ನಮಾಜು ಮಾಡಲು ಊರಲ್ಲಿ ಮುಸ್ಲಿಮರಿಲ್ಲದಿದ್ದರೂ ಈ ಮಸೀದಿ ಕೆಡವಲು ನಾವು ಬಿಡಲ್ಲ, ಇದು ದೇವಭವನ – ಪಂಜಾಬ್ ಹೈಡನ್ ಬೈತ್‍ನ ಸಿಕ್ಖರು

0
1516

ಲುಧಿಯಾನ, ಜೂ.17: ‘ ಈ ಮಸೀದಿ ಕೆಡವಲು ಯಾರನ್ನೂ ನಾವು ಬಿಡುವುದಿಲ್ಲ. ಇದು ದೇವಭವನವಾಗಿದೆ’ -ಹೀಗೆ ಪಂಜಾಬ್‍ನ ಹೈಡನ್ ಬೈತ್‍ನ ಗ್ರಾಮ ಮುಖ್ಯಸ್ಥ ಗುರ್‍ಪಾಲ್ ಸಿಂಗ್ ಹೇಳುತ್ತಾರೆ. ಪಂಜಾಬ್‍ನ ಲುಧಿಯಾನ ಜಿಲ್ಲೆಯ ಮಚ್ಚಿವಾರ ತಾಲೂಕಿನ ಹೈಡನ್‍ಬೈತ್‍ನಲ್ಲಿ ಒಬ್ಬನೇ ಒಬ್ಬ ಮುಸ್ಲಿಮನಿಲ್ಲ. ಆದರೆ ಗ್ರಾಮದಲ್ಲಿ 1920ರಲ್ಲಿ ನಿರ್ಮಿಸಲಾದ ಮಸೀದಿಯನ್ನು ಸಂರಕ್ಷಿಸುವ ಪ್ರತಿಜ್ಞೆಯನ್ನು ಸಿಕ್ಖ್ ಧರ್ಮೀಯರು ಕೈಗೊಂಡಿದ್ದಾರೆ.

1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದಾಗ ಗ್ರಾಮದಲ್ಲಿದ್ದ ಮುಸ್ಲಿಮರು ಮನೆ, ಜಮೀನು ತೊರೆದು ಪಾಕಿಸ್ತಾನಕ್ಕೆ ಹೊರಟು ಹೋದ ಬಳಿಕ ಈ ಮಸೀದಿ ಅನಾಥವಾಗಿತ್ತು. ಆದರೆ ಮಸೀದಿಯ ಸಂರಕ್ಷಣೆಯ ಹೊಣೆಯನ್ನು ಸಿಕ್ಖ್ ಧರ್ಮೀಯರು ಎತ್ತಿಕೊಂಡರು. ಮಸೀದಿಯನ್ನು ಅತಿಕ್ರಮಿಸುವ ಪ್ರಯತ್ನವನ್ನು ತಡೆಯುವುದು ಗ್ರಾಮದ ಹಿರಿಯರ ನಿಲುವು ಆಗಿದೆ. ಅವರನ್ನು ಇಡೀ ಗ್ರಾಮವೇ ಬೆಂಬಲಿಸುತ್ತಿದೆ. ಹೈಡನ್ ಬೈತ್‍ನ ನೂರು ವರ್ಷ ಹಳೆಯ ಮಸೀದಿ ಮತ್ತು ಮುಸ್ಲಿಂ ವಕ್ಫ್ ಬೋರ್ಡಿನ ಅಧೀನದ ನೂರಾರು ಆಸ್ತಿಯು ದೇಶ ವಿಭಜನೆಯೊಂದಿಗೆ ಅನಾಥವಾಯಿತು.

ಮಸೀದಿ, ಕಬರಸ್ಥಾನ, ಖಾನ್‍ಗಾಹ್, ಶಾಲೆ, ಯತೀಂಖಾನ, ಈದ್‍ಗಾಹ್ ಮೈದಾನ, ಮಕ್ಬರಾಗಳಲ್ಲಿ ಹೆಚ್ಚಿನವು ಇಂದು ಪರಭಾರೆಯಾಗಿದೆ. ಪಂಜಾಬ್ ಸರಕಾರ ವಕ್ಫ್ ಆಸ್ತಿಯನ್ನು ಅತಿಕ್ರಮಿಸಿದವರ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಹೊಂದಿದೆ. ಭೂಮಾಫಿಯಾದ ಅತಿಕ್ರಮಣ ಎರಡನೆ ಸ್ಥಾನದಲ್ಲಿದೆ. ಆದರೆ ಈ ಕುರಿತು ಈವರೆಗೆ ಯಾವುದೇ ತನಿಖೆ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಹೈಡೆನ್‍ಬೈತ್ ಮಸೀದಿಯನ್ನು ಸಂರಕ್ಷಿಸುವುದಕ್ಕೆ ಗ್ರಾಮಸ್ಥರೇ ಮುಂದೆ ಬಂದಿದ್ದಾರೆ.