ಕುರ್‌ಆನ್ ಪಠಣ ನಿಮಗೆ ಸುಖಭಾವ ನೀಡುತ್ತದೆಯೇ?

0
506

✍️ ಶಮೀರ್ ಖಾಝಿ ವಿ.

ಕುರ್‌ಆನ್ ವೈಯಕ್ತಿಕ ಶುದ್ಧೀಕರಣಕ್ಕೂ ಸಾಮಾಜಿಕ ಸಬಲೀಕರಣಕ್ಕೂ ಮೂಲಭೂತ ಗೈಡ್ ಆಗಿದೆ. ಎಲ್ಲವೂ ಅಲ್ಲಾಹನಿಂದಲೇ ಆಗುವುದರಿಂದ, ಅವನೊಂದಿಗಿನ ಆಂತರಿಕ ಸಂಬಂಧವೇ ನಮ್ಮ ಇಹ-ಪರಲೋಕ ಯಶಸ್ಸನ್ನು ನಿರ್ಧರಿಸುತ್ತದೆ. ಈ ಸಂಬಂಧವನ್ನು ಗಟ್ಟಿಯಾಗಿಸಲು ಕುರ್‌ಆನ್ ಮಾರ್ಗದರ್ಶಿಯಾಗುತ್ತದೆ.

ಕುರ್‌ಆನ್ ಪಾರಾಯಣ ಮಾಡುವುದು ಮುಸ್ಲಿಮರ ಜೀವನದ ಒಂದು ಮುಖ್ಯ ಭಾಗವಾಗಿದೆ, ಅರ್ಥವನ್ನು ತಿಳಿಯುವ ಪ್ರಯತ್ನವೂ ಮತ್ತು ಅದರ ಸಂದೇಶವನ್ನು ಅರ್ಥೈಸುವ ಕಲಿಕೆಯೂ ಈಗ ಹಲವರ ಗಮನ ಸೆಳೆದಿದೆ. ಆದರೆ ಕುರ್‌ಆನ್ ಪಾರಾಯಣ ಮಾಡುವುದು ಮಾತ್ರ ಸಾಕಾಗುವುದಿಲ್ಲ.

ಜೊತೆಗೇ ನಿರಂತರ ಸ್ಮರಣೆ (ದಿಕ್ರ್) ಮತ್ತು ಆಳವಾದ ಚಿಂತನೆ (ತದಬ್ಬುರ್) ಬೇಕಾಗುತ್ತದೆ. ಪ್ರತಿ ದಿನವೂ ಕುರ್‌ಆನ್‌ನಿಂದ ಬದುಕುವುದಕ್ಕೆ ಸಾಧ್ಯವಾಗಬೇಕು. ಕೆಲವು ವಿಶಿಷ್ಟ ಆಯತ್‌ಗಳನ್ನು ಪ್ರಾರ್ಥನೆ ರೂಪದಲ್ಲಿ ಓದುವ ಅಭ್ಯಾಸ ನಾವು ರೂಢಿಸಿಕೊಳ್ಳಬೇಕು. ಇದರಿಂದ ನಮ್ಮ ಹೃದಯವು ಕುರ್‌ಆನ್‌ನ ಪ್ರಭಾವಕ್ಕೆ ಒಳಗಾಗುತ್ತದೆ ಹಾಗೂ ಅಲ್ಲಾಹನೊಂದಿಗೆ ಆಧ್ಯಾತ್ಮಿಕ ಸಂಬಂಧ ಗಟ್ಟಿ ಆಗುತ್ತದೆ.

