ಮ್ಯಾಗ್ಸೆಸೆ ಪುರಸ್ಕಾರ ಪಡೆದ ಈ ಸಫೀನಾ ಹುಸೇನ್ ಯಾರು ಗೊತ್ತೆ?

0
503

✍️ ಅಮಾನ್ ಕೆ.

ಸಫೀನಾ ಹುಸೇನ್ ಎಂಬ ಹೆಣ್ಮಗಳನ್ನು ಇವತ್ತು ಜಗತ್ತೇ ತಿರುಗಿ ನೋಡಿದೆ. ಅಭಿಮಾನದಿಂದ ಮೆಚ್ಚಿಕೊಳ್ಳುತ್ತಿದೆ. ಭಾರತ ಸಲ್ಯೂಟ್ ಎಂದು ಹೇಳ್ತಾ ಇದೆ. ಯಾಕೆಂದರೆ ಈ ಹೆಣ್ಮಗಳ ಸಾಧನೆ ಅಷ್ಟಿಷ್ಟಲ್ಲ. ನೋಬೆಲ್ ಪ್ರಶಸ್ತಿಯ ಬಳಿಕ ಅತ್ಯಂತ ದೊಡ್ಡ ಪ್ರಶಸ್ತಿ ಎಂದು ಕರೆಸಿಕೊಂಡಿರುವ ಮ್ಯಾಗ್ಸೆಸೆ ಪುರಸ್ಕಾರಕ್ಕೆ ಈ ಹೆಣ್ಣುಮಗಳು ಪಾತ್ರರಾಗಿದ್ದಾರೆ. ಭಾರತದ ಈ ಹೆಮ್ಮೆಯ ಪುತ್ರೀಯ ಸಾಧನೆ ಏನು ಅನ್ನೋದನ್ನ ವಿವರಿಸುವುದೇ ಈ ಕಾರ್ಯಕ್ರಮ.

ಒಂದು ಕಾಲದಲ್ಲಿ ಈ ಸಫೀನಾ ಹುಸೇನ್ ವೈಯಕ್ತಿಕ ಕಾರಣದಿಂದ ಶಾಲೆಯಿಂದ ಹೊರಗೆ ಉಳಿದಿದ್ದರು. ಆದರೆ ಮರಳಿ ಪ್ರಯತ್ನಿಸಿ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಪದವಿ ಪಡೆದರು. ಆದರೆ ಅವರಿಗೆ ತನ್ನಂತೆ ಶಾಲೆಯಿಂದ ಹೊರಗುಳಿಯುವ ಮಕ್ಕಳು ಎಷ್ಟು ಇರಬಹುದು ಅನ್ನುವ ಚಿಂತೆ ಹಚ್ಚಿತು. ಇವ್ರು ಲಂಡನ್ ನಿಂದ ಪದವಿ ಪಡೆಯುವುದಕ್ಕೆ ಕುಟುಂಬದ ಓರ್ವ ಗೆಳೆಯರೇ ಕಾರಣರಾಗಿದ್ದರು. ತಾನೇಕೆ ಇತರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದುಡಿಯಬಾರದು ಎಂಬ ಪ್ರಶ್ನೆ ಅವರೊಳಗೆ ಮೂಡಿತು. ಲಂಡನ್ ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ ಸಫೀನಾ ಹುಸೇನ್ ನೇರ ಭಾರತಕ್ಕೆ ಬಂದರು.ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತಿಜ್ಞೆ ಮಾಡ್ಕೊಂಡ್ರು. ದಿ ಫೌಂಡೇಶನ್ ಟು ಎಜುಕೇಟ್ ಗರ್ಲ್ಸ್ ಗ್ಲೋಬಲಿ ಎಂಬ ಹೆಸರಲ್ಲಿ ಸಂಸ್ಥೆಯೊಂದನ್ನು ಕಟ್ಟಿದರು. ಇದು ಮುಂದಕ್ಕೆ ಎಜುಕೇಟ್ ಗರ್ಲ್ಸ್ ಎಂಬ ಹೆಸರಲ್ಲಿ ಜನಪ್ರಿಯವಾಯಿತು.

