ಸನ್ಮಾರ್ಗ ವಾರ್ತೆ
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದಲ್ಲಿ ನಾಲ್ವರು ದಲಿತ ಸ್ವಚ್ಚತಾ ಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ, ಬರಿ ಕೈಗಳಿಂದ ಮಲ ಸ್ವಚ್ಛ ಗೊಳಿಸಲು ಒತ್ತಾಯಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದೆ.
ಸ್ವಚ್ಚತಾ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರು, “ಪಂಚಾಯತ್ ಅಧ್ಯಕ್ಷರು ಮತ್ತು ಕೆಲವು ಸ್ಥಳೀಯರು ನಮಗೆ ನಿರಂತರ ಅವಮಾನ ಮಾಡಿದ್ದಾರೆ. ನಾವು ಈ ಊರಿಗೆ ಸೇರಿಲ್ಲ ಎಂಬಂತೆ ನಡೆಸಿಕೊಂಡು, ಹಿಂಸಾತ್ಮಕವಾಗಿ ಕೀಳು ಕೆಲಸಗಳಿಗೆ ಒತ್ತಾಯಿಸಿದ್ದಾರೆ,” ಎಂದು ಆರೋಪಿಸಿದ್ದಾರೆ.
ಇವರಿಂದ ಮೊದಲು ನೀಡಿದ ದೂರುಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಡ ಹೇರಿರುವುದಲ್ಲದೇ, ಖಾಲಿ ಕಾಗದಗಳ ಮೇಲೆ ಸಹಿ ಹಾಕುವಂತೆ ಬೆದರಿಸಲಾಗಿದೆ. ಕಾರ್ಮಿಕರಲ್ಲೊಬ್ಬರ ಮೇಲೆ ಮಣಿವ್ ಎಂಬ ವ್ಯಕ್ತಿ ಹಲ್ಲೆ ನಡೆಸಿದ್ದರೂ, ಪೊಲೀಸರಿಂದ ಆರೋಪಿ ಬೆಂಬಲ ಪಡೆದಿದ್ದಾನೆ ಎಂಬ ಆರೋಪವೂ ಉಂಟಾಗಿದೆ.
ಈಗ ಕಾರ್ಮಿಕರನ್ನು ಜಾತಿ ಹಿಂದೂ ಪ್ರದೇಶಗಳಲ್ಲಿ ಕೆಲಸದಿಂದ ತೆಗೆದು ಹಾಕಲಾಗಿದೆ. ಆರೋಪಿಗಳ ವಿರುದ್ಧ ಹಾಗೂ ಪೊಲೀಸರು ನೀಡಿದ ಬೆಂಬಲಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ. ದೂರನ್ನು ಹಿಂತೆಗೆದುಕೊಂಡ ಕಾರಣದಿಂದ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಜಿಲ್ಲಾ ಎಸ್ಪಿ ಸರ್ವಣನ್ ತಿಳಿಸಿದ್ದಾರೆ.