ವರ್ತಮಾನದ ಕೆಲವು ಕ್ರಿಯೆಗಳ ಪ್ರಜ್ಞಾ ಪೂರ್ವಕ ಪುನರಾವರ್ತನೆಯು ಮನುಷ್ಯನಲ್ಲಿ ಮಹತ್ತರವಾದ ಬದಲಾವಣೆಗಳನ್ನು ಉಂಟು ಮಾಡುತ್ತದೆ ಎಂಬ ಮಾನಸಿಕ ಪಾಠವು ಇಸ್ಲಾಮಿಕ್ ಬೋಧನೆಗಳ ಒಂದು ಭಾಗವಾಗಿದೆ. ಇದು ದಿಕ್ರ್‌ನ ಸಂಖ್ಯೆ ಮತ್ತು ಪುನರಾವರ್ತನೆಯ ಹಿಂದಿನ ತತ್ವಗಳಲ್ಲಿ ಒಂದಾಗಿದೆ. ಕೆಲವು ಪದಗಳು ಮತ್ತು ಸೂರಾಗಳನ್ನು ನಿಯಮಿತ ಮಧ್ಯಂತರದಲ್ಲಿ ಪಠಿಸಬೇಕು ಎಂದು ಪ್ರವಾದಿ(ಸ) ಕಲಿಸಿದ್ದಾರೆ ಎಂಬುದನ್ನು ನೆನಪಿಡಿ.

ಪವಿತ್ರ ಕುರ್‌ಆನ್ ನಮ್ಮನ್ನು ಹೊಂದಲು ಮತ್ತು ನಮ್ಮ ಜೀವನವನ್ನು ಸ್ಪರ್ಶಿಸಲು ಮೂರು ಮಾರ್ಗಗಳಿವೆ. ಅಲ್ಲಾಹನಲ್ಲಿ ನಂಬಿಕೆಯನ್ನು ಬಲಪಡಿಸುವುದು, ಹೃದಯವನ್ನು ಶುದ್ಧೀಕರಿಸುವುದು ಮತ್ತು ಅಲ್ಲಾಹನ ಸಹಾಯದಲ್ಲಿ ದೃಢವಾದ ಭರವಸೆ. ಈ ಮೂರು ಹಂತಗಳಲ್ಲಿ ನಾವು ಕುರ್‌ಆನ್‌ನೊಂದಿಗೆ ಸಂಬಂಧವನ್ನು ಹೊಂದಿದ್ದೇವೆಯೇ ಎಂದು ಪರಿಗಣಿಸಬೇಕಾಗಿದೆ. ನಮ್ಮ ಪ್ರತಿಯೊಂದು ಉಸಿರಿನಲ್ಲಿ ಅಲ್ಲಾಹನು ಪ್ರವೇಶಿಸುವ ರೀತಿಯಲ್ಲಿ ನಾವು ಕುರ್‌ಆನ್ ಅನ್ನು ನಮ್ಮ ನಾಲಿಗೆ, ತುಟಿಗಳು ಮತ್ತು ಮನಸ್ಸಿನ ಮೇಲೆ ಇಟ್ಟುಕೊಳ್ಳಬೇಕು ಮತ್ತು ನಂತರ ಅದನ್ನು ನಮ್ಮ ಕ್ರಿಯೆಗಳಲ್ಲಿ ಪ್ರತಿಬಿಂಬಿಸಬೇಕು.

ಕುರ್‌ಆನ್ ಮೂರು ರೀತಿಯಲ್ಲಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ:

