✍️ ಅಬೂ ಇಬ್ರಾಹಿಮ್ ಸಅದ್
(ವಿಚಾರ ಜ್ಯೋತಿ – 3)
ಭಾರತದ ನಗರಗಳಿಂದ ಹಿಡಿದು ಗ್ರಾಮಾಂತರ ವರೆಗೆ ಮೌನವಾಗಿ ಹರಡುತ್ತಿರುವ ದೊಡ್ಡ ಭೀತಿಯ ಹೆಸರೇ ಮಾದಕ ವ್ಯಸನ. ಇದು ಕೇವಲ ಒಬ್ಬ ವ್ಯಕ್ತಿಯ ವ್ಯಕ್ತಿಗತವಾದ ಆರೋಗ್ಯದ ಸಮಸ್ಯೆಯಲ್ಲ, ಇದು ಒಂದು ಸಮಾಜದ ಸ್ಥೈರ್ಯ, ಒಂದು ಕುಟುಂಬದ ಭವಿಷ್ಯ, ಒಂದು ದೇಶದ ನೈತಿಕತೆಯ ಮೇಲೆ ಸವಾಲಾಗಿರುವ ಜೀವಂತ ಮಾರಣಾಂತಿಕ ಸಂಕ್ರಾಮಿಕವಾಗಿದೆ. ಹಲವಾರು ಆರೋಗ್ಯ ಸಂಸ್ಥೆಗಳ ಅಧ್ಯಯನಗಳು ಮಾನವ ಮೆದುಳಿನಲ್ಲಿ ಮಾದಕ ವ್ಯಸನ ಹೇಗೆ ಆಳವಾಗಿ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ವಿವರಿಸುತ್ತವೆ. ಆದರೆ ಭಾರತದಲ್ಲಿ ಈ ಸಮಸ್ಯೆಯು ವೈಜ್ಞಾನಿಕ ಅಂಶಗಳಷ್ಟೇ ಅಲ್ಲ, ಮನುಷ್ಯನ ಬದುಕಿನ ಸೇತುವೆಯನ್ನು ಅಲ್ಲೋಲಕಲ್ಲೋಲ ಮಾಡಿ ಬಿಡುತ್ತದೆ.
ಈ ವ್ಯಸನವು ಒಂದು ಮಾತ್ರೆ ಅಥವಾ ದ್ರವ್ಯವನ್ನು ಬಳಸುವ ಇಚ್ಛೆ ಅಲ್ಲ, ಅದನ್ನು ಬಿಡಲು ಸಾಧ್ಯವಾಗದ ಆಂತರಿಕ ಒತ್ತಡವಾಗಿದೆ. ಪ್ರಾರಂಭದಲ್ಲಿ ಇಚ್ಛೆಯಿಂದ ತೆಗೆದುಕೊಳ್ಳುವ ನಶಾವಸ್ತುಗಳು, ನಂತರದಲ್ಲಿ ನಿಯಂತ್ರಣ ತಪ್ಪಿದ ಪಿಡುಗಾಗಿ ಪರಿಣಮಿಸುತ್ತದೆ. ಡೋಪಮೈನ್ ಎಂಬ ಮೆದುಳಿನ ಸಂತೋಷ ರಾಸಾಯನಿಕಕ್ಕೆ ಅವಲಂಬನೆಯಾಗುವುವ ಮೂಲಕ ಜೀವನದ ನಿಜವಾದ ಸಂತೋಷಗಳು ತೃಪ್ತಿ ನೀಡದ ಮಟ್ಟಕ್ಕೆ ವ್ಯಕ್ತಿಯೊಬ್ಬ ತನಗೆ ತಾನೇ ವ್ಯಸನಕ್ಕೆ ಬಲಿ ಆಗುತ್ತಾನೆ.
ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆಗಳು (NCRB) ಪ್ರಕಾರ, ಭಾರತದಲ್ಲಿ ವರ್ಷಕ್ಕೆ 70,000ಕ್ಕೂ ಹೆಚ್ಚು ಮಾದಕ ಸಂಬಂಧಿತ ಪ್ರಕರಣಗಳು ದಾಖಲಾಗುತ್ತಿವೆ. ಈ ಅಂಕಿಅಂಶಗಳಲ್ಲಿ ಒಳಗೊಂಡಿರುವವರು ಕೇವಲ ಅಪರಾಧಿಗಳಲ್ಲ. ಶಾಲಾ ಮಕ್ಕಳಿಂದ ಹಿಡಿದು ವೈದ್ಯಕೀಯ ವಿದ್ಯಾರ್ಥಿಗಳವರೆಗೆ ಈ ಪಟ್ಟಿಯಲ್ಲಿ ಇದ್ದಾರೆ. ದೇಶದ ಹಲವಾರು ರಾಜ್ಯಗಳಲ್ಲಿ ಮತ್ತು ಕರ್ನಾಟಕದ ಕೆಲ ಜಿಲ್ಲೆಗಳಲ್ಲಂತೂ ಮಾದಕ ವ್ಯಸನ ಮಿತಿಮೀರಿದಷ್ಟು ಸಾಮಾನ್ಯವಾಗಿದೆ.
ಸಮಾಜದಲ್ಲಿ ಘಟಿಸುತ್ತಿರುವ ಹಲವಾರು ಘಟನೆಗಳು ಈ ಅಂಶಗಳನ್ನು ಕನ್ನಡಿಯಂತೆ ಸಾಬೀತು ಪಡಿಸುತ್ತದೆ. ಸಮಾಜದ ಎದ್ದು ಕಾಣುವ ಘಟನೆಯೆಂದರೆ, ಪಲ್ಘರ್ನಲ್ಲಿ 15 ವರ್ಷದ ಬಾಲಕನು ತನ್ನ ತಾಯಿಯನ್ನು ಕತ್ತಿಯಿಂದ ಕೊಂದನು. ತಾಯಿ ಡ್ರಗ್ ಸೇವನೆಗೆ ವಿರೋಧಿಸಿದ್ದರಿಂದ ಈ ಕ್ರೂರ ಕೃತ್ಯ ನಡೆಯಿತು. ಬೆಂಗಳೂರಿನಲ್ಲಿ, ಕಾಲೇಜು ವಿದ್ಯಾರ್ಥಿಯೊಬ್ಬ ರೇವ್ ಪಾರ್ಟಿಗೆ ಅಜ್ಜನನ್ನು ಪೆನ್ಶನ್ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಕೊಂದನು. ಬಾತಿಂಡಾದಲ್ಲಿ 13 ವರ್ಷದ ಬಾಲಕನು ಹೆರಾಯಿನ್ ಸೇವಿಸಿ ಅಸುನೀಗಿದ್ದ, ಆತನ ಬಳಿ ಸಿಂಥೆಟಿಕ್ ಡ್ರಗ್ ಪ್ಯಾಕೆಟ್ ಪತ್ತೆಯಾಗಿತ್ತು. ಮಣಿಪುರದ ಕೆಲವು ಗ್ರಾಮಗಳಲ್ಲಿ ಮಕ್ಕಳನ್ನೇ ಡ್ರಗ್ ಸಾಗಣೆಗೆ ಬಳಸುವ ಮಾಫಿಯಾ ಚಟುವಟಿಕೆಗಳು ನಡೆಯುತ್ತಿವೆ. ಕೇರಳದಲ್ಲಿ ಯುವಕನೊಬ್ಬ ತಾಯಿಯ ಎದೆ ಇರಿದು ರಾಕ್ಷಸೀಯವಾಗಿ ವರ್ತಿಸಿದ್ದ. ಇವು ಕೇವಲ ಅಪರೂಪದ ಸುದ್ದಿಗಳಲ್ಲ, ನಿತ್ಯ ಕೇಳುವ, ಓದುವ, ಕಾಣುವ ನಿಶ್ಯಬ್ದ ಸತ್ಯಗಳಾಗಿ ಬಿಟ್ಟಿದೆ.
