ಹೊಸ ಕೇಂದ್ರಸಚಿವ ಸಂಪುಟದಲ್ಲಿ ಜೇಟ್ಲಿ ಇರಲಾರರು!

0
569

ಹೊಸದಿಲ್ಲಿ,ಮೇ 25: ನರೇಂದ್ರ ಮೋದಿ ಪುನಃ ಅಧಿಕಾರೋಹಣ ಮಾಡಿದರೂ ಅವರ ಸಚಿವ ಸಂಪುಟದಲ್ಲಿ ಸಚಿವ ಅರುಣ್ ಜೇಟ್ಲಿ ಇರಲಾರರು ಎಂದು ಮೂಲಗಳು ತಿಳಿಸಿವೆ. ಅರುವತ್ತಾರು ವರ್ಷದ ಜೇಟ್ಲಿ ರೋಗಪೀಡಿತರಾಗಿದ್ದು ಚಿಕಿತ್ಸೆಗಾಗಿ ಅಮೆರಿಕ ಅಥವಾ ಬ್ರಿಟನ್‍ಗೆ ತೆರಳಲಿರುವರು. ಅವರಿಗೆ ಯಾವ ರೋಗವಿದೆ ಎನ್ನುವ ವಿವರವನ್ನು ಅವರು ಬಹಿರಂಗ ಪಡಿಸಿಲ್ಲ. 2014ರಲ್ಲಿ ಅಮೃತಸರದಲ್ಲಿ ಸ್ಪರ್ಧಿಸಿ ಸೋತರೂ ಮೋದಿ ಅವರನ್ನು ವಿತ್ತ ಸಚಿವರನ್ನಾಗಿ ಮಾಡಿದ್ದರು. ಈ ಸಲ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.

ಕೆಲವು ವಾರಗಳಿಂದ ಅವರ ಆರೋಗ್ಯ ಬಿಗಡಾಯಿಸಿದೆ ಎನ್ನಲಾಗಿದೆ. ಗಂಟಲು ಸಮಸ್ಯೆಯಿರುವುದರಿಂದ ಹೆಚ್ಚು ಸಮಯ ಅವರು ಮಾತಾಡುವಂತಿಲ್ಲ. 2018ರಲ್ಲಿ ಅವರಿಗೆ ಕಿಡ್ನಿ ಕಸಿ ಚಿಕಿತ್ಸೆ ಮಾಡಲಾಗಿತ್ತು. 2014ರಲ್ಲಿ ಅವರಿಗೆ ಶಸ್ತ್ರ ಕ್ರಿಯೆ ನಡೆದಿತ್ತು, ಕಾಲಿನ ಅರ್ಬುದ ರೋಗದಿಂದಾಗಿ ಈ ವರ್ಷ ಜನೆವರಿಯಲ್ಲಿ ಚರ್ಮ ಬದಲಾವಣೆ ಶಸ್ತ್ರಕ್ರಿಯೆ ನಡೆಸಲಾಯಿತು.