  1. ಅಲ್ಲಾಹನ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ: ಕುರ್‌ಆನ್ ಓದುವುದರ ಮೂಲಕ ನಮ್ಮ ಈಮಾನ್ (ವಿಶ್ವಾಸ) ಗಟ್ಟಿಗೊಳಿಸಬಹುದು. ಅಲ್ಲಾಹನ ಸ್ಮರಣೆಯೊಂದಿಗೆ ಬದುಕಿದಾಗ, ಅವನಿಗೆ ಸಮರ್ಪಿತ ಜೀವನ ನಡೆಸಿದಾಗ, ನಮ್ಮ ನಂಬಿಕೆ ಮತ್ತಷ್ಟು ಬಲವಾಗುತ್ತದೆ.
  2. ಹೃದಯದ ಶುದ್ಧೀಕರಣ: ಇಹಲೋಕದ ಪ್ರಭಾವಗಳಿಂದ ಮನಸ್ಸು ಮೋಹಿತವಾಗಬಾರದು. ಕುರ್‌ಆನ್ ನಾವು ಓದಿದಂತೆ ಮನಸ್ಸಿನಲ್ಲಿ ಬೆಳಕು ಮೂಡಿಸುತ್ತದೆ, ಅಶುದ್ಧ ಯೋಚನೆಗಳನ್ನು ದೂರ ಮಾಡುತ್ತದೆ, ಹೃದಯವನ್ನು ಶುದ್ಧ ಗೊಳಿಸುತ್ತದೆ.
  3. ಅಲ್ಲಾಹನ ಸಹಾಯದ ಮೇಲಿನ ನಿರೀಕ್ಷೆ: ಜೀವನದಲ್ಲಿ ಏನೇ ಸಂಕಟ ಬಂದರೂ ಅಲ್ಲಾಹುವಿನ ಮೇಲೆ ಭರವಸೆ ಇಡುವಂತೆ ಕುರ್‌ಆನ್ ನಮ್ಮನ್ನು ಪ್ರೇರೇಪಿಸುತ್ತದೆ. ಅವನು ಮಾತ್ರ ನಿಜವಾದ ಸಹಾಯಕನಾಗಿದ್ದಾನೆ ಎಂಬ ದೃಢವಿಶ್ವಾಸ ನಾವು ಹೊಂದಬೇಕು.

ನಾವು ಪ್ರತಿನಿತ್ಯವೂ ಅಲ್ಲಾಹನ ಸ್ಮರಣೆಯಲ್ಲಿ ನಿರತರಾಗಿದ್ದರೆ, ಕುರ್‌ಆನ್‌ನಿಂದ ಜೀವನ ರೂಪಿಸಿಕೊಂಡರೆ, ಅದನ್ನು ನಮ್ಮ ಮಾತು ಮತ್ತು ಕೆಲಸದಲ್ಲಿ ತೋರಿಸಿದರೆ, ನಮ್ಮ ಹೃದಯದಲ್ಲೂ ನಮ್ಮ ದೈನಂದಿನ ಕ್ರಿಯೆಗಳಲ್ಲೂ ಅಲ್ಲಾಹನ ಸಾನ್ನಿಧ್ಯ ಅನುಭವಿಸಬಹುದು ಹೃದಯದ ಶುದ್ಧೀಕರಣ ನಮ್ಮ ಮನಸ್ಸಿನಲ್ಲಿರುವ ಎಲ್ಲ ಮಲಿನತೆಯನ್ನು ತೆಗೆದು ಹಾಕಿ, ಹೃದಯವನ್ನು ಶುದ್ಧಗೊಳಿಸುವ ಶಕ್ತಿಯು ಕುರ್‌ಆನ್‌ಗಿದೆ. ಅಲ್ ಫುರ್‌ಖಾನ್ ಎಂದರೆ ಸತ್ಯ ಮತ್ತು ನಿತ್ಯವನ್ನು ಬೇರ್ಪಡಿಸುವ ತತ್ವಜ್ಞಾನ.

ಕುರ್‌ಆನ್ ನಮ್ಮ ನಾಲಗೆ ಮತ್ತು ಮನದಲ್ಲಿ ತುಂಬಿಕೊಳ್ಳುವಾಗ ಒಳಿತುಗಳಿಂದ ಮುನ್ನಡೆಯಲು ಮತ್ತು ಕೆಡುಕಿನಿಂದ ದೂರ ಉಳಿಯುವಂತಹ ಹುಮ್ಮಸ್ಸು ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ಕಾರಣವೆಂದರೆ ಒಳಿತುಗಳನ್ನು ಮಾಡುವ ಪ್ರೇರಣೆ ಕುರ್‌ಆನ್‌ನಿಂದ ಲಭಿಸುತ್ತದೆ. ಅಂತಹ ಸೂಕ್ತಗಳನ್ನು ಓದುವಾಗ ಆ ಒಳಿತುಗಳನ್ನು ಮಾಡಲು ನಮ್ಮ ಮನಸ್ಸು ಹಾತೊರೆಯಬೇಕು. ಪ್ರತಿಯೊಂದು ಅಧ್ಯಾಯಗಳನ್ನು ಓದುವಾಗ ಅದರಲ್ಲಿರುವ ಒಳಿತುಗಳನ್ನು ನಾನು ಮಾಡುತ್ತಿದ್ದೇನೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಕುರ್‌ಆನ್ ಏನನ್ನು ಪ್ರೋತ್ಸಾಹಿಸುತ್ತದೆಯೋ, ಅದನ್ನು ಅನುಸರಿಸಲು ನಮ್ಮ ಮನಸ್ಸು ಕಾತರವಾಗಬೇಕು.