2007ರಲ್ಲಿ ರಾಜಸ್ಥಾನದ ಕೇವಲ ಎರಡು ಹಳ್ಳಿಗಳನ್ನು ಅವರು ಆಯ್ಕೆ ಮಾಡಿಕೊಂಡರು. ಇವತ್ತು ಭಾರತದ 30,000 ಕ್ಕಿಂತಲೂ ಹೆಚ್ಚು ಹಳ್ಳಿಗಳಿಗೆ ಈ ಎಜುಕೇಟ್ ಗರ್ಲ್ಸ್ ವ್ಯಾಪಿಸಿದೆ. ಸುಮಾರು ಎರಡು ದಶಕಗಳಲ್ಲಿ 20 ಲಕ್ಷಕ್ಕಿಂತಲೂ ಹೆಚ್ಚು ಯುವತಿಯರು ಇದರಿಂದ ಪ್ರಯೋಜನ ಪಡೆಕೊಂಡಿದ್ದಾರೆ. ನಿಮಗೆ ಗೊತ್ತಿರಲಿ NGO ಒಂದು ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇದೇ ಮೊದಲು.

ಹೆಣ್ಣು ಮಕ್ಕಳು ಶಿಕ್ಷಣ ಪಡೆಯದೇ ಇರುವುದಕ್ಕೆ ಬಡತನವೊಂದೇ ಕಾರಣ ಅಲ್ಲ, ಕುಟುಂಬದ ಮಾನಸಿಕ ಪರಿಸ್ಥಿತಿಗೂ ಇದರಲ್ಲಿ ದೊಡ್ಡ ಪಾತ್ರವಿದೆ, ತಾನು ಮತ್ತು ತನ್ನ ಜೊತೆಗಾರರು ಎದುರಿಸಿದ ಸವಾಲುಗಳೇ ಇದನ್ನು ಹೇಳುತ್ತವೆ ಎಂದು ಸಫೀನಾ ಹುಸೇನ್ ಹೇಳಿದ್ದಾರೆ.

ಹೆಣ್ಣು ಮತ್ತು ಗಂಡು ಇಬ್ರು ಸಮಾನರು ಎಂದು ನಮ್ಮ ಸಮಾಜ ಅರಿತುಕೊಂಡರೆ ನಾಳೆ ಈ ಎಜುಕೇಟ್ ಗರ್ಲ್ಸ್ ಸಂಸ್ಥೆಯ ಅಗತ್ಯ ಇರೋದಿಲ್ಲ. ಅಲ್ಲಿಯವರೆಗೆ ನಮ್ಮ ಸಂಸ್ಥೆ ನಿರಂತರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಲಿದೆ ಎಂದು ಅವರು ಹೇಳಿದ್ದಾರೆ.

ಸಫೀನಾ ಹುಸೇನ್ ಅವರ ಎಜುಕೇಟ್ ಗರ್ಲ್ಸ್ ಸಂಸ್ಥೆಯು ಒಂದು ಪರ್ಯಾಯ ಸರಕಾರದಂತೆ ದೇಶದಲ್ಲಿ ಕೆಲಸ ಮಾಡಿದೆ. 20 ಲಕ್ಷದಷ್ಟು ಹೆಣ್ಣು ಮಕ್ಕಳನ್ನು ಶಾಲೆಗೆ ಕರೆ ತರುವುದು, ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಸಣ್ಣ ಸಾಧನೆ ಅಲ್ಲ. ಲಂಡನ್ ನಲ್ಲಿ ಓದಿರುವ ಸಫೀನಾ ಹುಸೇನ್ ಅವರಿಗೆ ಅಲ್ಲಿಯೇ ಕೆಲಸ ಮಾಡುತ್ತಾ ಕೈತುಂಬ ಹಣವನ್ನು ಗಳಿಸುತ್ತಾ ಆರಾಮವಾಗಿ ಇರಬಹುಡಿತ್ತು. ಆದರೆ ಭಾರತದ ಮೇಲಿನ ಪ್ರೀತಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಬಗೆಗಿನ ಕಾಳಜಿ ಅವರನ್ನು ಹೆಣ್ಣು ಮಕ್ಕಳ ಶಿಕ್ಷಣದತ್ತ ವಾಲಿಸಿತು. ಇವತ್ತು ಅವರು ಮ್ಯಾಗ್ಸೆಸೆ ಪುರಸ್ಕೃತರಾಗುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಹ್ಯಾಟ್ಸಾಪ್ ಸಫೀನಾ.