ಫೆಲೆಸ್ತೀನ್: ವಿಶ್ವವೇಕೆ ಮೌನ ಪಾಲಿಸುತ್ತಿದೆ?

0
514

✍️ ಸಲೀಮ್ ಬೋಳಂಗಡಿ

ಗಾಝಾದಲ್ಲಿ ಮಾರಣ ಹೋಮ ನಡೆಯುತ್ತಿದೆ. ವಿಶ್ವ ಮೂಕ ಪ್ರೇಕ್ಷಕನಾಗಿ ನೋಡುತ್ತಿದೆ. ದಿನವೂ ಇಸ್ರೇಲಿನ ಕ್ರೌರ್ಯವು ಮೇರೆ ಮೀರುತ್ತಿದೆ. ಆದರೆ ಇಂದು ಜನರಿಗೆ ಅದೊಂದು ಸಾಮಾನ್ಯ ವರದಿ ಎಂಬಷ್ಟರ ಮಟ್ಟಿಗೆ ಅದು ಸಾಗಿ ನಿಂತಿದೆ. ಗಾಝಾದ ಜನರ ಸಾವಿನ ಬಗ್ಗೆ ಗಾಝಾದ ಜನರ ಹಸಿವು ಸಂಕಷ್ಟದ ಪರ ವಿಶ್ವದಲ್ಲಿ ಇತ್ತೀಚೆಗೆ ವಿಶ್ವದ ಬಲಿಷ್ಠ ರಾಷ್ಟ್ರಗಳಿಂದ ವಿಶೇಷ ದ್ವನಿ ಎತ್ತುವುದು ಕಂಡು ಬರುವುದಿಲ್ಲ. ಇಸ್ರೇಲಿನ ದೌರ್ಜನ್ಯಕ್ಕೆ ಮೂಗುದಾರ ತೊಡಿಸುವ ಸಾಧ್ಯತೆಯೂ ಕಂಡು ಬರುತ್ತಿಲ್ಲ. ಇರಾನ್ ಜೊತೆ ಕಾಲು ಕೆದರಿ ಯುದ್ಧಕ್ಕೆ ತೆರಳಿದ ಇಸ್ರೇಲ್ ಮೇಲೆ ಇರಾನ್ ಬಾಂಬಿನ ಸುರಿಮಳೆ ನಡೆಸಿದಾಗ ವಿಶ್ವದ ಕೆಲವು ರಾಷ್ಟ್ರಗಳಿಗೆ ಹುಟ್ಟಿದ ಕರುಣೆ ಅನುಕಂಪದ ಹೇಳಿಕೆಗಳು ಈಗ ಕಂಡು ಬರುತ್ತಿಲ್ಲ.

ಇಸ್ರೇಲಿನ ವಿರುದ್ಧದ ಬಾಂಬ್ ದಾಳಿಯನ್ನು ನಿಲ್ಲಿಸಲು ಕದನ ವಿರಾಮ ಜಾರಿಗೆ ತರಲು ಇರಾನ್ ಮೇಲೆ ಹಾಕಿದ ಒತ್ತಡವನ್ನು ಇಂದು ಗಾಝಾದ ಮೇಲೆ ತೋರಲು ಸಿದ್ದವಾಗುತ್ತಿಲ್ಲ ಯಾಕೆ? ಫೆಲೆಸ್ತೀನಿ ಜನತೆ ಎಂದರೆ ಹಸಿವಿನಿಂದ ತತ್ತರಿಸಲು ಗಾಯದಿಂದ ಬರ್ಬರವಾಗಿ ನರಳಿ ಸಾಯಲು ಇರುವವರು ಎಂಬ ಭಾವನೆ ಇವರಲ್ಲಿದೆಯೇ? ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದು ಜನತೆಯ ವಿರುದ್ಧ ಜನರ ಮಾರಣ ಹೋಮ ನಡೆಯುತ್ತಿರುವಾಗ ಅದನ್ನು ನೋಡಿ ಮೂಕ ಪ್ರೇಕ್ಷಕರಾಗುತ್ತಿರುವುದದರೂ ಯಾಕಿರಬಹುದು?

ಗಾಝಾದಲ್ಲಿ ಪ್ರತಿದಿನವೂ ಸಾವಿನ ಸುದ್ದಿಗಳು ಬರುತ್ತಲೇ ಇವೆ. ಇರಾನ್ ಮತ್ತು ಇಸ್ರೇಲಿನ ಅಂಗೀಕೃತವಾದ ಕದನವಿರಾಮಕ್ಕೆ ಸಿದ್ಧವಾಗಿದೆಯೆಂದೂ ಕತಾರ್‌ನಲ್ಲಿರುವ ನಮ್ಮ ಸೇನಾ ಶಿಬಿರಗಳು ತೆರಳಿವೆ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ದಿನವೇ ಅಪರಾಹ್ನದ ಬಳಿಕ ಎಪ್ಪತ್ತೊಂದು ಫೆಲೆಸ್ತೀನಿಯರನ್ನು ಕೊಲ್ಲಲಾಯಿತು. ಅದರ ಹಿಂದೊಂದು ದಿನ 50 ಮಂದಿ ಅಂದರೆ ನಲುವತ್ತೆಂಟು ಗಂಟೆಗಳಲ್ಲಿ ಇನ್ನೂರು ಮಂದಿಯ ಪ್ರಾಣ ಹರಣಗೊಳಿಸಲಾಯಿತು. ಹೀಗೆ ಫೆಲೆಸ್ತೀನೀ ಜನತೆಯ ಮಾರಣಹೋಮ ಮುಂದುವರಿಯುತ್ತಲೇ ಇದೆ. ಅದು ನರಕಸದೃಶವಾಗಿಯೇ ಇರಲಿ ಎಂದು ವಿಶ್ವದ ರಾಷ್ಟ್ರಗಳು ಭಾವಿಸಿದಂತಿದೆ.

