ಸನ್ಮಾರ್ಗ ವಾರ್ತೆ
ನವದೆಹಲಿ: ಆನ್ಲೈನ್ನಲ್ಲಿ ನಿದ್ರೆ ಮಾತ್ರೆಗಳನ್ನು ಖರೀದಿಸಲು ಹೋಗಿ, ನಿವೃತ್ತ ಶಿಕ್ಷಕಿಯೊಬ್ಬರು ಸೈಬರ್ ವಂಚನೆಗೆ ಬಲಿಯಾಗಿದ್ದು, ಆ ಮೂಲಕ ₹ 77 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ದೆಹಲಿಯ ವಸಂತ್ ಕುಂಜ್ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಮ್ಮ ನರಸಂಬಂಧಿ ಸ್ಥಿತಿಗೆ ಪ್ರತಿ ತಿಂಗಳು ತೆಗೆದುಕೊಳ್ಳುವ ಔಷಧಿಯನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ ನಂತರ, ಮಹಿಳೆಗೆ ಆಗಸ್ಟ್ 2024ರಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿ ಎಂದು ಹೇಳಿಕೊಂಡು ಕರೆ ಬಂದಿದೆ. ಮಹಿಳೆ ಅಕ್ರಮ ಔಷಧಿಗಳನ್ನು ಖರೀದಿಸಿದ್ದಾರೆ ಮತ್ತು ಆಕೆ ಔಷಧ ವಿತರಕಿಯಾಗಿದ್ದಾರೆ ಎಂದು ಕರೆ ಮಾಡಿದವರು ಶಂಕಿಸಿರುವುದಾಗಿ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಬ್ಯಾಂಕ್ ಖಾತೆ ವಿವರಗಳನ್ನು ನೀಡದಿದ್ದರೆ ಬಂಧಿಸುವುದಾಗಿ ಅವರು ಬೆದರಿಸಿದ್ದರು. ಗಾಬರಿಗೊಂಡ ಮಹಿಳೆ ಹಲವಾರು ಬ್ಯಾಂಕ್ ಖಾತೆಗಳಿಗೆ ಆರಂಭದಲ್ಲಿ ₹ 3 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ.
ವಂಚಕರ ಜಾಲ ಮತ್ತು ತಂತ್ರ
ಹಣ ವರ್ಗಾವಣೆಯಾದ 10 ದಿನಗಳ ನಂತರ, ಮಹಿಳೆಗೆ ಮತ್ತೆ ಎನ್ಸಿಬಿ ಅಧಿಕಾರಿಯಿಂದ ಕರೆ ಬಂದಿದೆ. ಕಳೆದುಹೋದ ಹಣವನ್ನು ಮರಳಿ ಪಡೆಯಲು ಸಹಾಯ ಮಾಡುವುದಾಗಿ ಕರೆ ಮಾಡಿದವರು ಹೇಳಿ, ಎರಡು ದಿನಗಳಲ್ಲಿ ₹20,000 ರೂಪಾಯಿಗಳನ್ನು ಮಹಿಳೆಯ ಖಾತೆಗೆ ಹಿಂತಿರುಗಿಸಲಾಗಿದೆ. ಇದು ಹಣ ಮರಳಿ ಬರುವ ಸೂಚನೆ ಎಂದು ಭಾವಿಸಿದ ಮಹಿಳೆಗೆ, ನಂತರ ನಾಲ್ವರು ವೀಡಿಯೊ ಕರೆ ಮಾಡಿದ್ದಾರೆ. ಅವರು ಮಹಿಳೆಯೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲು ಮತ್ತು ಬ್ಯಾಂಕ್ ಖಾತೆಯನ್ನು ತೆರೆಯಲು ಕೇಳಿಕೊಂಡಿದ್ದಾರೆ. ಬಳಿಕ ಮಹಿಳೆಯ ಅಕೌಂಟ್ ನಿಂದ ಲಕ್ಷಾಂತರ ರೂಪಾಯಿಗಳನ್ನು ಬಹಳ ಬೇಗನೆ ಅವರ ಖಾತೆಯಿಂದ ವರ್ಗಾಯಿಸಲಾಗಿದೆ. ಬಳಿಕ ಮಹಿಳೆ ವಂಚಕರಿಗೆ ಮತ್ತೆ ಕರೆ ಮಾಡಿದಾಗ, ಅವರ ಫೋನ್ಗಳು ಸ್ವಿಚ್ ಆಫ್ ಆಗಿದ್ದವು.
ಆರೋಪಿಗಳ ಬಂಧನ ಮತ್ತು ತನಿಖೆ
ವಂಚನೆಗೆ ಒಳಗಾದ ಮಹಿಳೆ ದೆಹಲಿ ಪೊಲೀಸರ ವಿಶೇಷ ಘಟಕದ ‘ಗುಪ್ತಚರ ಇಲಾಖೆ (Intelligence Fusion & Strategic Operations – IFSO) ವಿಭಾಗಕ್ಕೆ ದೂರು ನೀಡಿದ್ದು, ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದಾರೆ.
ಜೂನ್ 24, 2025 ರಂದು ಪೊಲೀಸರು ಆರೋಪಿಗಳಲ್ಲಿ ಒಬ್ಬನಾದ ಅಖಿಲೇಶ್ ಎಂಬಾತನನ್ನು ಬಂಧಿಸಿದ್ದಾರೆ. ಮಹಿಳೆಯ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾಗಿ ಅಖಿಲೇಶ್ ಒಪ್ಪಿಕೊಂಡಿದ್ದಾನೆ. ಇತರ ಆರೋಪಿಗಳಾದ ಅಮ್ಜದ್, ಶಾಹಿದ್ ಮತ್ತು ಶಕೀಲ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮಹಿಳೆಗೆ ಇದುವರೆಗೆ ಕೇವಲ ₹3 ಲಕ್ಷ ರೂಪಾಯಿ ಮಾತ್ರ ಹಿಂತಿರುಗಿದ್ದು, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳು ಹಲವಾರು ಜನರಿಗೆ ವಂಚನೆ ಮಾಡಿದ್ದಾರೆ ಎಂಬುದಕ್ಕೆ ಪೊಲೀಸರಿಗೆ ಪುರಾವೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.












