ಸನ್ಮಾರ್ಗ ವಾರ್ತೆ
ಬೆಂಗಳೂರು: ಕೋವಿಡ್ ನಂತರ ಮಕ್ಕಳಲ್ಲಿ ಮೊಬೈಲ್ ಮತ್ತು ಆನ್ಲೈನ್ ಚಟುವಟಿಕೆಗಳ ಬಳಕೆ ಬಹುತೇಕ ಬದುಕಿನ ಅವಿಭಾಜ್ಯ ಭಾಗವಾಗಿದ್ದು, ಇದರ ಗಂಭೀರ ಪರಿಣಾಮಗಳು ಈಗ ಬೆಳಕಿಗೆ ಬರುತ್ತಿವೆ. ಮಕ್ಕಳ ಹಕ್ಕುಗಳ ಆಯೋಗ ನಡೆಸಿದ ಅಧ್ಯಯನ ವರದಿ ಪ್ರಕಾರ, 42% ಮಕ್ಕಳಿಗೆ, ಅವರ ಆನ್ಲೈನ್ ಸ್ನೇಹಿತರಿಂದ ಲೈಂಗಿಕ ಶೋಷಣೆ ಅಥವಾ ಕಿರುಕುಳದ ಅನುಭವವಾಗಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಕಾಸಸೌಧದಲ್ಲಿ ಆಯೋಜಿಸಿದ ಕಾರ್ಯಾಗಾರದಲ್ಲಿ ಈ ವರದಿಯನ್ನು ಬಿಡುಗಡೆಗೊಳಿಸಿದ್ದು, ಈ ಬಗ್ಗೆ ಶಾಸನಸಭೆಯ ಅಧಿವೇಶನದಲ್ಲಿ ಚರ್ಚೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ವಿಶ್ರಾಂತಿ ಸಮಯದಲ್ಲೂ ಆಟದ ಮೈದಾನ ಬದಲಿಗೆ ಆನ್ಲೈನ್ ವೇದಿಕೆಗಳತ್ತ ಮಕ್ಕಳ ಒಲವು ಹೆಚ್ಚಾಗಿದೆ. ಹೆಚ್ಚಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದು, ಗೇಮಿಂಗ್ ಮತ್ತು ಚಾಟ್ ಪ್ಲಾಟ್ಫಾರ್ಮ್ಗಳಲ್ಲಿ ಅಪರಿಚಿತರೊಂದಿಗೆ ಸಂಪರ್ಕದಲ್ಲಿದ್ದಾರೆ.
ಅಧ್ಯಯನದ ಮುಖ್ಯಾಂಶಗಳ ಪ್ರಕಾರ, 15-18 ವರ್ಷದ ಮಕ್ಕಳಲ್ಲಿ 80% ಮಕ್ಕಳು ತಮ್ಮ ದೈನಂದಿನ ಸಂವಹನಕ್ಕಾಗಿ ಮೊಬೈಲ್ ಬಳಸುತ್ತಿದ್ದು, 25% ಮಕ್ಕಳು ದಿನಕ್ಕೆ ಹಲವು ಬಾರಿ ಮೊಬೈಲ್ ಬಳಸುತ್ತಿದ್ದಾರೆ. 16% ಹದಿಹರೆಯದವರು ಅಪರಿಚಿತರೊಂದಿಗೆ ಆನ್ಲೈನ್ನಲ್ಲಿ ಸ್ನೇಹ ಬೆಳೆಸಿದ್ದಾರೆ. ಇವರಲ್ಲಿ 10% ಮಕ್ಕಳು ಅವರನ್ನು ನೇರವಾಗಿ ಭೇಟಿಯಾಗಿದ್ದಾರೆ ಎಂಬ ಅಂಶವೂ ವರದಿಯಾಗಿದೆ. ಇದರಲ್ಲಿ 4% ಹೆಣ್ಣುಮಕ್ಕಳು ಮತ್ತು 12% ಗಂಡು ಮಕ್ಕಳು ಸೇರಿದ್ದಾರೆ.
ಅಂತೆಯೇ, 12-14 ವರ್ಷದ ಮಕ್ಕಳಲ್ಲಿ 97% ಯೂಟ್ಯೂಬ್ ಬಳಕೆದಾರರಾಗಿದ್ದು, 92% ವಾಟ್ಸಾಪ್ ಬಳಸುತ್ತಾರೆ. ದಿನದಿಂದ ದಿನಕ್ಕೆ ಆನ್ಲೈನ್ನ ಮೇಲೆ ಮಕ್ಕಳ ಅವಲಂಬನೆ ಹೆಚ್ಚಾಗುತ್ತಿರುವುದು ಅವರ ಭದ್ರತೆಗೂ ಆತಂಕ ಉಂಟುಮಾಡುವಂತಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಮತ್ತು ಶಾಲೆಗಳು ಜಾಗೃತರಾಗಬೇಕಾಗಿದೆ. ಮಕ್ಕಳ ಆನ್ಲೈನ್ ಚಟುವಟಿಕೆಗಳ ಮೇಲ್ವಿಚಾರಣೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ.












