ಉತ್ತರಪ್ರದೇಶ,ಮೇ 27: ದಿಲ್ಲಿ ಸಮೀಪದ ನೋಯಿಡದ ನೂರ್ಪುರ ಗ್ರಾಮದಲ್ಲಿ ಮನೆಯೊಂದರಿಂದ ಇಪ್ಪತ್ತು ಕೆಜಿ ಗೋಮಾಂಸ ವಶಪಡಿಸಿಕೊಳ್ಳಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ ಎಂದು ದಾದ್ರಿಯ ಉಪಪೊಲೀಸಾಯುಕ್ತರು ತಿಳಿಸಿದ್ದಾರೆ. ಗುಪ್ತ ಸೂಚನೆಯಡಿಯಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದು ಮನೆಯಲ್ಲಿ ಫ್ರಿಡ್ಜ್ ನೊಳಗಿಟ್ಟಿದ್ದ 20 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪಶು ಚಿಕಿತ್ಸಾಲಯದ ತಂಡ ಸ್ಥಳಕ್ಕಾಗಮಿಸಿ ಗೊಮಾಂಸದ ಸ್ಯಾಂಪಲ್ ಸಂಗ್ರಹಿಸಿ ಮಥುರಾದ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಮನೆಯಲ್ಲಿ ಗೋ ಹತ್ಯೆಗೆ ಬಳಸಲಾದ ಹರಿತ ಆಯುಧ ಮತ್ತು ಅಕ್ರಮವಾಗಿ ಇಟ್ಟುಕೊಂಡ ಬಂದೂಕು ಮತ್ತು ಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಉಪಾಯುಕ್ತರು ತಿಳಿಸಿದರು. ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಗೋಹತ್ಯೆಯಲ್ಲಿ ನೆರೆ ಮನೆಯ ವ್ಯಕ್ತಿಯೂ ಶಾಮೀಲಾಗಿದ್ದು ಗೊತ್ತಾಗಿತ್ತು. ನಂತರ ಆತನನ್ನು ಬಂದಿಸಲಾಯಿತು. ಇಬ್ಬರ ವಿರುದ್ಧ ಪ್ರಾಣಿ ದೌರ್ಜನ್ಯ ಕಾನೂನು, ಅಕ್ರಮ ಶಸ್ತ್ರಾಸ್ತ್ರ ಇಟ್ಟು ಕೊಂಡ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾದ್ರಿಯ ಬಿಸಾಡ ಗ್ರಾಮದಲ್ಲಿ ಗೋಹತ್ಯೆಯ ಕುರಿತ ಉದ್ವಿಗ್ನತೆಯಲ್ಲಿ ಅಖ್ಲಾಕ್ರನ್ನು ಗೋರಕ್ಷಕರು ಈ ಹತ್ಯೆ ಮಾಡಿದ್ದು ದೇಶಾದ್ಯಂತ ಈ ಹಿಂದೆ ಬಹುದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು.












