ಜನ್ಮಾಷ್ಟಮಿ ವಿಡಿಯೋ ಹಂಚಿಕೊಂಡು ಅಮಾನತಾದ ಕಾನ್‌ಸ್ಟೇಬಲ್ ಸುಹೇಲ್ ಖಾನ್

0
645

ಸನ್ಮಾರ್ಗ ವಾರ್ತೆ

ಮಂದಿರದಲ್ಲಿ ನಡೆಯುತ್ತಿದ್ದ ಜನ್ಮಾಷ್ಟಮಿ ಹಬ್ಬದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಗಾಝಿಯಾಬಾದ್ ನ ಕಾನ್‌ಸ್ಟೇಬಲ್ ಸುಹೇಲ್ ಖಾನ್ ಅವರನ್ನು ವಜಾ ಮಾಡಲಾಗಿದೆ. ಈ ವಿಡಿಯೋವನ್ನು ಹಂಚಿಕೊಳ್ಳುವುದರ ಜೊತೆಗೆ, ಆರಾಧನೆಗೆ ಅಲ್ಲಾಹನು ಮಾತ್ರನೇ ಅರ್ಹ. ಇನ್ನಾರೂ ಆರಾಧನೆಗೆ ಅರ್ಹರಲ್ಲ ಎಂಬ ಸಂದೇಶವನ್ನು ಹಾಕಿದ್ದರು. ಈ ಕ್ಲಿಪ್ ವೈರಲ್ ಆಗಿತ್ತು. ಹಿಂದೂ ರಕ್ಷಾ ದಲ್ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಹಿಂದೂ ರಕ್ಷಾದಳ್ ರಾಷ್ಟ್ರೀಯ ಅಧ್ಯಕ್ಷೇ ಪಿಂಕಿ ಚೌಧರಿ ಅವರು ಈ ಬಗ್ಗೆ ಟ್ವಿಟರ್ ನಲ್ಲಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಲ್ಲದೆ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು.

ಈ ಕಾನ್ಸ್ಟೇಬಲ್ ವಿರುದ್ಧ ತತ್ ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು. ಇದರ ಬೆನ್ನಿಗೆ ಗಾಜಿಯಾಬಾದ್ ಪೊಲೀಸ್ ಕಮಿಷನರ್ ಅವರು ಈ ಸುಹೇಲ್ ಖಾನ್ ಅವರನ್ನು ಅಮಾನತುಗೊಳಿಸಿದರು.

ಈ ವಿಡಿಯೋ ಮತ್ತು ಅಭಿಪ್ರಾಯ ಅವರ ವೈಯಕ್ತಿಕವಾಗಿತ್ತು. ಇದನ್ನು ರಾಜಕೀಯವಾಗಿ ನೋಡಬಾರದಿತ್ತು. ಅದರಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವಂತದ್ದು ಏನಿತ್ತು ಎಂದು ಸಾರ್ವಜನಿಕರಲ್ಲಿ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ಮತ್ತು ಕಮೆಂಟನ್ನು ವಿರೋಧಿಸಿದ್ದಾರೆ.

ಇದೇ ವೇಳೆ ಭಾರತದ ಈಗಿನ ಪರಿಸ್ಥಿತಿಯಲ್ಲಿ ಮುಸ್ಲಿಮರು ಹೇಗೆ ಕ್ರಮಕ್ಕೆ ತುತ್ತಾಗುತ್ತಾರೆ ಅನ್ನೋದನ್ನ ಈ ಪ್ರಕರಣ ಬಿಂಬಿಸುತ್ತದೆ ಎಂದು ಹೇಳಿದವರಿದ್ದಾರೆ.

ಮುಸ್ಲಿಮರು ಕತ್ತಿಯ ಮೇಲಿನ ನಡಿಗೆಯಂತೆ ನಡೆಯಬೇಕಾಗಿದೆ.. ಅವರಿಂದ ಆಗುವ ಸಣ್ಣ ತಪ್ಪುಗಳು ಕೂಡ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳುವಷ್ಟು ಅದು ಭೀಕರವಾಗಿರುತ್ತದೆ ಎಂದು ಹೇಳಿದವರಿದ್ದಾರೆ.