ಮೂರನೆಯ ಮಹಡಿಯಿಂದ ಬಿದ್ದು ಪವಾಡ ಸದೃಶ್ಯವಾಗಿ ಬದುಕುಳಿದ ಮಗು

0
760

ಗುರುವಾಯೂರ್,ಜೂ. 3:ಫ್ಲ್ಯಾಟಿನ ಮೂರನೆಯ ಮಹಡಿಯಿಂದ ಕೆಳಗೆ ಬಿದ್ದ ಎರಡೂವರೆ ವರ್ಷದ ಮಗು ಆದಿಕ್ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾನೆ. ಹಣೆಗೆ ಸಣ್ಣಗಾಯ ಮಾತ್ರವಾಗಿದೆ. ಮಗು ಗ್ವಾಲಿಯರ್‍‌ನ ಮೂಲದ ಕುಟುಂಬದವರದ್ದಾಗಿದ್ದು, ಅವರು ಗುರುವಾಯೂರ್ ರೈಲ್ವೆ ಕ್ಯಾಂಟಿನ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಬೆಳಗ್ಗೆ ಇವರು ವಾಸಿಸುವ ಮೂರನೆ ಮಹಡಿಯ ವರಾಂಡದಲ್ಲಿ ತಂಗಿಯೊಂದಿಗೆ ಆದಿಕ್ ಆಟವಾಡುತ್ತಿದ್ದ. ನಂತರ ಅಲ್ಲಿಂದ ಕೆಳಗೆ ಬಿದ್ದಿದ್ದಾನೆ.

ಸದ್ದು ಕೇಳಿ ಮಗುವಿನ ತಾಯಿ ಆರತಿ ಹೊರ ಬಂದು ಬೊಬ್ಬೆ ಹೊಡೆದು ಕೆಳಗೆ ಓಡಿ ಬಂದಿದ್ದಾರೆ. ನಂತರ ನೆರೆಯ ಮನೆಯ ನಾರಾಯಣ ಸೆಲ್ವಿ ಅವರ ಹಿಂದೆ ಓಡೋಡಿ ಬಂದಿದ್ದರು. ಮಗು ಮಣ್ಣಿಗೆ ಮುಖ ಹೂತಂತಾಗಿ ಬಿದ್ದುಕೊಂಡಿತ್ತು. ಆದರೆ ಯಾವುದೇ ಅಪಾಯ ಆಗಿರಲಿಲ್ಲ. ಮಗು ಮೆಲ್ಲನೆ ಅಲ್ಲಿಂದ ಎದ್ದು ಏನೋ ಎಡವಟ್ಟು ಮಾಡಿಕೊಂಡೆ ಎಂಬಂತೆ ಅಲ್ಲಿದ್ದವರ ಮುಖವನ್ನು ನೋಡಿತು. ಮಗುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಎಕ್ಸರೆಯಲ್ಲಿ ದೊಡ್ಡಮಟ್ಟದ ಮುರಿತ ಕೂಡ ಆಗಿದ್ದು ಕಂಡು ಬಂದಿಲ್ಲ. ಹಣೆಗೆ ಸ್ವಲ್ಪ ಗಾಯವಾಗಿತ್ತು. ಫ್ಲಾಟ್ ಕಟ್ಟಡದ ಬುಡದಲ್ಲಿ ಟೈಲ್ಸ್ ಹಾಕದ್ದು ಮಗುವಿಗೆ ಹೆಚ್ಚಿನ ಅಪಾಯವಾಗದಿರಲು ಕಾರಣ ಎನ್ನಲಾಗಿದೆ.