ಸನ್ಮಾರ್ಗ ವಾರ್ತೆ
ಕಲ್ಲಡ್ಕ: ಜುಲೈ 28 ರಂದು ಸೋಮವಾರದಂದು ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಹಾಗೂ AICTE ಮಾನ್ಯತೆ ಪಡೆದ BCA ವಿಭಾಗದ ಉದ್ಘಾಟನಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ. ಬಿ . ರಮಾನಾಥ ರೈ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕರಾದ ಶ್ರೀಯುತ ಅಮಾನುಲ್ಲಾ ಖಾನ್ ಇವರು ಪ್ರಾಸ್ತಾವಿಕ ಭಾಷಣವನ್ನು ಮಾಡಿ ಅತಿಥಿಗಳ ಪರಿಚಯವನ್ನು ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಬಿ . ರಮಾನಾಥ ರೈ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸುತ್ತಾ, ಪ್ರತಿಯೋರ್ವ ತಂದೆ ತಾಯಿಯು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಅವರ ಆದ್ಯ ಕರ್ತವ್ಯವಾಗಿದೆ ಮತ್ತು ಸರಕಾರ ಕೂಡ ಈ ನಿಟ್ಟಿನಲ್ಲಿ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು. ಅದೇ ರೀತಿ ಅನುಗ್ರಹ ಮಹಿಳಾ ಕಾಲೇಜು ಕೂಡ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡುವುದರಲ್ಲಿ ಉನ್ನತ ಸ್ಥಾನದಲ್ಲಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ಅನುಗ್ರಹ ಆಡಳಿತ ಮಂಡಳಿಯ ಚಯರ್ಮೆನ್ ಶ್ರೀಯುತ ಯಾಸೀನ್ ಬೇಗ್ ರವರು ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪೋಷಕರಿಗೆ ನಿಜವಾದ ಆಸ್ತಿ ತಮ್ಮ ಮಕ್ಕಳು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಯಾಗಿ ಆಗಮಿಸಿದ ಹವ್ವಾ ಜುಮ್ಮಾ ಮಸೀದಿ ಬೋಳಂಗಡಿ ಇದರ ಖತೀಬರಾದ ಮೌಲಾನಾ ಯಹ್ಯಾ ತಂಗಳ್ ಮದನಿ ಅವರು ವಿದ್ಯಾರ್ಥಿನಿಯರು ಸಮಾಜದಲ್ಲಿ ದೃಢ ನಿರ್ಧಾರದಿಂದ ಹೆಜ್ಜೆ ಇಟ್ಟರೆ ಯಾವ ತೊಂದರೆಗಳು ಬರುವುದಿಲ್ಲ ಎಂಬ ಸಂದೇಶವನ್ನು ನೀಡಿ ಸಭೆಯಲ್ಲಿದ್ದ ಸರ್ವ ಸದಸ್ಯರಿಗೂ ಪ್ರಾರ್ಥಿಸಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ಮುಹಮ್ಮದ್ ಇಸಾಕ್ ಮಂಗಳೂರು ಹಾಗೂ
ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀಯುತ ಇಮಾರತ್ ಅಲಿ, ಪ್ರಾಂಶುಪಾಲೆಯಾದ ಡಾ. ಹೇಮಲತ ಬಿ. ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ವಾಣಿಜ್ಯ ವಿಭಾಗದ ಸಲ್ಮಾ ನವಾಲ್ ಕಿರಾತ್ ಪಠಿಸಿ, ಪ್ರಥಮ ವಿಜ್ಞಾನ ವಿಭಾಗದ ರಿಲಾ ಮರಿಯಂ ಬಸ್ತಿಕಾರ್ ಸ್ವಾಗತಿಸಿ, ಅಂತಿಮ ಬಿಎ ವಿಭಾಗದ ಯು.ಕೆ ಸಂಶೀರ ವಂದಿಸಿ , ದ್ವಿತೀಯ ವಾಣಿಜ್ಯ ವಿಭಾಗದ ಆಸೀಯ ಅಫ್ಸಾನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಬೋಧಕ ಬೋಧಕೇತರ ವೃಂದದವರು, ಪೋಷಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.












