ಸನ್ಮಾರ್ಗ ವಾರ್ತೆ
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಕ್ರಮವಾಗಿ ಲಾಭ ಗಳಿಸುತ್ತಿದ್ದ ಅಮೆರಿಕ ಮೂಲದ ಜೇನ್ ಸ್ಟ್ರೀಟ್ ಗ್ರೂಪ್ ವಿರುದ್ಧ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ (SEBI) ಕಠಿಣ ಕ್ರಮ ಕೈಗೊಂಡಿದೆ. ಕಂಪನಿಯು ಜನವರಿ 2023 ರಿಂದ ಮಾರ್ಚ್ 2025 ರ ನಡುವೆ ಸುಮಾರು ₹36,500 ಕೋಟಿ ಲಾಭ ಗಳಿಸಿದ್ದು, ಈ ಅವಧಿಯಲ್ಲಿ ಭಾರತದಲ್ಲಿನ ಚಿಲ್ಲರೆ ಹೂಡಿಕೆದಾರರು ₹1.2 ಲಕ್ಷ ಕೋಟಿ ನಷ್ಟ ಅನುಭವಿಸಿರುವುದಾಗಿ ಸೆಬಿ ವರದಿ ಮಾಡಿದೆ.
ಕೇವಲ ಎರಡು ವರ್ಷಗಳಲ್ಲಿ ನಿಫ್ಟಿ ಹಾಗೂ ಬ್ಯಾಂಕ್ ನಿಫ್ಟಿ ಆಪ್ಷನ್ಸ್ (options) ವ್ಯಾಪಾರದಿಂದ ಕಂಪನಿಯು ಈ ಮಟ್ಟದ ಲಾಭ ಗಳಿಸಿದೆ. ಇವು ಕೃತಕ ಬೆಲೆ ಏರಿಳಿತದ ಪರಿಣಾಮವೆಂದು ಸೆಬಿಯ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಈ ಸಂಸ್ಥೆಯು ಅವಧಿ ಮುಗಿಯುವ ದಿನದಂದು(Expiring date) ಬೆಳಿಗ್ಗೆ ದೊಡ್ಡ ಪ್ರಮಾಣದಲ್ಲಿ ಖರೀದಿ, ನಂತರ ಮಧ್ಯಾಹ್ನ ಮಾರಾಟದ ಮೂಲಕ ಸೂಚ್ಯಂಕದ ಮೌಲ್ಯದಲ್ಲಿ ತೀವ್ರ ಬದಲಾವಣೆ ತಂದು ಲಾಭ ಗಳಿಸಲಾಗುತ್ತಿತ್ತು.
ಸೆಬಿಯು ತಕ್ಷಣವೇ ಜೇನ್ ಸ್ಟ್ರೀಟ್ ಕಂಪನಿಗೆ ಸೂಚನೆ ನೀಡಿದ್ದು, ತನಿಖೆಯ ಅವಧಿಯಲ್ಲಿ ಗಳಿಸಿದ ₹4,840 ಕೋಟಿ ಲಾಭವನ್ನು ಹಿಂದಿರುಗಿಸಬೇಕು ಎಂದು ಆದೇಶಿಸಿದೆ. ಕಂಪನಿಯ ಬ್ಯಾಂಕ್ ಖಾತೆಗಳು ಹಾಗೂ ಡಿ-ಮ್ಯಾಟ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಹಾಗೂ ಹಣ ಹಿಂಪಡೆಯದಂತೆ ದೇಶದ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
ಜೇನ್ ಸ್ಟ್ರೀಟ್ ಗ್ರೂಪ್, 47 ದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು 2,500ಕ್ಕೂ ಹೆಚ್ಚು ತಜ್ಞರನ್ನು ಹೊಂದಿದೆ. ಹಲವರು ಐಐಟಿಗಳಿಂದ ಪದವೀಧರರಾಗಿದ್ದಾರೆ. ಆದರೆ, ಭಾರತದಲ್ಲಿ ಈ ಸಂಸ್ಥೆಯ ವ್ಯವಹಾರಗಳು ನೇರವಾಗಿ ಸಣ್ಣ ಹೂಡಿಕೆದಾರರ ನಷ್ಟಕ್ಕೆ ಕಾರಣವಾಗಿವೆ.
ಸೆಬಿಯ ವಿಶ್ಲೇಷಣೆಯ ಪ್ರಕಾರ, ಶೇರು ವ್ಯಾಪಾರದಲ್ಲಿ(Options trading) ಭಾಗವಹಿಸುವ 93% ಹೂಡಿಕೆದಾರರು ನಷ್ಟ ಅನುಭವಿಸುತ್ತಾರೆ. ಇವು ಹೂಡಿಕೆ ಅಥವಾ ಲಾಭ ಗಳಿಸುವ ದಾರಿಯಲ್ಲ; ಬದಲಾಗಿ, ಅಪಾಯ ನಿರ್ವಹಣೆಗೆ ಬಳಕೆಯಾಗುವ ಹೆಡ್ಜಿಂಗ್ ಸಾಧನಗಳೆಂದು ಸೆಬಿ ತಿಳಿಸಿದೆ. ತ್ವರಿತ ಲಾಭದ ಆಸೆಯಿಂದ ಬಂಡವಾಳ ನಷ್ಟ ಹೊಂದುವ ಸಾಧ್ಯತೆಯನ್ನು ಮುಂದಿಟ್ಟು ಎಚ್ಚರದಿಂದ ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವಂತೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ.












