ಮಂಜೇರಿ, ಜೂ. 20: ಮಲಪ್ಪುರಂ ಕುರುವ ಪಂಚಾಯತ್ ವ್ಯಾಪ್ತಿಯಲ್ಲಿ ಶಾಲೆಗೆ ಹೋಗಲು ಬಿಡದೆ ಹೆತ್ತವರು ಹದಿಮೂರು ವರ್ಷಗಳವರೆಗೆ ಮನೆಯೊಳಗೆ ಕೂಡಿ ಹಾಕಿದ್ದ ಮನೆಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಚೈಲ್ಡ್ ಪ್ರೊಟೆಕ್ಷನ್ ವಿಭಾಗ ಬಿಡಿಸಿದೆ. 13 ಮತ್ತು ಒಂಬತ್ತು ವರ್ಷ ವಯಸ್ಸಿನ ಇಬ್ಬರು ಬಾಲಕರನ್ನು ಧಾರ್ಮಿಕ ವಿದ್ಯಾಭ್ಯಾಸ ಮಾತ್ರ ನೀಡಿದ ಹೆತ್ತವರು ಶಾಲೆಗೆ ಹೋಗಲು ಬಿಡದೆ ಮನೆಯೊಳಗೆ ಇರಿಸಿದ್ದರು. ಮಕ್ಕಳಿಗಾದ ಈ ಕ್ರೂರ ಅವಸ್ಥೆಯನ್ನು ಕಂಡು ಮರುಗಿದ ಊರವರೇ ಚೈಲ್ಡ್ ಪ್ರೊಟೆಕ್ಷನ್ ಸಮಿತಿಗೆ ತಿಳಿಸಿದ್ದರು. ನಂತರ ಜಿಲ್ಲಾ ಚೈಲ್ಡ್ ಪ್ರೊಟೆಕ್ಷನ್ ವಿಭಾಗ ಪರಿಶೀಲನೆ ನಡೆಸಿ ಜೂನ್ ಹದಿನಾಲ್ಕರಂದು ಮಕ್ಕಳನ್ನು ಪತ್ತೆ ಹಚ್ಚಿತ್ತು. ಮನೆಯ ಸುತ್ತಮುತ್ತಲು ಬಟ್ಟೆಯನ್ನು ಕಟ್ಟಿ ಇಡಲಾಗಿತ್ತು. ನೆರೆಯವರು ಕುಟುಂಬದವರೊಂದಿಗೆ ಇವರು ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿರಲಿಲ್ಲ. ಮಕ್ಕಳು ರೋಗಕ್ಕೆ ತುತ್ತಾದರೂ ಹದಿಮೂರು ವರ್ಷಗಳಲ್ಲಿ ಮಕ್ಕಳನ್ನು ವೈದ್ಯರಿಗೆ ತೋರಿಸಿರಲಿಲ್ಲ. ವಿಶೇಷ ಪ್ರಾರ್ಥನೆ ಮಾಡಿ ತಂದೆಯೇ ಚಿಕಿತ್ಸೆ ನೀಡುತ್ತಿದ್ದರು. ತಂದೆ ಕೆಲಸದ ವೇಳೆ ಬಿದ್ದು ಗಾಯಗೊಂಡಾಗಲೂ ಚಿಕಿತ್ಸೆ ಪಡೆದಿರಲಿಲ್ಲ. ಪ್ರಾರ್ಥಿಸಿ ತಾನು ರೋಗವನ್ನು ಗುಣಪಡಿಸಿಕೊಂಡೆ ಎಂದು ಈತ ಹೇಳುತ್ತಿದ್ದಾನೆ.
ಮಕ್ಕಳನ್ನು ಆ ಮನೆಯಿಂದ ಬಿಡಿಸಿ ತಂಬಾವೂರ್ ಎಂಬಲ್ಲಿನ ರಕ್ಷಣಾ ಗೃಹಕ್ಕೆ ಸೇರಿಸಲಾಯಿತು. ನಂತರ ಪೊಲೀಸರ ಸಹಾಯದಿಂದ ರಂಡತ್ತಾನಿ ಶಾಂತಿ ಭವನಕ್ಕೆ ಕರೆದುಕೊಂಡು ಹೋಗುವಾಗ ಅಲ್ಲಿಗೆ ಬಂದ ಹೆತ್ತವರು ಚೈಲ್ಡ್ ಪ್ರೊಟೆಕ್ಷನ್ ಅಧಿಕಾರಿಗೆ ಹಲ್ಲೆ ಮಾಡಿದ್ದಾರೆ. ಹೊರಲೋಕದೊಂದಿಗೆ ಸಂಪರ್ಕ ಇಲ್ಲದ್ದರಿಂದ ಮಕ್ಕಳ ವರ್ತನೆಯಲ್ಲಿಯೂ ಅದರ ಪ್ರಭಾವ ಕಂಡು ಬರುತ್ತಿದೆ ಎಂದು ಚೈಲ್ಡ್ ಪ್ರೊಟೆಕ್ಷನ್ ಅಧಿಕಾರಿ ಹೇಳಿದ್ದಾರೆ. ಬುಧವಾರ ನಡೆದ ಶಿಶು ಕಲ್ಯಾಣ ಸಮಿತಿ ಸಭೆಯಲ್ಲಿ ತಂದೆ ಹಾಜರಾಗಿದ್ದು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೇನೆ ಎಂದು ಹೇಳಿದ್ದಾನಲ್ಲದೆ, ಅದಕ್ಕೆ ಪುರಾವೆಯಾಗಿ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರ ಪತ್ರವನ್ನು ತೋರಿಸಿದ್ದಾನೆ. ನಂತರ ಮಕ್ಕಳನ್ನು ಹೆತ್ತವರ ಜೊತೆ ಕಳುಹಿಸಲು ನಿರ್ಧರಿಸಲಾಗಿದೆ. ಎರಡು ವಾರದ ನಂತರ ಮಕ್ಕಳನ್ನು ಪುನಃ ಸಮಿತಿಯ ಮುಂದೆ ಹಾಜರು ಪಡಿಸಬೇಕೆಂದು ಶರ್ತ ವಿಧಿಸಲಾಗಿದೆ. ಮಲಪ್ಪುರಂ ಜಿಲ್ಲೆಯ ಇತರ ಕಡೆ ಈ ರೀತಿ ಬೇರೆ ಪ್ರಕರಣಗಳು ಇದ್ದು ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾ ಚೈಲ್ಡ್ ಪ್ರೊಟೆಕ್ಷನ್ ಅಧಿಕಾರಿ ತಿಳಿಸಿದ್ದಾರೆ.