ಫೆಲೆಸ್ತೀನಿಯನ್ ಜರ್ನಲಿಸ್ಟ್ ಅಮೀನ್ ಹಂದನ್ ತನ್ನ ಪತ್ನಿ ಮತ್ತು ಪುಟ್ಟ ಮಕ್ಕಳೊಂದಿಗೆ ಕುಟುಂಬ ಸಹಿತ ಹತರಾದ ವರದಿಗಳು ಚಿತ್ರ ಸಹಿತ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಫೆಲೆಸ್ತೀನಿ ಸಿವಿಲ್ ಡಿಫೆನ್ಸ್ ಅಧಿಕಾರಿ ಮುಹಮ್ಮದ್ ಗೋರ್ಬ್ ತನ್ನ ಮೂರು ಮಕ್ಕಳನ್ನು ಈ ನಡುವೆ ಕಳಕೊಂಡರು. ಅಲ್ ನಾಸರ್ ಆಸ್ಪತ್ರೆಯ ಮಕ್ಕಳ ತಜ್ಞ ಅಲ್ ಫರಕ್ ಹೇಳುವಂತೆ ಹಸುಳೆಗಳಿಗೆ ಮೊಲೆ ಹಾಲು ಸಿಗದೆ ಹಲವು ಮರಣಗಳು ಸಂಭವಿಸಬಹುದು ಎಂಬ ಎಚ್ಚರಿಕೆಯನ್ನೂ ಇತ್ತೀಚೆಗೆ ನೀಡಿದರು.

ದೈಹಿಕವಾಗಿಯೂ ಮಾನಸಿಕವಾಗಿಯೂ ಜರ್ಝರಿತಗೊಂಡ ಒಂದು ಜನತೆಯನ್ನು ಆಹಾರ ಮತ್ತಿತರ ವಸ್ತುಗಳನ್ನು ನೀಡುತ್ತೇವೆಂದು ಪ್ರಕಟಿಸಿ ಜನ ಸೇರುವಂತೆ ಮಾಡಿ ಸ್ನಿಪ್ಪರ್ ಮೂಲಕ ಗುಂಡು ಹಾರಿಸಿ ಕೊಲ್ಲುವುದಕ್ಕೂ ಹೇಸದ ಐಡಿಎಫ್ ಸೇನೆಯ ಬಗ್ಗೆ ಚಿಂತಿಸುವಾಗ ಇವರದ್ದು ಎಂತಹ ಕ್ರರ‍್ಯದ ತುಂಬಿದ ಮನಸ್ಸಾಗಿರಬಹುದು ಎಂಬುದನ್ನು ಚಿಂತಿಸಿರಿ. ಗಾಝಾದ ಜನತೆ ಹಸಿವಿನಿಂದ ತತ್ತರಿಸುತ್ತಿದೆ. ಅಗತ್ಯದ ಔಷಧಿಗಳು ಇಲ್ಲದೆ ಪರಾದಾಡುತ್ತಿದ್ದಾರೆ. ಅವರಿಗೆ ಬರುತ್ತಿರುವಂತಹ ನೆರವಿನ ಹಸ್ತಗಳನ್ನು ತಡೆಹಿಡಿಯಲಾಗಿದೆ. ವಿಧವೆ, ಅನಾಥರ ಸಂಖ್ಯೆಯೂ ದಿನವೂ ಏರುತ್ತಲೇ ಇದೆ.