ಪ್ರತಿ ಆಯತ್ ಓದಿದಾಗ, ಅದರಲ್ಲಿ ಹೇಳಿರುವ ಕಾರ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅನ್ವಯಿಸಿದ್ದೇವೆಯೇ ಎಂಬುದನ್ನು ಆತ್ಮ ಅವ ಲೋಕನ ಮಾಡಬೇಕು. ಪ್ರತಿದಿನ ನಾವೇನಾದರೂ ಒಂದು ಸೂರಾ ಪೂರೈಸಿದರೆ, ಅಂದಿನ ದಿನದಲ್ಲಿ ಕುರ್‌ಆನ್ ತತ್ವಗಳನ್ನು ಎಷ್ಟು ಪಾಲಿಸಿದ್ದೇವೆ ಎಂಬುದರ ಲೆಕ್ಕ ಮಾಡಬೇಕು.

ಕುರ್‌ಆನ್‌ನಿಂದ ಜೀವನದ ಮೌಲ್ಯವನ್ನು ಅಳೆಯುವುದು.

ಕುರ್‌ಆನ್ ನಮ್ಮ ಜೀವನದ ಒಂದು ಮಾಪಕವಾಗಬೇಕು. ಇದನ್ನು ಆಧಾರವಾಗಿ ಇಟ್ಟುಕೊಂಡು, ನಮ್ಮ ಪ್ರತಿ ನಡವಳಿಕೆ ಇರಬೇಕು. ಕುರ್‌ಆನ್‌ನ ಆಯತ್‌ಗಳನ್ನು ಪುನರಾವರ್ತಿಸುವ ಮೂಲಕ, ನಾವು ಮನಸ್ಸನ್ನು ಸರಿಯಾಗಿ ಇಟ್ಟುಕೊಳ್ಳಬಹುದು. ಕುರ್‌ಆನ್‌ನಲ್ಲಿ ಹೇಳಿದಂತೆ ಬದುಕಿದರೆ, ನಮ್ಮ ಸಮಯವು ಉತ್ತಮ ಕೆಲಸಗಳಿಗೆ ಮೀಸಲಾಗುತ್ತದೆ, ದುಷ್ಟತೆಯ ಹಾಳು ಪ್ರಭಾವದಿಂದ ದೂರವಿರಬಹುದು.

ಅಸೂಯೆ, ಹಗೆತನ, ಪ್ರತೀಕಾರ, ಸುಳ್ಳು, ಅಹಂಕಾರ, ಪರಧೂಷಣೆ, ಅತಿಯಾಸೆ, ವಂಚನೆ ಮುಂತಾದ ಕೆಡುಕಿನ ಮಾರ್ಗದಿಂದ ತಡೆಯುವ ಹಲವು ವಚನಗಳು ಕುರ್‌ಆನ್‌ನಲ್ಲಿ ಇದೆ. ಇಂತಹ ಆಯತುಗಳನ್ನು ಪದೇ ಪದೇ ಓದುತ್ತಿದ್ದರೆ ಇಂತಹ ಪಾಪಗಳಿಂದ ನಾವು ಶುದ್ಧರಾಗುತ್ತೇವೆ. ವಯಮ್ನವೂನಲ್ ಮಾವೂನ್ ಎಂಬ ಸಣ್ಣ ಸೂಕ್ತ ನಾವು ಓದುತ್ತಿದ್ದರೆ ಜನರಿಗೆ ದೊರೆಯುವ ಒಳಿತನ್ನು ತಡೆಯಬೇಕೆಂದು ನಮಗೆ ತೋರುವುದಿಲ್ಲ.

