ಸನ್ಮಾರ್ಗ ವಾರ್ತೆ
ಗಾಝಾದ ಫೀಲ್ಡ್ ಆಸ್ಪತ್ರೆಯಾದ ಡೈರೆಕ್ಟರ್ ಅಬು ಯೂಸುಫ್ ಅಲ್ ನಜ್ಜಾರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಮರ್ವಾನ್ ಅಲ್ ಹಮ್ ಸಿ ಯನ್ನು ಇಸ್ರೇಲಿ ಯೋಧರು ಅಪಹರಿಸಿಕೊಂಡು ಹೋಗಿದ್ದಾರೆ. ರಫಾದ ರೆಡ್ ಕ್ರಾಸ್ ಕೇಂದ್ರ ಕಚೇರಿಯ ಸಮೀಪ ಆಂಬುಲೆನ್ಸ್ ನಲ್ಲಿ ನಿಂತು ಪತ್ರಕರ್ತರಿಗೆ ಸಂದರ್ಶನ ನೀಡುತ್ತಿದ್ದ ವೇಳೆ ಇಸ್ರೇಲಿ ಯೋಧರು ಈ ಕೃತ್ಯ ಎಸಗಿದ್ದಾರೆ. ಸಂದರ್ಶನ ನಡೆಸುತ್ತಿದ್ದ ಪತ್ರಕರ್ತ ತಮರ್ ಅಲ್ ಸಾನಿ ಎಂಬವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಇಸ್ರೇಲ್ ಯೋಧರ ಆಕ್ರಮಣದಲ್ಲಿ ಇಬ್ಬರು ಫೆಲಸ್ತೀನಿಯರು ಸಾವಿಗೀಡಾಗಿದ್ದಾರೆ ಮತ್ತು ಆಂಬುಲೆನ್ಸ್ ಚಾಲಕ ಗಾಯಗೊಂಡಿದ್ದಾನೆ ಎಂದು ರೆಡ್ ಕ್ರಾಸ್ ಮಾಹಿತಿ ನೀಡಿದೆ.
ರೆಡ್ ಕ್ರಾಸ್ ನ ಅಧೀನದಲ್ಲಿ ಇರುವ ಫೀಲ್ಡ್ ಆಸ್ಪತ್ರೆಗೆ ಭೇಟಿ ನೀಡುವ ಸಂದರ್ಭದಲ್ಲಿ ವೈದ್ಯರನ್ನು ಇಸ್ರೇಲ್ ಯೋಧರು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ಈ ಬಗ್ಗೆ ಇಸ್ರೇಲ್ ಅಧಿಕೃತ ಸ್ಪಷ್ಟೀಕರಣವನ್ನು ಕೊಟ್ಟಿಲ್ಲ.
ಮಕ್ಕಳು ರೋಗಿಗಳು ಮತ್ತು ಹಸಿವಿನಿಂದ ಕಂಗಾಲಾದ ಸಾಮಾನ್ಯ ಜನರ ಪಾಲಿಗೆ ಈ ವೈದ್ಯರು ಭರವಸೆಯಾಗಿದ್ದರು ಎಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ.