ಹೌದು 2023 ರಿಂದ ಗಾಝದ 36 ಆಸ್ಪತ್ರೆಗಳಿಗೆ ಇಸ್ರೇಲ್ ಬಾಂಬ್ ದಾಳಿ ನಡೆಸಿ ಹಲವರನ್ನು ಬಲಿ ಪಡೆದಿದೆ. ಇಸ್ರೇಲಿನ ಒಂದು ಆಸ್ಪತ್ರೆಯ ಮೇಲೆ ಇರಾನ್ ಬಾಂಬ್ ಸುರಿಸಿದ ಮಾತ್ರಕ್ಕೇ ವಿಶ್ವದಲ್ಲಿ ಅದೆಂತಹ ಅನುಕಂಪದ ಮಾತುಗಳು ಕೇಳಿ ಬಂದವು ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ಒಂದೇ ದಿನದಲ್ಲಿ ನೂರಾರು ಫೆಲೆಸ್ತೀನಿಯರು ಹತರಾದರೂ ಏನೂ ಸಂಭವಿಸದಂತೆ ವಿಶ್ವ ಮಾತ್ರ ಮೂಕ ಪ್ರೇಕ್ಷಕನಾಗಿ ಮುಂದುವರಿಯುತ್ತಿದೆ. ಇಸ್ರೇಲಿ ವಂಶೀಯ ನಿರ್ಮೂಲನೆಯ ದಾಹ ಮುಂದುವರಿಯುತ್ತಲೇ ಇದೆ. ಇಸ್ರೇಲಿನ ಆಸ್ಪತ್ರೆ ಮೇಲೆ ತೋರಿದ ಅನುಕಂಪ ಯಾಕಿಲ್ಲ. ಎಲ್ಲರ ಮಾನಸಿಕ ಸ್ಥಿತಿಯೂ ಇಷ್ಟೊಂದು ಕ್ರೂರವಾಗಿದೆಯೇ? ಅರಬ್ ರಾಷ್ಟ್ರಗಳು ಅಮೇರಿಕ ಮತ್ತಿತರ ಬಲಿಷ್ಠ ರಾಷ್ಟ್ರಗಳ ಕೈಗೊಂಬೆಯಾಗಿರುವಂತೆ ಕಂಡು ಬರುತ್ತಿದೆ. ಇರಾನ್ ದೇಶದತ್ತ ಅರಬ್ ರಾಷ್ಟ್ರಗಳ ಗಮನಹರಿಸಿ ಇತ್ತ ಫೆಲೆಸ್ತೀನಿನಲ್ಲಿ ನೆತನ್ಯಾಹುವಿನ ನರಬೇಟೆ ನಿರಂತರ ಮುಂದುವರಿಯುತ್ತಲೇ ಇದೆ.

ಫೆಲೆಸ್ತೀನ್ ಜನತೆಯ ಪರವಾಗಿ ದ್ವನಿಗಳು ಕ್ಷೀಣಿಸುತ್ತಿರುವಾಗ ಅದನ್ನು ಹೆಚ್ಚು ಬಲಪಡಿಸಲು ವಿಶ್ವದ ನ್ಯಾಯ ಪ್ರಿಯರು ಮುಂದಾಗಬೇಕು. ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಒಂದು ಜನತೆಯ ವಿರುದ್ಧದ ಅನ್ಯಾಯ ಅಕ್ರಮ ದೌರ್ಜನ್ಯಗಳ ವಿರುದ್ಧ ವಿಶ್ವವು ಸೆಟೆದು ನಿಲ್ಲಬೇಕಾಗಿದೆ. ಇಸ್ರೇಲ್ ಇರಾನ್ ವಿರುದ್ದದ ಯುದ್ದಗಳಿಗೆ ವಿರಾಮ ಹಾಡಲು ಹಾತೊರೆದವರು ಫೆಲೆಸ್ತೀನೀ ಜನರ ನೆರವಿಗೆ ಮಾನವೀಯ ದೃಷ್ಟಿಯಿಂದಾದರೂ ಧಾವಿಸಬೇಕಾಗಿದೆ. ಅಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತಬೇಕಾಗಿದೆ. ಇಸ್ರೇಲ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಲು ವಿಶ್ವ ಸಂಸ್ಥೆ ಮುಂದಾಗಬೇಕು.

ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆ ಎಂಬ ವ್ಯವಸ್ಥೆ ನಿರ್ದಿಷ್ಟ ಮುಸ್ಲಿಮ್ ರಾಷ್ಟ್ರಗಳ ವಿರುದ್ಧ ಮಾತ್ರ ಬಳಸಲು ಇರುವಂತಹದ್ದೇ? ವಿಶ್ವಸಂಸ್ಥೆಯು ಕೇವಲ ಹೇಳಿಕೆ ನೀಡಿದರೆ ಸಾಕೇ? ಹಮಾಸನ್ನು ಭಯೋತ್ಪಾದಕರು ಎಂದು ಕರೆಯುವವರಿಗೆ ಇಸ್ರೇಲ್ ಶಾಂತಿ ದೂತರಾಗಿ ಕಾಣಿಸುತ್ತಿದ್ದಾರೆಯೇ? ಅಮೇರಿಕಾದ ದೊಡ್ಡಣ್ಣತನಕ್ಕೆ ಇರಿಸು ಮುರಿಸುಂಟು ಮಾಡಿದ ಇರಾನ್ ಸ್ವಲ್ಪವಾದರೂ ಇಸ್ರೇಲಿಗೆ ಬಿಸಿ ಮುಟ್ಟಿಸಿತು. ಅಂದು ತೋರಿದ ಅನುಕಂಪವನ್ನು ಫೆಲೆಸ್ತೀನಿ ಜನತೆಯ ಮೇಲೆ ತೋರಬಾರದೇಕೇ? ಜನರು ಸ್ವಯಂ ಪ್ರಶ್ನಿಸಿಕೊಳ್ಳಬೇಕಾಗಿದೆ. ನಾವು ಕೂಡಾ ಪ್ರಶ್ನಾರ್ಹರು!