮತಗಳನ್ನು ಸೇರಿಸಲಾಗಿದೆ. ಇದು ಖುದ್ದು ಕೆಜ್ರಿವಾಲ್ ಬಹಿರಂಗಪಡಿಸಿದ ಸತ್ಯ. ಆದರೆ ಏನು ಮಾಡುವುದು ಹಾಗೆ ಆಗಿ ಹೋಗಿದೆ.
ಇದು ಕೇವಲ ಸ್ಪರ್ಧಿಸುವ ನಯಿ ದೆಹಲಿ ಮತ ಕ್ಷೇತ್ರದಲ್ಲಿ ನಡೆದ ತಂತ್ರ ಎಂದುಕೊಳ್ಳಬೇಕಾಗಿಲ್ಲ. ದೆಹಲಿ ವಿಧಾನಸಭೆಯ ಎಲ್ಲ 70 ವಿಧಾನಸಭಾ ಕ್ಷೇತ್ರಗಳಲ್ಲೂ ಹೀಗೆಯೇ ಆಗಿದೆ.
ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಮಾಡೆಲ್ ಮೂಲಕ ಬಿಜೆಪಿ ಗೆಲುವು ಸಾಧಿಸಿದೆಯೋ ಅದನ್ನ ಇಲ್ಲಿ ಹೆಚ್ಚು ಆದ್ಯತೆಯ ಮೂಲಕ ಜಾರಿ ಮಾಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಇದ್ದ ದೆಹಲಿಯ ಮತದಾರರ ಸಂಖ್ಯೆ 1,47,18,119 ಆದರೆ ಕಳೆದ ಅಕ್ಟೋಬರ್ ನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಾಗಿದೆ ಅದರ ಲೆಕ್ಕ ಹೇಳುತ್ತಿರುವುದು ದೆಹಲಿಯಲ್ಲಿರುವ ಮತದಾರರ ಸಂಖ್ಯೆ 1,55,24,889 ಎಂದು. ಅದು ಬಿಡಿ ಈಗ ಜನವರಿಯಲ್ಲಿ ಮತ್ತೊಮ್ಮೆ ಪರಿಷ್ಕರಣೆಯಾಗಿದೆ. ಕಳೆದ ಮೇ ಇಂದ ಈವರೆಗೆ ಏಳು ಲಕ್ಷ 77 ಸಾವಿರ ಮತದಾರರು ಹೆಚ್ಚಾಗಿದ್ದಾರೆ.
ದೆಹಲಿಯಲ್ಲಿರುವ 70 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿದರೆ ಸರಾಸರಿ ಒಂದು ಕ್ಷೇತ್ರದಲ್ಲಿ 11 ಸಾವಿರದಷ್ಟು ಮತದಾರರ ಸಂಖ್ಯೆ ಏರಿಕೆಯಾಗಿದೆ. ಅಂದರೆ ಶೇಕಡ ಹತ್ತರ ಪ್ರಮಾಣದಲ್ಲಿ ಏರಿಕೆಯಾಗಿದೆ. ಸೋಲು ಗೆಲುವಿನ ಅಂತರ ಇರುವುದೆಷ್ಟು ಒಂದು ಸಾವಿರ ಎರಡು ಸಾವಿರ ಮತಗಳ ಅಂತರ, ಇಲ್ಲಿ 11,000 ಮತಗಳು ಈಗಲೇ ಇವೆ ಎಂದಾದರೆ, ಅದನ್ನು ಮೀರಿ ಗೆಲುವು ಸಾಧಿಸುವುದು ಕೇಜ್ರಿವಾಲರಿಗೆ ಸಾಧ್ಯವಿದೆಯೇ?
ಇಲ್ಲಿ ಕೇವಲ ಹೊಸ ಮತದಾರರನ್ನು ಸೇರಿಸಿದ್ದು ಮಾತ್ರ ಅಲ್ಲ. ಆಮ್ ಆದ್ವಿ ಪಕ್ಷದ ಮತದಾರರು ಎನ್ನಲಾದ ಐದರಿಂದ ಆರು ಸಾವಿರ ಹೆಸರುಗಳನ್ನು ಕಡೆದು ಹಾಕಲಾಗಿದೆ. ಅಂದರೆ 15000 ಮತಗಳು ಅನಾಯಾಸವಾಗಿ ಬಿಜೆಪಿಯ ಬುಟ್ಟಿಗೆ ಸೇರುತ್ತಿವೆ. ಬಿಜೆಪಿ ಆಟ ಆಡುತ್ತಿರುವುದು ಇವಿಎಂ ನಲ್ಲಿ ಅಲ್ಲ, ಮತದಾರರ ಪಟ್ಟಿಯಲ್ಲಿ ಎಂಬುದು ಈಗ ಸ್ಪಷ್ಟವಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದಿದ್ದು 48 ಲಕ್ಷ ಮತಗಳನ್ನು ಎಲ್ಲ ಏಳು ಲೋಕಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತು. 2020 ರಲ್ಲಿ ಆಮ್ ಆದ್ವಿ ಪಕ್ಷ ಪಡೆದಿದ್ದು 49 ಲಕ್ಷ ಮತಗಳನ್ನು ಆಗ ಅದು 62 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿತ್ತು. ಅಂದರೆ ದೆಹಲಿಯಲ್ಲಿ ಸೋಲು ಗೆಲುವಿನ ಅಂತರ ಕೂದಲೆಳೆಯಷ್ಟು ಸಣ್ಣದು. ಹಾಗಿದ್ದಾಗ 5,000 ದಷ್ಟು ಮತದಾರರನ್ನು ಕಟ್ ಮಾಡುವ, 11,000 ದಷ್ಟು ಮತದಾರರನ್ನು ಸೇರಿಸುವ ಪ್ರಕ್ರಿಯೆ ನಡೆದರೆ ಫಲಿತಾಂಶ ಏನಾಗಿತ್ತು ನೀವೇ ಊಹಿಸಿ.
ಲೋಹಾನಿ