ಈ ಸಮಸ್ಯೆ ಕೇವಲ ಹೆರಾಯಿನ್ ಅಥವಾ ಗಾಂಜಾದ ಸಮಸ್ಯೆ ಅಲ್ಲ. ಮದ್ಯ, ನಿಕೋಟಿನ್, ಪೇನ್ಕಿಲ್ಲರ್ ಔಷಧಿಗಳು, ಹಾಗೂ ಮಲಗಲು ತೀವ್ರ ಶಕ್ತಿದಾಯಕವಾಗಿರುವ ನಿದ್ರೆಯ ತಲ್ಲಣಕಾರಿ ಟ್ಯಾಬ್ಲೆಟುಗಳು ಸಹ ಇದರ ಭಾಗ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಎಲ್ಲೆಂದರಲ್ಲಿ ಲಭ್ಯವಾಗುತ್ತಿರುವ ಈ ದ್ರವ್ಯಗಳು, ಕಾನೂನುಬದ್ಧ ಮಾದಕ ವ್ಯಸನಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಹೇಳಲಾಗುತ್ತದೆ. ಕೆಲವರು ನೋವಿಗೆ ಔಷಧಿ ತೆಗೆದುಕೊಳ್ಳುತ್ತಾರೆ; ಕೆಲವರು ಜೀವನದ ನೋವನ್ನು ಮರೆಮಾಡಿಕೊಳ್ಳಲು ಔಷಧಿ ತೆಗೆದುಕೊಳ್ಳುತ್ತಾರೆ. ಒಟ್ಟು ಸಮಾಜವು ನೋವಿನಿಂದ ಬಳಲಿ ಹೋಗುತ್ತದೆ.
ಇಲ್ಲಿಯವರೆಗೆ ಈ ಬಗ್ಗೆ ಸಾಕಷ್ಟು ಪ್ರಯತ್ನಗಳು, ಜಾಗೃತಿ ಮೂಡಿಸುವಲ್ಲಿ ನಾವು ವಿಫಲವಾಗಿದ್ದೇವೆ. ಮನೆಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಈ ಕುರಿತು ನಿರಂತರ ಜಾಗೃತಿಯಾಗಬೇಕಾದರೆ, ಈ ವ್ಯಸನದ ಜಾಲದಿಂದ ಹೊಸ ಪೀಳಿಗೆ ಹೊರಬರಲು ಸಾಧ್ಯ. ಹದಿಹರೆಯದವರು, ನಿರುದ್ಯೋಗಿಗಳು, ಮಾನಸಿಕ ಒತ್ತಡದಲ್ಲಿರುವವರು ಈ ವ್ಯಸನದ ಮುಖ್ಯ ಗುರಿಗಳಾಗುತ್ತಿದ್ದಾರೆ.
ಈ ಭಯಾನಕ ಕೆಡುಕು ಒಬ್ಬ ವ್ಯಸನಿಯ ದೈಹಿಕ ಸಮಸ್ಯೆ ಮಾತ್ರ
ಅಲ್ಲ, ಅದು ಆತನ ಆತ್ಮವನ್ನೂ ಕೊಲ್ಲುತ್ತಿದೆ. ಸಂಬಂಧಗಳನ್ನು ಕಿತ್ತುಕೊಳ್ಳುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ತನ್ನದೇ ಆದ ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ನನಗೆ ಬದುಕೇ ಬೇಡ, ಬದುಕು ಅಂತ್ಯವಾಗಬೇಕು ಎಂಬ ಭ್ರಮೆಗೆ ಮಾದಕ ವ್ಯಸನವು ಯುವಕರನ್ನು ತಳ್ಳುತ್ತಿದೆ.
