ಸನ್ಮಾರ್ಗ ವಾರ್ತೆ
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಪ್ರಥಮ ಸ್ಥಾನವನ್ನು ಪಡೆದಿದೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನವನ್ನು ಪಡೆದಿದೆ. ಯಾದಗಿರಿ ಜಿಲ್ಲೆಯು ಕೊನೆಯ ಸ್ಥಾನದಲ್ಲಿದೆ. ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಮೂಲ್ಯ ಕಾಮತ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಮಂಗಳೂರು ಕೋಡಿಯಾಲ್ ಬೈಲ್ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ. ಅಮೂಲ್ಯ ಕಾಮತ್ ಅವರು 600ಕ್ಕೆ 599 ಅಂಕ ಪಡೆದಿದ್ದಾರೆ.
ಜೊತೆಗೆ ತೀರ್ಥಹಳ್ಳಿಯ ಕುರುವಳ್ಳಿಯ ವಾಗ್ದೇವಿ ಪದವಿ ಪೂರ್ವ ಕಾಲೇಜಿನ ದೀಕ್ಷಾ ಅವರು 600ಕ್ಕೆ 599 ಅಂಕವನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಇಂದು ಪದವಿ ಪೂರ್ವ ಕಾಲೇಜಿನ ಎಲ್ ಆರ್ ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು 600 ರಲ್ಲಿ 597 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ ಅವರು 600 ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಬಾರಿ ಒಟ್ಟು 73.45 ಶೇಕಡ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ ಶೇಕಡ 53.29 ಮಂದಿ ಉತ್ತೀರ್ಣರಾಗಿದ್ದರೆ ವಾಣಿಜ್ಯ ವಿಭಾಗದಲ್ಲಿ ಶೇಕಡ 76.07 ಮತ್ತು ವಿಜ್ಞಾನ ವಿಭಾಗದಲ್ಲಿ 82.54 ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.












