ಕಾರ್ತೂಂ,ಜೂ.4: ಸುಡಾನ್ನ ರಾಜಧಾನಿ ಕರ್ತೂಂನಲ್ಲಿ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು 35 ಮಂದಿಯನ್ನು ಕೊಂದು ಹಾಕಿವೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ವರದಿಯಾಗಿದ್ದು ರಾಜಧಾನಿ ಕರ್ತೂಂನಲ್ಲಿ ಪ್ರತಿಭಟನಾ ಸ್ಥಳದಲ್ಲಿ ಗುಂಡು ಹಾರಾಟ ನಡೆಯಿತು. ಅಧ್ಯಕ್ಷ ಉಮರ್ ಅಲ್ ಬಶೀರ್ ಹೊರಹೋದ ಬಳಿಕ ನಡೆದ ಅತಿದೊಡ್ಡ ಸಾಮೂಹಿಕ ಹತ್ಯೆಯಿದಾಗಿದೆ.
ಸುಡಾನೀಸ್ ಪ್ರೊಫೆಶನಲ್ಸ್ ಅಸೋಸಿಯೇಶನ್(ಎಸ್ಪಿಎ) ಇದೊಂದು ಸಾಮೂಹಿಕ ನರಮೇಧ ಎಂದು ತಿಳಿಸಿದೆ. ಈಗ ಆಳ್ವಿಕೆ ನೋಡಿಕೊಳ್ಳುತ್ತಿರುವ ಮಿಲಿಟರಿ ಕೌನ್ಸಿಲ್ ಈ ಕಗ್ಗೊಲೆಯ ಹೊಣೆಗಾರ ಆಗಿದೆ ಎಂದು ಎಸ್ಪಿಐ ಹೇಳಿತು. ಡಿಸೆಂಬರ್ನಲ್ಲಿ ದೇಶವ್ಯಾಪಿ ಪ್ರತಿಭಟನೆ ಎಸ್ಪಿಎಯ ನೇತೃತ್ವದಲ್ಲಿ ಆರಂಭವಾಗಿತ್ತು. ಮೂವತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಉಮರ್ ಅಲ್ ಬಶೀರ್ ಅಧಿಕಾರ ಬಿಟ್ಟುಕೊಡಬೇಕೆಂಬುದು ಪ್ರತಿಭಟನಾ ಕಾರರ ಬೇಡಿಕೆಯಾಗಿತ್ತು. ಅವರನ್ನು ಅಧ್ಯಕ್ಷ ಸ್ಥಾನದಿಂದ ಹೊರದಬ್ಬಿ ಸೇನೆ ಅಧಿಕಾರವನ್ನು ವಹಿಸಿಕೊಂಡಿತು. ಈಗ ಸೇನೆ ಜನಪರ ಸರಕಾರಕ್ಕೆ ಅಧಿಕಾರ ಬಿಟ್ಟುಕೊಡಬೇಕೆಂದು ಸಾವಿರಾರು ಮಂದಿ ಪ್ರತಿಭಟನಾಕಾರರು ನೈಲ್ ನದಿಯ ಬದಿಯಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ ಚಪ್ಪರ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.