ಇದರ ವಿರುದ್ಧ ಒಂದು ಜವಾಬ್ದಾರಿಯುತ ಸಾಮಾಜಿಕ ಹೋರಾಟ ರೂಪಿಸಲೇಬೇಕು. ಮನೆಯಿಂದಲೇ ಜಾಗೃತಿ ಮೂಡಬೇಕು. ಶಾಲಾ ಶ್ರೇಣಿಯಿಂದಲೇ ವ್ಯಸನದ ಭಯಾನಕ ಪರಿಣಾಮದ ಪಾಠಗಳು, ಸಾರ್ವಜನಿಕ ಜಾಗತಿಕ ಅಭಿಯಾನಗಳು, ನಿಯಂತ್ರಿತ ಔಷಧ ವಿತರಣಾ ನೀತಿಗಳು – ಇವೆಲ್ಲವೂ ಒಂದು ಸಮರ್ಥ ವ್ಯವಸ್ಥೆಯ ಮೂಲಕ ನಡೆಯಬೇಕು. ಬಹುತೇಕ ಕುಟುಂಬಗಳು ತಮ್ಮ ಮಕ್ಕಳಲ್ಲಿ ಮಾದಕ ವ್ಯಸನದ ಚಿಹ್ನೆಗಳನ್ನು ಗುರುತಿಸಲು ವಿಫಲವಾಗುತ್ತಿವೆ. ಬಣ್ಣ ಬಣ್ಣದ ಬದುಕಿನಲ್ಲಿ ಯುವಕರಲ್ಲಿ ಬೆಳೆಯುವ ಬಣ್ಣದ ಗುಟ್ಟನ್ನು ಗುರುತಿಸಿದರೆ ಮಾತ್ರವೇ ನಾವು ಒಂದು ಜೀವವನ್ನು ಉಳಿಸಬಹುದು.
ಒಂದು ಸಮಾಜ, ಸಮುದಾಯವನ್ನು ನಾಶ ಮಾಡಬೇಕೆಂದರೆ ಅದರ ಮೇಲೆ ಬಾಂಬು ಹಾಕಬೇಕಾಗಿಲ್ಲ. ಮಾದಕವಸ್ತುಗಳ ಗುಲಾಮರನ್ನಾಗಿ ಮಾಡಿಬಿಟ್ಟರೆ ಆ ಸಮಾಜ ಸಮುದಾಯ ತನ್ನಿಂತಾನೇ ಅವನತಿಯತ್ತ ಸಾಗುತ್ತದೆ. ಒಂದು ವೇಳೆ ಪ್ರತಿಯೊಬ್ಬರೂ ಇಂದು ಎಚ್ಚರಗೊಂಡಿಲ್ಲ ಎಂದಾದರೆ, ನಾಳೆಯ ಭಾರತವು ವೈದ್ಯಕೀಯವಾಗಿ ಬದುಕಿದರೂ ಮಾನಸಿಕವಾಗಿ, ಕೌಟುಂಬಿಕವಾಗಿ ಜರ್ಜರಿತವಾಗಿರುವುದು. ಆದುದರಿಂದ ಇದು ಇನ್ನೊಂದು ಮನೆಯ ಸಮಸ್ಯೆ ಎಂದು ಕಣ್ಣು ಮುಚ್ಚಿದರೆ ನಾಳೆ ಆ ಪಿಡುಗು ನಮ್ಮ ಮನೆಗೂ ತಲಪಿದರೆ ಮತ್ತೆ ಅದರ ಪರವಾಗಿ ಧ್ವನಿ ಎತ್ತಲು ಯಾರೂ ಇರಲಾರರು. ಆದುದರಿಂದ ಅಮಲು ಮುಕ್ತ ಸಮಾಜವನ್ನು ಕಟ್ಟ ಬೇಕಾದರೆ ಮೊದಲು ಅದರ ಪರಿಣಾಮದ ಗಂಭೀರ ತೀವ್ರತೆಯನ್ನು ಗ್ರಹಿಸಬೇಕಾದ ಅತೀ ಅಗತ್ಯ ಇದೆ.