ಕುರ್‌ಆನ್ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸುತ್ತದೆ. ನಮಾಝ್, ದಾನ ಮಾಡುವುದು, ಒಳ್ಳೆಯ ಕೆಲಸಗಳಲ್ಲಿ ತೊಡಗುವುದು, ಉತ್ತಮ ಮಾತುಗಳನ್ನು ಹೇಳುವುದು ಇವೆಲ್ಲವೂ ಕುರ್‌ಆನ್ ನಮಗೆ ಉಪದೇಶಿಸುತ್ತಿರುವ ಕಾರ್ಯಗಳಾಗಿವೆ.

ಕುರ್‌ಆನ್‌ನಲ್ಲಿ ಮನಸ್ಸಿಗೆ ಶಾಂತಿ ಸಮಾಧಾನ ನೀಡುವ ಹಲವು ವಚನಗಳಿವೆ. ಅವುಗಳನ್ನು ದಿನವೂ ಅರ್ಥೈಸಿಕೊಂಡು ಪುನರಾವರ್ತಿಸಿ ಓದಿದರೆ, ನಾವು ಎದುರಿಸುತ್ತಿರುವ ಒತ್ತಡಗಳು ನಿವಾರಣೆ ಯಾಗುವುದು. ಕುರ್‌ಆನ್ ಸ್ಪಷ್ಟವಾಗಿ ಹೇಳುತ್ತದೆ:

“ಅಲ್ಲಾಹನ ಸ್ಮರಣೆಯಿಂದ ಹೃದಯಗಳಿಗೆ ಶಾಂತಿ ದೊರಕುತ್ತದೆ ಮತ್ತು ಯಾರು ನನ್ನ ಸ್ಮರಣೆಯಿಂದ ಮುಖ ತಿರುಗಿಸುತ್ತಾರೋ, ಅವರ ಜೀವನವು ಸಂಕಟದಿಂದ ತುಂಬಿರುತ್ತದೆ!”

ಅಂದರೆ ಅಲ್ಲಾಹ್ ಮತ್ತು ಪವಿತ್ರ ಕುರ್‌ಆನ್‌ನೊಂದಿಗೆ ಎರಡು ರೀತಿಯ ನಿಲುವುಗಳು ಮನುಷ್ಯನನ್ನು ಎರಡು ರೀತಿಯ ಮಾನಸಿಕ ಸ್ಥಿತಿಗೆ ತಲುಪಿಸುತ್ತದೆ. ನಾವು ನಮ್ಮ ಜೀವನದಲ್ಲಿ ಪಾಲಿಸಬೇಕಾದ ಕರ್ತವ್ಯಗಳಿಂದ ವಿಮುಖರಾದರೆ ನಮಗೆ ಹಲವು ರೀತಿಯ ಒತ್ತಡಗಳು ಉಂಟಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ಈ ಎರಡು ವಚನಗಳನ್ನು ನಿರಂತರವಾಗಿ ಹೇಳುವ ವ್ಯಕ್ತಿಗೆ ಅಲ್ಲಾಹನ ಆದೇಶಗಳಿಗೆ ವಿರುದ್ಧವಾಗಿ ಏನು ಮಾಡಲೂ ಸಾಧ್ಯವಾಗುವುದಿಲ್ಲ. ಅದು ತನ್ನ ಜೀವನಕ್ಕೆ ತೊಂದರೆಯನ್ನುಂಟು ಮಾಡುತ್ತದೆ ಎಂದು ಅವನಿಗೆ ತಿಳಿಯುತ್ತದೆ. ಆಗ ಸಹಜವಾಗಿಯೇ ಟೆನ್ಶನ್ ಉಂಟಾಗುವುದಿಲ್ಲ.

