ಸನ್ಮಾರ್ಗ ವಾರ್ತೆ
ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಪ್ರಶ್ನಿಸಿದ್ದಲ್ಲದೆ ಫೆಲೆ ಸ್ತೀನ್ ಪರ ನಿಲುವನ್ನು ವ್ಯಕ್ತಪಡಿಸಿರುವ ಟಫ್ಸ್ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ತುರ್ಕಿಯ ವಿದ್ಯಾರ್ಥಿನಿಯನ್ನು ಗಡೀಪಾರು ಗೊಳಿಸುವ ಟ್ರಂಪ್ ಸರಕಾರದ ನಿರ್ಧಾರಕ್ಕೆ ಮೆಸಚು ಸೆಟ್ಸ್ ಫೆಡರಲ್ ನ್ಯಾಯಾಧೀಶರು ತಡೆ ವಿಧಿಸಿದ್ದಾರೆ. ನ್ಯಾಯಾಲಯ ತೀರ್ಪು ನೀಡುವವರೆಗೆ ಈ ವಿದ್ಯಾರ್ಥಿನಿಯನ್ನು ಗಡೀಪಾರು ಗೊಳಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ಕಳೆದ ವಾರ ರುಮೈ ಝ್ ಒಸ್ ತುರ್ಕಿ ಎಂಬ 30 ವರ್ಷದ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅಮೇರಿಕವು ಭಯೋತ್ಪಾದನಾ ಪಟ್ಟಿಯಲ್ಲಿ ಸೇರಿಸಿರುವ ಹಮಾಸ್ ಸಂಘಟನೆಯನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಿ ಹೀಗೆ ಮಾಡಲಾಗಿತ್ತು. ಆದರೆ ಇದಕ್ಕೆ ಯಾವ ಆಧಾರವನ್ನೂ ಕೊಟ್ಟಿರಲಿಲ್ಲ. ಫುಲ್ ಬ್ರೈಟ್ ಸ್ಕಾಲರ್ಶಿಪ್ ನಲ್ಲಿ ಈಕೆ ಅಮೆರಿಕಕ್ಕೆ ಬಂದಿದ್ದರು ಮತ್ತು ಟಪ್ಸ್ ಚೈಲ್ಡ್ ಸ್ಟಡಿ ಅಂಡ್ ಹ್ಯೂಮನ್ ಡೆವಲಪ್ಮೆಂಟ್ ಡಾಕ್ಟರಲ್ಪ್ರೋಗ್ರಾಮ್ ವಿದ್ಯಾರ್ಥಿ ಆಗಿದ್ದಾರೆ.
ಇಸ್ರೇಲ್ ಜೊತೆಗಿನ ಸಂಬಂಧ ಇರುವ ಕಂಪೆನಿಗಳಿಂದ ದೂರ ನಿಲ್ಲಬೇಕು ಮತ್ತು ಫೆಲಸ್ತೀನಿಯರ ಜನಾಂಗ ಹತ್ಯೆಯನ್ನು ವಿರೋಧಿಸಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ಈ ವಿಶ್ವವಿದ್ಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ವಿಶ್ವವಿದ್ಯಾಲಯದ ಟಪ್ಸ್ ಡೈಲಿ ಎಂಬ ಪತ್ರಿಕೆಯಲ್ಲಿ ವರ್ಷದ ಹಿಂದೆ ಈಕೆ ಲೇಖನ ಬರೆದಿದ್ದರು. ಇದನ್ನೇ ಆಧಾರವಾಗಿಸಿಕೊಂಡು ಇದೀಗ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಫೆಲೆ ಸ್ತೀನ್ ಪರ ವಿದ್ಯಾರ್ಥಿಗಳ ವಿರುದ್ಧ ಅಮೆರಿಕ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಈವರೆಗೆ ಸುಮಾರು 300 ವಿದ್ಯಾರ್ಥಿಗಳ ವಿಸಾವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.












