ಸನ್ಮಾರ್ಗ ವಾರ್ತೆ
ನವದೆಹಲಿ: ಭಾರತದಂತಹ ವೈವಿಧ್ಯಮಯ ಸಮಾಜದಲ್ಲಿ ಧರ್ಮಗಳ ಅವಹೇಳನ, ದ್ವೇಷದ ಪ್ರಚಾರ ಮತ್ತು ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುವ ಚಲನಚಿತ್ರಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಶ್ಯಾಮ್ ಭಾರ್ತಿ ಅವರ ಹಿಂದಿ ಚಲನಚಿತ್ರ ‘ಮಾಸೂಮ್ ಕಾತಿಲ್’ ಬಿಡುಗಡೆಗೆ ಅನುಮತಿ ನಿರಾಕರಿಸಲಾಗಿದೆ.
ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಿ ಕೆಲವು ಕಡಿತಗಳೊಂದಿಗೆ ಬಿಡುಗಡೆಗೆ ಅವಕಾಶ ನೀಡಬೇಕೆಂದು ನಿರ್ಮಾಪಕರು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ಸಿಬಿಎಫ್ಸಿಯ (CBFC) ನಿರ್ಧಾರವನ್ನು ಸಮರ್ಥಿಸಿದ್ದು, ಚಿತ್ರದಲ್ಲಿ ಹಿಂಸಾಚಾರ ಪ್ರಮಾಣ ಬಹಳ ಹೆಚ್ಚಿದ್ದು ಅತಿಯಾದ ಭಯಾನಕ ದೃಶ್ಯಗಳು ಒಳಗೊಂಡಿದೆ ಮತ್ತು ಚಿತ್ರದಲ್ಲಿ ಯಾವುದೇ ಸಾಮಾಜಿಕ ಮೌಲ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಯುವ ಮನಸ್ಸುಗಳನ್ನು ತಪ್ಪುದಾರಿಗೆಳೆಯುವ, ಕಾನೂನುಬಾಹಿರ ಚಟುವಟಿಕೆಗಳನ್ನು ಸಾಮಾನ್ಯಗೊಳಿಸುವ ಮತ್ತು ಸಮುದಾಯಗಳ ವಿರುದ್ಧ ಅವಹೇಳನಕಾರಿ ಅಂಶಗಳನ್ನು ಈ ಚಿತ್ರ ಹೊಂದಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ತೀರ್ಪು ‘ಮಾಸೂಮ್ ಕಾತಿಲ್’ ಗೆ ಸೀಮಿತವಾಗಿದ್ದರೂ, ಭಾರತದಲ್ಲಿ ಚಲನಚಿತ್ರ ಸೆನ್ಸಾರ್ ಕುರಿತು ಮತ್ತೆ ಚರ್ಚೆ ಹುಟ್ಟುಹಾಕಿದೆ. ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಸಬರಮತಿ ರಿಪೋರ್ಟ್’ ಮತ್ತು ‘ದಿ ಬೆಂಗಾಲ್ ಫೈಲ್ಸ್’ ನಂತಹ ಚಿತ್ರಗಳಿಗೆ ಅನುಮೋದನೆ ಸಿಕ್ಕಿದ್ದರೆ, ‘ಪಂಜಾಬ್ 95’ ನಂತಹ ಕೆಲವು ಚಿತ್ರಗಳು ತಡೆ ಮತ್ತು ಒತ್ತಡ ಎದುರಿಸಿವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಅನ್ವಯವು ಎಲ್ಲರಿಗೂ ಸಮಾನವಾಗಿಲ್ಲ ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.