ಅಲ್ಲಾಹನೊಂದಿಗಿನ ನಿರೀಕ್ಷೆ ವರ್ಧಿಸುತ್ತದೆ

ಅಲ್ಲಾಹನಲ್ಲಿ ನಂಬಿಕೆ ಇಟ್ಟುಕೊಳ್ಳುವುದು, ಅವನ ಮೇಲೆ ದೃಢವಾದ ಭರವಸೆ ಇಡುವುದು ಕುರ್‌ಆನ್ ನಮಗೆ ಬೋಧಿಸುತ್ತದೆ. ನನ್ನ ಪ್ರಾರ್ಥನೆಗಳನ್ನು ಕೇಳುವ, ನನ್ನ ಮಾತುಗಳಿಗೆ ಪ್ರತಿಸ್ಪಂದಿಸುವ, ನನ್ನ ಹೃದಯವನ್ನು ಅರಿಯುವ ಪರಮ ದಯಾಳುವಾದ ಅಲ್ಲಾಹನನ್ನು ಕುರ್‌ಆನ್ ನಮಗೆ ಪರಿಚಯಿಸುತ್ತದೆ ಕುರ್‌ಆನ್ ನಮಗೆ “ಅಲ್ಲಾಹು ಎಂದಿಗೂ ತನ್ನ ದಾಸರನ್ನು ಕೈ ಬಿಡಲಾರ” ಎಂಬ ನಂಬಿಕೆಯನ್ನು ನೀಡುತ್ತದೆ. ನಾವು ಪ್ರಾರ್ಥಿಸಿದರೆ ಅಲ್ಲಾಹನು ಸ್ವೀಕರಿಸುತ್ತಾನೆ ಎಂಬ ದೃಢವಿಶ್ವಾಸವನ್ನು ನಮ್ಮಲ್ಲಿ ಮೂಡಿಸುತ್ತದೆ.

ಅಲ್ಲಾಹನು ಹೇಳುತ್ತಾನೆ, “ನೀನು ನನ್ನ ದಾಸನನ್ನು ಕೇಳಿದರೆ, ನಾನು ಅವನಿಗೆ ತುಂಬಾ ಹತ್ತಿರವಿರುವವನಾಗಿದ್ದೇನೆ. ಅವನು ನನ್ನನ್ನು ಪ್ರಾರ್ಥಿಸಿದಾಗ ನಾನು ಅವನಿಗೆ ಉತ್ತರಿಸುತ್ತೇನೆ. ಆದ್ದರಿಂದ ಅವರು ನನ್ನ ಆಹ್ವಾನ ಸ್ವೀಕರಿಸಲಿ, ನನ್ನಲ್ಲಿ ವಿಶ್ವಾಸ ಇಡಲಿ, ಹೀಗಾದರೆ ಅವರು ಸನ್ಮಾರ್ಗವನ್ನು ಕಾಣುವರು.” (ಅಲ್ ಬಕರ 2:186).

ಜೀವನದಲ್ಲಿ ನಾವು ಎದುರಿಸುವ ಸಮಸ್ಯೆಗಳು ಸಹಜ. ಆದರೆ ತಕ್ಷಣ ನಿರಾಶೆಗೊಳ್ಳದೆ, ಅಲ್ಲಾಹನ ಮೇಲಿನ ಭರವಸೆ ಮತ್ತಷ್ಟು ಹೆಚ್ಚಿಸಬೇಕು. ಕುರ್‌ಆನ್ ನಮ್ಮನ್ನು ಪ್ರೇರೇಪಿಸುವ ಮತ್ತೊಂದು ಮಹತ್ವದ ವಾಕ್ಯವೇ:

“ಇನ್ನಮಅಲ್ ಉಸ್‌ರಿ ಯುಸ್‌ರಾ” (ನಿಶ್ಚಯವಾಗಿ ಕಠಿಣತೆಯ ಬಳಿಕ ಸುಲಭವಿದೆ.)

