ತೆಲಂಗಾಣದಲ್ಲಿ 9 ತಿಂಗಳ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿ ಕೊಂದ ಯುವಕನನ್ನು ಹಿಡಿದು ಊರವರೇ ಪೊಲೀಸರಿಗೆ ಒಪ್ಪಿಸಿದರು

0
1339

ಹೈದರಾಬಾದ್,ಜೂ. 20: ಒಂಬತ್ತು ತಿಂಗಳ ಹೆಣ್ಣು ಮಗವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾದ ಅತೀ ದಾರುಣ ಘಟನೆ ತೆಲಂಗಾಣದ ವಾರಂಗಲ್‍ನಿಂದ ವರದಿಯಾಗಿದೆ. ಬುಧವಾರ ಬೆಳಗ್ಗೆ 28 ವರ್ಷದ ಯುವಕ ಪ್ರವೀಣ್ ಎಂಬಾತ ಮಗುವನ್ನು ಅತ್ಯಾಚಾರ ಮಾಡಿದ್ದು ಆತನನ್ನು ಊರವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜೊತೆಗೆ ಆರೋಪಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.

ತಂದೆ ತಾಯಿಗಳೊಂದಿಗೆ ಮನೆಯ ಟೆರೆಸ್‍ನಲ್ಲಿ ನಿದ್ದೆ ಮಾಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಪ್ರವೀಣ್ ಅತ್ಯಾಚಾರ ಮಾಡಿದ್ದಾನೆ. ಮಗು ಕಾಣೆಯಾಗಿದ್ದನ್ನು ಕಂಡು ತಂದೆ ತಾಯಿ ಬೊಬ್ಬೆ ಹೊಡೆದರು. ಅದನ್ನು ಕೇಳಿ ಊರವರು ಓಡಿ ಬಂದಿದ್ದನ್ನು ನೋಡಿ ಮಗುವನ್ನು ಎಸೆದು ಓಡಿಹೋಗಲು ಆರೋಪಿ ಯತ್ನಿಸಿದ್ದಾನೆ. ಕೂಡಲೇ ಕಾರ್ಯತತ್ಪರರಾದ ಊರವರು ಪ್ರವೀಣ್‍ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವಿಗೆ ರಕ್ತಸ್ರಾವವಾಗಿತ್ತು. ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅದು ಬದುಕಿ ಉಳಿಯಲಿಲ್ಲ.