ಸನ್ಮಾರ್ಗ ವಾರ್ತೆ
ಗಾಝಾದಲ್ಲಿ ಹಸಿವಿನಿಂದ ಬಳಲುತ್ತಿರುವ ಫೆಲೆಸ್ತೀನಿಯರಿಗೆ ವಿತರಿಸಲಾದ ಆಹಾರದ ಬ್ಯಾಗುಗಳಲ್ಲಿ ಮಾದಕ ದ್ರವ್ಯದ ಮಾತ್ರೆಗಳಿರುವುದು ದೃಢವಾಗಿದೆ. ಸರಕಾರಿ ಮೀಡಿಯಾ ಕಚೇರಿ ಈ ಸುದ್ದಿಯನ್ನು ದೃಢೀಕರಿಸಿದೆ. ಗಾಝಾದಲ್ಲಿ ಇಸ್ರೇಲ್ ಆರಂಭಿಸಿರುವ ನೆರವು ವಿತರಣೆಯ ಮರೆಯಲ್ಲಿ ಈ ಮಾದಕ ವಸ್ತುವನ್ನು ಕೊಡುವ ಪ್ರಯತ್ನಗಳು ನಡೆದಿವೆ ಎಂದು ವರದಿಯಾಗಿದೆ. ಕ್ಯಾನ್ಸರ್ ರೋಗಿಗಳಿಗೆ ನೋವನ್ನು ಮರೆಸುವುದಕ್ಕಾಗಿ ನೀಡಲಾಗುವ ಆಕ್ಸಿಕೋ ಡೋನ್ ಎಂಬ ಮಾತ್ರೆ ಇದು ಎಂದು ದೃಢಪಟ್ಟಿದೆ.
ಸಾಮಾನ್ಯ ನೋವು ನಿವಾರಕ ಮಾತ್ರೆಗಳು ಪ್ರಭಾವ ಬೀರದೆ ಹೋದಾಗ ಈ ಮಾತ್ರೆಗಳನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುತ್ತದೆ. ಅಮೆರಿಕಾದ ಬೆಂಬಲದೊಂದಿಗೆ ಇಸ್ರೇಲ್ ಸೇನೆಯ ಮೇಲ್ನೋಟದಲ್ಲಿ ನಡೆಯುತ್ತಿರುವ ಗಾಝ ಹ್ಯುಮಾನಿಟೇರಿಯನ್ ಫೌಂಡೇಶನ್ ಎಂಬ ಸಂಸ್ಥೆಯು ಫೆಲೆ ಸ್ತೀನಿಯರಿಗೆ ವಿತರಿಸುತ್ತಿರುವ ಆಹಾರ ಪೊಟ್ಟಣಗಳಲ್ಲಿ ಈ ಮಾತ್ರೆಗಳು ಕಂಡುಬಂದಿವೆ. ಧಾನ್ಯದ ಹುಡಿಯಲ್ಲಿ ಈ ಮಾತ್ರೆಗಳು ಸಿಕ್ಕಿರುವುದನ್ನು ನಾಗರಿಕರು ತಿಳಿಸಿದ್ದಾರೆ. ಇಂತಹ ನಾಲ್ಕು ಮಂದಿಯ ಅಭಿಪ್ರಾಯವನ್ನು ಸರಕಾರಿ ಮೀಡಿಯಾ ಕಚೇರಿ ಜಗತ್ತಿನ ಮುಂದೆ ಇಟ್ಟಿದೆ.
ಅಲ್ಲದೆ ಮಾದಕ ವಸ್ತುವನ್ನು ಈ ಆಹಾರ ಧಾನ್ಯಗಳಲ್ಲಿ ಬೆರೆಸಿ ಕೊಡಲಾಗುತ್ತಿದೆ ಅನ್ನುವ ಅನುಮಾನವೂ ವ್ಯಕ್ತವಾಗಿದೆ. ಇದು ಆರೋಗ್ಯದ ಮೇಲೆ ತೀವ್ರ ಅಡ್ಡ ಪರಿಣಾಮವನ್ನು ಬೀರುತ್ತಿದೆ ಮತ್ತು ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು ಎಂದು ಹೇಳಲಾಗಿದೆ.