ಕುರ್‌ಆನ್‌ನ ಮಾರ್ಗದರ್ಶನವನ್ನು ಅಳವಡಿಸಿಕೊಂಡಿರುವ ವ್ಯಕ್ತಿಯು ಪ್ರಯಾಸಗಳ ಮುಂದೆ ಸುಲಭವಾಗಿ ಕುಗ್ಗುವುದಿಲ್ಲ. ಪ್ರತಿಯೊಂದು ಕಷ್ಟದ ಜೊತೆ ಸುಖ ಇದೆ ಎಂಬ ಕುರ್‌ಆನ್‌ನ ವಾಕ್ಯವನ್ನು (“ಇನ್ನಮಅಲ್ ಉಸ್‌ರಿ ಯುಸ್‌ರಾ”) ಸದಾ ನೆನಪಿಸಿಕೊಂಡರೆ, ನಮ್ಮ ತಾಳ್ಮೆ ಮತ್ತು ನಿರೀಕ್ಷೆ ಗಟ್ಟಿಯಾಗುತ್ತದೆ. ಈಗ ಇರುವ ತೊಂದರೆ ತಾತ್ಕಾಲಿಕವಾಗಿದ್ದು, ಅಲ್ಲಾಹು ಅದನ್ನು ನೀಗಿಸುತ್ತಾನೆ ಮತ್ತು ಸುಲಭವಾದ ಮಾರ್ಗವನ್ನು ಒದಗಿಸುತ್ತಾನೆ ಎಂಬ ವಿಶ್ವಾಸ ವ್ಯಕ್ತಿಯ ಮನಸ್ಸಿಗೆ ಸಮಾಧಾನ ತರುತ್ತದೆ.

ಇನ್ನು ಕೆಲವು ಸಂದರ್ಭಗಳಲ್ಲಿ, ನಮ್ಮ ಕುಟುಂಬದವರೋ, ಸ್ನೇಹಿತರೋ ಯಶಸ್ಸನ್ನು ಸಾಧಿಸಿದಾಗ, ಕೆಲವರಲ್ಲಿ ಅಸೂಯೆ ಹುಟ್ಟಬಹುದು. ದೂರದವರ ಯಶಸ್ಸಿಗಿಂತ, ನಮ್ಮ ಹತ್ತಿರದವರ ಉನ್ನತಿಯನ್ನು ನೋಡಿದಾಗ ಅಸೂಯೆಯಾಗುವುದು ಸಹಜ. ಈ ರೋಗಕ್ಕೆ ಕುರ್‌ಆನ್ ಪರಿಹಾರ ನೀಡುತ್ತದೆ:

“ಅವರು ಅಲ್ಲಾಹು ತನ್ನ ಕೃಪೆಯಿಂದ ಯಾರಿಗಾದರೂ ನೀಡಿದ್ದನ್ನು ನೋಡಿ ಅಸೂಯೆ ಪಡುತ್ತಿದ್ದಾರಾ? ನಾವೇ ಇಬ್ರಾಹಿಂ ಅವರ ವಂಶಕ್ಕೆ ವಚನ ಮತ್ತು ಜ್ಞಾನವನ್ನು ನೀಡಿದ್ದೇವೆ; ನಾವೇ ಅವರಿಗೆ ಅಧಿಕಾರವನ್ನು ನೀಡಿದ್ದೇವೆ.” (ಅನ್ನಿಸಾ- 4:54)
ಈ ಆಯತ್ ಓದಿದ ಒಬ್ಬ ವ್ಯಕ್ತಿ ಚಿಂತಿಸಬೇಕಾದುದು ಏನು?

“ನಾನು ಪ್ರಾರ್ಥಿಸುವ, ನಮಾಝ್ ಮಾಡುವ, ಸುಜೂದ್ ಮಾಡುವ ಅಲ್ಲಾಹು ಅವನ ಅನುಗ್ರಹವನ್ನು ಯಾರಿಗೆ ಬೇಕೋ ಅವರಿಗೆ ನೀಡುತ್ತಾನೆ. ಹೀಗಿದ್ದರೂ ನಾನು ಏಕೆ ಅಸೂಯೆ ಪಡಬೇಕು? ಅವರ ಯಶಸ್ಸು ಕೇವಲ ಅವರ ಶಕ್ತಿಯಿಂದ ಬಂದಿಲ್ಲ, ಅದು ಅಲ್ಲಾಹುವಿನ ಕೃಪೆಯಿಂದ ಬಂದದ್ದಾಗಿದೆ!”

