ಬಾಗ್ದಾದ್, ಮೇ 28: ಎಲ್ಲ ಸೈನಿಕ, ಆರ್ಥಿಕ ದಿಗ್ಬಂಧನಕ್ಕೆ ಮತ್ತು ದಾಳಿಗಳಿಗೆ ಇರಾನ್ ಹೆದರುವುದಿಲ್ಲ. ಎಂಥ ಯುದ್ಧವಾದರೂ ಅದನ್ನು ಎದುರಿಸಿ ಹೋರಾಡುವ ಶಕ್ತಿ ಇರಾನಿಗಿದೆ ಎಂದು ವಿದೇಶ ಸಚಿವ ಮುಹಮ್ಮದ್ ಜವಾದ್ ಸಾರಿಫ್ ಹೇಳಿದರು. ಇರಾನ್ನೊಂದಿಗೆ ಮಾಡಿಕೊಂಡ ಅಣು ಒಪ್ಪಂದದದ ಸಂರಕ್ಷಣೆಗೆ ಒಪ್ಪಂದದಲ್ಲಿ ಸಹಿ ಹಾಕಿದ ಯುರೋಪಿಯನ್ ದೇಶಗಳು ತಯಾರಾಗಬೇಕೆಂದು ಅವರು ಹೇಳಿದರು.
ಇರಾಕ್ ವಿದೇಶ ಸಚಿವ ಮುಹಮ್ಮದ್ ಅಲಿ ಅಲ್ ಹಾಕಿಮ್ರನ್ನು ಭೇಟಿ ಮಾಡಿದ ಬಳಿಕ ಬಾಗ್ದಾದ್ನಲ್ಲಿ ಪತ್ರಕರ್ತರೊಂದಿಗೆ ಸಾರಿಫ್ ಮಾತಾಡುತ್ತಿದ್ದರು. ಗಲ್ಫ್ ಅರಬ್ ದೇಶಗಳಲ್ಲಿ ಸಮತೋಲನಯುತ ಸಂಬಂಧ ಸ್ಥಾಪನೆಯನ್ನು ಇರಾನ್ ಬಯಸುತ್ತಿದೆ. ಆದ್ದರಿಂದ ಅವರೊಂದಿಗೆ ದಾಳಿ ರಹಿತ ಒಪ್ಪಂದ ಮಾಡಿಕೊಳ್ಳಲು ಇರಾನ್ ಸಿದ್ಧವಿದೆ ಎಂದರು.
ಅಮೆರಿಕ,ಇರಾನ್ ಪರಸ್ಪರ ಘರ್ಷಣಾ ಸ್ಥಿತಿಯ ಪರಿಹಾರಕ್ಕಾಗಿ ನೆರೆಯ ದೇಶ ಎಂಬ ನೆಲೆಯಲ್ಲಿ ಮಧ್ಯಸ್ಥಿಕೆಗೆ ಇರಾಕ್ ಸಿದ್ಧವಿದೆ ಎಂದು ಅಲಿ ಅಲ್ಹಾಕಿಂ ಹೇಳಿದರು. ಇರಾನ್ ವಿರುದ್ಧ ಹೇರಲಾದ ಆರ್ಥಿಕ ದಿಗ್ಬಂಧನ ಸರಿಯಾಗಿದೆ ಎಂದು ಭಾವಿಸುವುದಿಲ್ಲ ಎಂದು ಇರಾಕ್ ವಿದೇಶ ಸಚಿವರು ಈ ಸಂದರ್ಭದಲ್ಲಿ ಹೇಳಿದರು.












