ಆ್ಯಂಬುಲೆನ್ಸ್‌ಗಳಿಗೂ ಓಲಾ-ಊಬರ್ ಮಾದರಿ: ದರ ನಿಗದಿ – ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ

0
267

ಸನ್ಮಾರ್ಗ ವಾರ್ತೆ

ಬೆಂಗಳೂರು: ಖಾಸಗಿ ಆ್ಯಂಬುಲೆನ್ಸ್‌ಗಳು ವಿಪರೀತ ಶುಲ್ಕ ವಿಧಿಸುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಇನ್ಮುಂದೆ ಆ್ಯಂಬುಲೆನ್ಸ್‌ಗಳನ್ನು ಓಲಾ-ಊಬರ್ ಮಾದರಿಯಲ್ಲಿ ಆ್ಯಪ್‌ ಮೂಲಕ ಬುಕ್ ಮಾಡಲು ಅವಕಾಶ ನೀಡಲಾಗುತ್ತದೆ.

ಗೋರಗುಂಟೆಪಾಳ್ಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕೇವಲ ಕೆಲವು ಕಿಲೋ ಮೀಟರ್ ಪ್ರಯಾಣಕ್ಕಾಗಿ ಖಾಸಗಿ ಆಂಬ್ಯುಲೆನ್ಸ್‌ನವರು ₹8,500 ಶುಲ್ಕ ವಿಧಿಸಿದ ಘಟನೆ ಬೆಳಕಿಗೆ ಬಂದ ನಂತರ, ರಾಜ್ಯ ಸರ್ಕಾರ ಖಾಸಗಿ ಆಂಬ್ಯುಲೆನ್ಸ್ ಸೇವೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಆ್ಯಂಬುಲೆನ್ಸ್ ಸೇವೆಗಳನ್ನು ಕೂಡ ಕೆಪಿಎಂಇ ಕಾಯ್ದೆಯ ವ್ಯಾಪ್ತಿಗೆ ತರುವುದು, ಅವುಗಳಿಗೆ ದರ ನಿಗದಿಪಡಿಸುವುದು ಹಾಗೂ ನೋಂದಣಿ ಕಡ್ಡಾಯಗೊಳಿಸುವುದು ಸರ್ಕಾರದ ಹೊಸ ಯೋಜನೆಯಾಗಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಆರೋಗ್ಯ ಕ್ಷೇತ್ರವನ್ನು ಕೇವಲ ವ್ಯಾಪಾರ ಎಂದು ಪರಿಗಣಿಸದೆ, ಸೇವಾ ಆಧಾರಿತವಾಗಿ ನಡೆಸಬೇಕು. ನ್ಯೂನತೆಗಳು ಮಿತಿ ಮೀರಿದಾಗ, ಸಾರ್ವಜನಿಕ ಹಿತಾಸಕ್ತಿಗಾಗಿ ಸರ್ಕಾರ ಮಧ್ಯಪ್ರವೇಶಿಸುವುದು ಅಗತ್ಯವಾಗುತ್ತದೆ” ಎಂದು ಹೇಳಿದರು.

ಈ ಮೂಲಕ ಆ್ಯಂಬುಲೆನ್ಸ್ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣ ತರಲು ಸರ್ಕಾರ ಪ್ರಯತ್ನಿಸುತ್ತಿದೆ.