ಅಮೆರಿಕದೊಂದಿಗಿನ ಶೃಂಗ ವಿಫಲ: ಉತ್ತರ ಕೊರಿಯದಲ್ಲಿ ಐವರು ಅಧಿಕಾರಿಗಳಿಗೆ ಮರಣದಂಡನೆ

0
573

ಸಿಯೋಲ್,ಮೇ 31: ಅಮೆರಿಕದೊಂದಿಗಿನ ಹನೋಯ್ ಶೃಂಗ ವಿಫಲವಾದ ಕಾರಣಕ್ಕಾಗಿ ಉತ್ತರ ಕೊರಿಯ ತನ್ನ ಐವರು ರಾಜತಾಂತ್ರಿಕ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದೆ ಎಂದು ದಕ್ಷಿಣ ಕೊರಿಯದ ವಾರ್ತಾಪತ್ರಿಕೆ ವರದಿ ಮಾಡಿದೆ. ವಿಯಟ್ನಾಮಿನ ರಾಜಧಾನಿ ಹನೋಯ್‍ನಲ್ಲಿ ಫೆಬ್ರುವರಿಯಲ್ಲಿ ಉತ್ತರ ಕೊರಿಯದ ಅಧ್ಯಕ್ಷ ಕಿಂ ಜೊಂಗ್ ಉನ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶೃಂಗ ನಡೆದಿತ್ತು.

ಉತ್ತರ ಕೊರಿಯಕ್ಕಾಗಿ ಸಿದ್ಧತೆ ನಡೆಸಿ ಕಿಂರ ಜೊತೆ ಪ್ರಯಾಣಿಸಿದ್ದ ಕೀಂಹ್ಯೋಕ್ ಮತ್ತು ಇತರ ನಾಲ್ವರು ಅಧಿಕಾರಿಗಳಿಗೆ ಪರಮೋನ್ನತ ನಾಯಕನನ್ನು ವಂಚಿಸಿದ್ದಾರೆ ಎನ್ನು ಆರೋಪ ಹೊರಿಸಿ ಗುಂಡು ಹೊಡೆದು ಸಾಯಿಸುವ ಶಿಕ್ಷೆ ಜಾರಿಗೊಳಿಸಲಾಗಿದೆ.

ಮಾರ್ಚಿನಲ್ಲಿ ಮಿರಿಂ ವಿಮಾನ ನಿಲ್ದಾಣದಲ್ಲಿ ಮರಣ ದಂಡನೆ ಜಾರಿಗೊಳಿಸಲಾಗಿತ್ತು. ಇತರ ನಾಲ್ವರು ರಾಜತಾಂತ್ರಿಕ ಅಧಿಕಾರಿಗಳ ಹೆಸರನ್ನು ಬಹಿರಂಗಗೊಳಿಸಲಾಗಿರಲಿಲ್ಲ. ಕಿಂ ಜೊಂಗ್ ಉನ್‍ರ ಭಾಷಾಂತರಕಾರ ಶಿನ್ ಹ್ಯೆ ಯಾಂಗ್‍ರಿಗೆ ಶೃಂಗದಲ್ಲಿ ನಡೆದ ಪ್ರಮಾದಕ್ಕಾಗಿ ಜೈಲಿಗೆ ಹಾಕಲಾಗಿದೆ. ಚರ್ಚೆಯಲ್ಲಿ ನೊಡೀಲ್ ಎಂದು ಟ್ರಂಪ್ ಹೇಳಿದಾಗ ಕಿಂ ಜೊಂಗ್ ಉನ್ ಹೇಳಿದ ಹೊಸ ನಿರ್ದೇಶವನ್ನು ಅನುವಾದಿಸಲು ವಿಫಲರಾಗಿದ್ದು ಶಿನ್ ಹ್ಯೆರ ಅಪರಾಧವಾಗಿದೆ. ದಕ್ಷಿಣ ಕೊರಿಯ ಈ ವರದಿಯ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ. ಉತ್ತರ ಕೊರಿಯ ಅಣ್ವಸ್ತ್ರ ಮುಕ್ತಗೊಳಿಸುವುದು ಶೃಂಗದಲ್ಲಿ ಪ್ರಧಾನ ಚರ್ಚೆಯಾಗಿತ್ತು. ಶೃಂಗ ವಿಫಲವಾದ್ದರಿಂದ ಜಂಟಿ ಹೇಳಿಕೆ, ಔತಣ ಇರಲಿಲ್ಲ.