ಸನ್ಮಾರ್ಗ ವಾರ್ತೆ
ಕಾಶ್ಮೀರದಲ್ಲಿ ಕಳೆದ 15 ವರ್ಷಗಳಿಂದ ಜೀವಿಸುತ್ತಿರುವ ಝಾಹಿದ ಬೇಗಂ ರಿಗೆ 15 ದಿನಗಳೊಳಗಾಗಿ ದೇಶ ತೊರೆಯುವಂತೆ ಸರ್ಕಾರ ನೋಟಿಸ್ ಕಳುಹಿಸಿದ್ದು ಕುಟುಂಬ ಕಂಗಾಲಾಗಿದೆ. ಇವರು ಮೂಲತಃ ಪಾಕ್ ಆಕ್ರಮಿತ ಕಾಶ್ಮೀರದವರಾಗಿದ್ದು ಕಳೆದ 15 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಬಂದು ಬದುಕುತ್ತಿದ್ದಾರೆ. ಏಪ್ರಿಲ್ 14ರ ಒಳಗೆ ದೇಶ ಬಿಡಬೇಕು ಎಂದು ಅವರಿಗೆ ಹೇಳಲಾಗಿದ್ದು ತಾಯಿ ಮತ್ತು ಮಕ್ಕಳು ಅಳುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.
ಝಾಯಿದ ಬೇಗಂ ಅವರು ಮಾಜಿ ಉಗ್ರವಾದಿ ಬಶೀರ್ ಅಹ್ಮದ್ ಅವರನ್ನು 15 ವರ್ಷಗಳ ಹಿಂದೆ ವಿವಾಹವಾಗಿ ಕಾಶ್ಮೀರದಲ್ಲಿ ನೆಲೆಸಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಮೂರು ವರ್ಷಗಳ ಹಿಂದೆ ಇವರು ಸ್ವಂತದ್ದೊಂದು ಮನೆಗೆ ಫೌಂಡೇಶನ್ ಹಾಕಿದ್ದಾರೆ.
ಕಳೆದ ಒಂದುವರೆ ವರ್ಷಗಳಿಂದ ಈ ಝಾಯಿದ ಬೇಗಮ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರ ಮನೆಯ ನಿರ್ವಹಣೆಯನ್ನು ಅವರ ತಂಗಿ ನೋಡಿಕೊಳ್ಳುತ್ತಿದ್ದಾರೆ.
ನಾವು ಪಾಕಿಸ್ತಾನದವರಲ್ಲ ನಾವು ಭಾರತೀಯರು ನಮ್ಮನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಬೇಡಿ ಎಂದು ಝಇದಾ ಸರಕಾರದೊಂದಿಗೆ ಮನವಿ ಮಾಡಿದ್ದಾರೆ.
ಹಾಗೆಯೇ ಭಾರತೀಯರನ್ನು ಮದುವೆಯಾಗಿ ಒಂದೆರಡು ದಶಕದಿಂದ ಕಾಶ್ಮೀರದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿಯರನ್ನು ಪಾಕಿಸ್ತಾನಕ್ಕೆ ಮರಳಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೇಂದ್ರ ಸರಕಾರದೊಂದಿಗೆ ವಿನಂತಿಸಿದ್ದಾರೆ.












