ಸನ್ಮಾರ್ಗ ವಾರ್ತೆ
ಕೇರಳದ ಜೈಲು ಅಧಿಕಾರಿಗಳ ಜೊತೆ ಆರೆಸ್ಸೆಸ್ ಹಿತೈಷಿಗಳು ರಹಸ್ಯ ಮಾತುಕತೆ ನಡೆಸಿರುವುದು ಬಹಿರಂಗಕ್ಕೆ ಬಂದಿದ್ದು ವಿವಾದಕ್ಕೆ ಕಾರಣವಾಗಿದೆ. ಈ ವರ್ಷದ ಜನವರಿಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಕೊಟ್ಟಯಮ್ ನ ಅದ್ದೂರಿ ರೆಸಾರ್ಟ್ ಒಂದರಲ್ಲಿ ಜೈಲು ಅಧಿಕಾರಿಗಳ ಜೊತೆ ಆರ್ ಎಸ್ ಎಸ್ ಹಿತೈಷಿಗಳು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಕೋಮುವಾದಿ ಸಂಘಟನೆಗಳು ಕೇರಳದ ಆಡಳಿತ ವಿಭಾಗದಲ್ಲಿ ಭಾರೀ ಪ್ರಭಾವವನ್ನು ಹೊಂದಿದ್ದಾರೆ ಎಂಬ ಮಾಹಿತಿಗಳು ಹೊರ ಬೀಳುತ್ತಿರುವುದರ ನಡುವೆಯೇ ಈ ಬೆಳವಣಿಗೆ ಬಹಿರಂಗಕ್ಕೆ ಬಂದಿದೆ.
ಕೇರಳ ಸರಕಾರಕ್ಕೆ ಮತ್ತು ಜೈಲು ಅಧಿಕಾರಿಗಳಿಗೆ ಗುಪ್ತಚರ ಸಂಸ್ಥೆ ನೀಡಿದ ವರದಿಯ ಪ್ರಕಾರ ಜನವರಿ 17ರಂದು ಕುಮಾರ ಕೋಂ ರೆಸಾರ್ಟ್ ನಲ್ಲಿ ನಡೆದ ಸಭೆಯಲ್ಲಿ 17 ಡೆಪ್ಯೂಟಿ ಪ್ರಿಸನ್ ಆಫೀಸರ್ಸ್ ಮತ್ತು 5 ಅಸಿಸ್ಟೆಂಟ್ ಪ್ರಿಸನ್ ಆಫೀಸರ್ಗಳು ಭಾಗಿಯಾಗಿದ್ದರು. ಆರ್ ಎಸ್ ಎಸ್ ನ ಕಾರ್ಯಕರ್ತರು ಸಭೆಯನ್ನ ಏರ್ಪಡಿಸಿದ್ದರು ಮತ್ತು ಮಕ್ತೂಬ್ ಮೀಡಿಯಾ ಈ ಕುರಿತಂತೆ ವರದಿಯನ್ನು ಪ್ರಕಟಿಸಿದೆ.
ಇದೇ ವೇಳೆ 18 ಮಂದಿ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಿರುವುದು ಗೊತ್ತಾಗಿದೆ. ಆದರೆ ಇದಕ್ಕೆ ಕಾರಣವನ್ನು ನಮೂದಿಸಿಲ್ಲ.
ಕಾಂಗ್ರೆಸ್ ನಾಯಕ ರಮೇಶ್ ಚನ್ನಿತ್ತಲ ಅವರು ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಗೊತ್ತಿದ್ದೇ ಈ ಸಭೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಹಾಗಂತ ಕೇರಳದ ಸರಕಾರಿ ಅಧಿಕಾರಿಗಳಿಗೆ ಆರ್ ಎಸ್ ಎಸ್ ನೊಂದಿಗೆ ಗುಪ್ತ ಸಂಬಂಧ ಇರುವ ಬಗ್ಗೆ ವಿವಾದ ಏರ್ಪಟ್ಟಿರುವುದು ಇದೇ ಮೊದಲಲ್ಲ. ಕೇರಳದ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿದ್ದ ಅಜಿತ್ ಕುಮಾರ್ ಅವರು 2023ರಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ದತ್ತಾತ್ರೇಯ ಹೊಸ ಬಾಳೆ ಮತ್ತು ಪ್ರಮುಖ ನಾಯಕ ರಾಮ್ ಮಾಧವ್ ಅವರನ್ನು ಭೇಟಿಯಾಗಿದ್ದುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ತನಿಖೆಗೂ ಆದೇಶಿಸಲಾಗಿತ್ತು ಮತ್ತು 2024 ಅಕ್ಟೋಬರ್ ನಲ್ಲಿ ತನಿಖಾ ವರದಿಯನ್ನು ಅಸೆಂಬ್ಲಿಯಲ್ಲಿ ಮಂಡಿಸಲಾಗಿತ್ತು. ಈ ಬೆಳವಣಿಗೆಯ ಬಳಿಕವೂ ಅಜಿತ್ ಕುಮಾರ್ ಅವರನ್ನು ಡಿಜಿಪಿಯಾಗಿ 2024 ಡಿಸೆಂಬರ್ ನಲ್ಲಿ ಕೇರಳ ಸರಕಾರ ಭಡ್ತಿ ನೀಡಿತ್ತು.