ಈ ಆಲೋಚನೆಯಿಂದ, ನಮ್ಮ ಮನಸ್ಸು ಶಾಂತವಾಗುತ್ತದೆ, ಅಸೂಯೆ ನಶಿಸಿ, ನಮ್ಮ ಹೃದಯ ಖುಷಿಯಿಂದ ತುಂಬುತ್ತದೆ. ಅಲ್ಲಾಹನಲ್ಲಿ ಶುಭ ಪ್ರತೀಕ್ಷೆ ಬೆಳೆಯಲು ಕಾರಣವಾಗುತ್ತದೆ.

ನಮ್ಮ ಜೀವನದಲ್ಲಿ ಯಶಸ್ಸು ಬಂದಾಗ ಕೆಲವರು ಅತ್ಯಧಿಕ ಸಂತೋಷ ಪಡುತ್ತಾರೆ, ಕೆಲವು ವೇಳೆ ಮಿತಿಮೀರಿ ವರ್ತಿಸುತ್ತಾರೆ. ಅದೇ ರೀತಿ, ಕಷ್ಟ ಬಂದಾಗ, ಕೆಲವು ವೇಳೆ ತೀವ್ರವಾಗಿ ದುಃಖಿಸುತ್ತೇವೆ, ನಿರಾಶರಾಗುತ್ತೇವೆ. ಈ ಎರಡು ಭಾವನೆಗಳ ನಡುವಣ ಸಮತೋಲನವನ್ನು ಹೇಗೆ ಸಾಧಿಸಬೇಕು ಎಂಬುದನ್ನು ಕುರ್‌ಆನ್ ನಮಗೆ ಬೋಧಿಸುತ್ತದೆ.

ಭೂಮಿಯ ಮೇಲೆ ಅಥವಾ ನಿಮ್ಮ ಮೇಲೆ ಎರಗುವ ಯಾವ ಸಂಕಷ್ಟವೂ ನಾವು ಅದನ್ನು ಸೃಷ್ಟಿಸುವುದಕ್ಕೆ ಮುಂಚೆ ಒಂದು ಗ್ರಂಥದಲ್ಲಿ (ವಿಧಿ ಲಿಖಿತದಲ್ಲಿ) ಬರೆದಿಟ್ಟುಕೊಳ್ಳದೆ ಇಲ್ಲ. ಖಂಡಿತವಾಗಿಯೂ ಹೀಗೆ ಮಾಡುವುದು ಅಲ್ಲಾಹನಿಗೆ ಸುಲಭ ಕಾರ್ಯವಾಗಿದೆ (ಹೀಗೇಕೆಂದರೆ) ನಿಮಗುಂಟಾಗುವ ಯಾವುದೇ ನಷ್ಟಕ್ಕಾಗಿ ನೀವು ಖೇದಿಸ ಬಾರದು ಮತ್ತು ಅಲ್ಲಾಹನು ನಿಮಗೆ ಏನನ್ನು ದಯ ಪಾ ಲಿಸಿರುವನೋ ಅದರ ಬಗ್ಗೆ ಹಿಗ್ಗಬಾರದು. ಅಲ್ಲಾಹನು ಆತ್ಮಪ್ರಶಂಸಕರನ್ನು ಮತ್ತು ದುರಭಿಮಾನಿಗಳನ್ನು ಮೆಚ್ಚುವುದಿಲ್ಲ. (ಸೂರ ಹದೀದ್) ಈ ಆಯತುಗಳನ್ನು ಪದೇ ಪದೇ ಓದುವುದರಿಂದ ಅಮಿತ ಖುಷಿ ಅಥವಾ ತೀವ್ರ ನಿರಾಶೆಯೋ ಉಂಟಾಗಲು ಸಾಧ್ಯವಿಲ್ಲ.