ಜೈಲಿನಲ್ಲಿ ಆರ್‌ಎಸ್‌ಎಸ್‌ ನಾಯಕರೊಂದಿಗೆ ಸಂವಾದ ನಡೆಸಿದ್ದೆ: ಎಮರ್ಜೆನ್ಸಿ ದಿನಗಳನ್ನು ನೆನಪಿಸಿದ ಜಮಾಅತೆ ಇಸ್ಲಾಮಿ ಹಿಂದ್ ನಾಯಕ ಎಜಾಝ್ ಅಹ್ಮದ್ ಅಸ್ಲಮ್

0
933

ಸನ್ಮಾರ್ಗ ವಾರ್ತೆ

ತುರ್ತು ಪರಿಸ್ಥಿತಿಯ ಕಾಲದಲ್ಲಿ 19 ತಿಂಗಳು ಕಾಲ ಜೈಲಲ್ಲಿದ್ದ ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯ ಮತ್ತು ರೇಡಿಯನ್ಸ್ ಪತ್ರಿಕೆಯ ಸಂಪಾದಕ ಎಜಾಝ್ ಅಹ್ಮದ್ ಅಸ್ಲಾಂ ಅವರು ಆ ಕಾಲದ ಜೈಲಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ಬಂಧಿತರಾದ ಮೂರು ಸಾವಿರ ಮಂದಿ ಜಮಾಅತ್ ಸದಸ್ಯರ ಪೈಕಿ ಇವರೂ ಒಬ್ಬರಾಗಿದ್ದರು.

ತುರ್ತು ಪರಿಸ್ಥಿತಿ ಘೋಷಣೆಯಾದ ತಕ್ಷಣ ನನ್ನನ್ನು ಮದ್ರಾಸ್ ನ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು. ನನ್ನ ಜೊತೆ ಸಿಪಿಐ ಸಿಪಿಐಎಂ ಮತ್ತು ಡಿಎಂಕೆಯ ಸದಸ್ಯರು ಇದ್ದರು. ನನ್ನ ಪತ್ನಿ ಎಂಟು ತಿಂಗಳ ಬಸುರಿ ಆಗಿದ್ದಳು. ಅಲ್ಲದೆ ನಾಲ್ಕು ವರ್ಷದ ಮತ್ತು ಎರಡು ವರ್ಷದ ಮಕ್ಕಳನ್ನೂ ಆಕೆ ಆರೈಕೆ ಮಾಡಬೇಕಿತ್ತು. ಜೈಲಿಗೆ ತಳ್ಳಿ ಮೂರು ತಿಂಗಳಾದ ಬಳಿಕ ನನ್ನ ನವಜಾತ ಮಗುವಿನ ಮುಖವನ್ನು ನಾನು ನೋಡಿದೆ. 40 ದಿನಗಳಾದ ಮಗುವನ್ನು ನನ್ನ ಪತ್ನಿ ಮದ್ರಾಸ್ ಜೈಲಿಗೆ ತಂದು ತೋರಿಸಿದ್ದಳು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಕರ್ನಾಟಕದ ಹಾಸನದಲ್ಲಿ 1943ರಲ್ಲಿ ಜನಿಸಿದ ಅಸ್ಲಾಂ ಅವರು ಬಿಹಾರದಲ್ಲಿ ಬೆಳೆದರು. 1969 ರಲ್ಲಿ ಮುಜಫರ್ ಬಾದ್ ನ ಎಲ್ಎಸ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಬಳಿಕ ತಮಿಳುನಾಡಿನ ಸಿ. ಅಬ್ದುಲ್ ಹಕೀಮ್ ಕಾಲೇಜಿನಲ್ಲಿ ಲೆಕ್ಚರರಾಗಿ ವೃತ್ತಿ ಜೀವನ ಆರಂಭಿಸಿದ್ರು. ತಮಿಳುನಾಡಿನಿಂದಲೇ ಮದುವೆಯಾದರು. ಇದೇ ಸಂದರ್ಭದಲ್ಲಿ ಅವರು ಜಮಾಅತ್ ನೊಂದಿಗೆ ಸಂಬಂಧವನ್ನು ಬೆಳೆಸಿದರು.

ಜಮಾಅತ್ ನಾಯಕರಾದ ಮೌಲಾನ ಮುಹಮ್ಮದ್ ಜಾಫರ್ ಅವರ ಪ್ರಕಾರ ತುರ್ತು ಪರಿಸ್ಥಿತಿಯು ಜಮಾಅತ್ ನ ಪಾಲಿಗೆ ಪ್ರಯೋಜನಕಾರಿಯಾಗಿದೆ ಜಮಾಅತ್ ನ ಕುರಿತಂತೆ ಅಧಿಕಾರಿಗಳಲ್ಲಿದ್ದ ತಪ್ಪು ತಿಳುವಳಿಕೆಯನ್ನು ದೂರ ಮಾಡಲು ಈ ಸಂದರ್ಭ ಪ್ರಯೋಜನಕ್ಕೆ ಬಂದಿದೆ ಎಂದವರು ಹೇಳಿದ್ದಾರೆ.

ನಾನಿದ್ದ ಜೈಲ್ ಸೆಲ್‌ನಲ್ಲಿ ಆರ್‌ಎಸ್‌ಎಸ್‌ನ ಹಲವು ಕಾರ್ಯಕರ್ತರಿದ್ದರು. ಅವರಲ್ಲಿ ರಂಗಸ್ವಾಮಿ ದೇವರ್ ಕೂಡ ಒಬ್ಬರು. ಅವರು ಆ ಬಳಿಕ ಆರ್‌ಎಸ್‌ಎಸ್‌ನ ತಮಿಳುನಾಡಿನ ಮುಖ್ಯಸ್ಥರಾದರು. ಅದು ಅತ್ಯಂತ ಕಷ್ಟದ ಸಮಯವಾಗಿತ್ತು. ನಾವು ಪ್ರತಿಯೊಬ್ಬರು ನಮ್ಮ ವಿಚಾರಧಾರೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಕ್ಕೆ ಸಮಯವನ್ನು ವಿನಿಯೋಗಿಸಿದೆವು. ದೇವರ್ ಜೊತೆಗೆ ನಾನು ದೀರ್ಘ ಸಂವಾದದಲ್ಲಿ ತೊಡಗಿರುವುದು ಈಗ ನನಗೆ ನೆನಪಿಗೆ ಬರುತ್ತಿದೆ ಎಂದು ಅಸ್ಲಮ್ ಹೇಳಿದ್ದಾರೆ.