ನಿತೀಶ್ ಮತ್ತು ಚಂದ್ರಬಾಬು ನಾಯ್ಡು ರಾಜಕೀಯ ಭವಿಷ್ಯ ಈ ಮೂಲಕ ಅಂತ್ಯವಾಗಲಿದೆ: ಜಮಾಅತೆ ಇಸ್ಲಾಮಿ ಹಿಂದ್

0
761

ಸನ್ಮಾರ್ಗ ವಾರ್ತೆ

ವಕ್ಫ್ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ತೀರ್ಮಾನಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರಾಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ಹೇಳಿದ್ದಾರೆ. ವಕ್ಫ್ ಮಸೂದೆಯನ್ನು ಕಾಯ್ದೆಯಾಗಿ ಅಂಗೀಕರಿಸುವುದಕ್ಕೆ ಕೇಂದ್ರ ಸರಕಾರ ಅವಲಂಬಿಸಿರುವ ದಾರಿಯು ಅತ್ಯಂತ ಖಂಡನಾರ್ಹವಾಗಿದ್ದು ಇದು ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿ ಕಪ್ಪು ಅಧ್ಯಾಯವಾಗಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಹುಸೇನಿ ಅವರು ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ನಡೆಯ ವಿರುದ್ಧ ಕಿಡಿಕಾರಿದರು. ಸೆಕ್ಯುಲರಿಸಂನ ಚಾಂಪಿಯನ್ ಗಳಂತೆ ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಿದ್ದ ಈ ಇಬ್ಬರು ನಾಯಕರು ರಾಜಕೀಯ ಅವಕಾಶವಾದಿತನಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಇವರಿಬ್ಬರು ಮುಂದಿನ ದಿನಗಳಲ್ಲಿ ಇದಕ್ಕಾಗಿ ಭಾರಿ ಬೆಲೆ ತೆರಲಿದ್ದಾರೆ ಮತ್ತು ಇನ್ನೆಂದು ಅವರು ಚುನಾವಣಾ ರಾಜಕೀಯದಲ್ಲಿ ಗೆಲುವು ಪಡೆಯಲಾರರು ಎಂದವರು ಹೇಳಿದ್ದಾರೆ.

ಇವರಿಬ್ಬರಿಗೂ ಬಹಿಷ್ಕಾರ ಹೇರಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದನ್ನು ನಾನು ಜನರಿಗೆ ಬಿಡುತ್ತಿದ್ದೇನೆ. ಆದರೆ ಈ ಇಬ್ಬರು ನಾಯಕರು ಈವರೆಗೆ ತಮ್ಮನ್ನು ಸೆಕ್ಯುಲರ್ ಗಳಂತೆ ಮತ್ತು ಸಂವಿಧಾನ ರಕ್ಷಕರಂತೆ ಬಿಂಬಿಸಿದ್ದಾರೆ. ಆದರೆ ಮುಸ್ಲಿಮರ ಹಕ್ಕುಗಳನ್ನು ಕಸಿಯುವ ಮಸೂದೆಗೆ ಅವರು ಬೆಂಬಲ ನೀಡಿರುವುದು ಆಘಾತಕಾರಿ. ಇವರ ಈ ಬೆಂಬಲವು ಸೆಕ್ಯುಲರಿಸಂನ ಹೆಸರಲ್ಲಿ ಅವರು ತೊಟ್ಟಿರುವ ಮುಖವಾಡವನ್ನ ಬಯಲಿಗೆಳೆದಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರದೊಂದಿಗೆ ನಾವೆಂದೂ ಮಾತುಕತೆಯನ್ನು ತಿರಸ್ಕರಿಸಿಲ್ಲ. ಮಾತ್ರ ಅಲ್ಲ ಮುಸ್ಲಿಂ ಸಮುದಾಯದೊಂದಿಗೆ ಮಾತುಕತೆ ನಡೆಸುವಂತೆ ಮತ್ತು ಸಂಬಂಧವನ್ನು ಇಟ್ಟುಕೊಳ್ಳುವಂತೆ ನಾವು ಸರಕಾರಕ್ಕೆ ಆಗ್ರಹಿಸುತ್ತಲೇ ಬಂದಿದ್ದೇವೆ. ಪಾಟ್ನಾದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಾವು ನಿತೀಶ್ ಕುಮಾರ್ ಜೊತೆಗೆ ಮಾತುಕತೆಗೆ ಆಗ್ರಹಿಸಿದೆವು . ಜೆಪಿಸಿ ಕಮಿಟಿಯ ಜೊತೆಗೆ ಹಲವು ಸುತ್ತುಗಳ ಮಾತುಕತೆಯನ್ನು ನಾವು ನಡೆಸಿದ್ದೇವೆ ಮತ್ತು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ. ಇವೆಲ್ಲವೂ ಕೂಡ ಸರಕಾರದ ಜೊತೆಗೆ ನಾವು ಮಾತುಕತೆಗೆ ಸಿದ್ಧವಿದ್ದೇವೆ ಎಂಬುದರ ದೃಡೀಕರಣವಾಗಿದೆ ಎಂದವರು ಹೇಳಿದ್ದಾರೆ.