ಡಿಪ್ರೆಶನ್ ಎಂಬ ಆಧುನಿಕ ಕಾಯಿಲೆ

0
688

✍️ ಫಾತಿಮಾ ಮಕ್ತೂಮ್

ನಾನು ಡಿಪ್ರೆಶನ್‌ಗೆ ತಲುಪಿದ್ದೇನೆ. ನನಗೆ ಒಸಿಸಿ ಆಗಿದೆಯೆಂದು ಕಾಣುತ್ತದೆ… ಮಾನಸಿಕ ರೋಗವನ್ನು ಸೂಚಿಸುವ ಇಂತಹ ಮಾತುಕತೆಗಳು ಇಂದು ಸಾಮಾನ್ಯವಾಗಿದೆ. ಆಧುನಿಕ ಜಗತ್ತಿನ ನಾಗಾಲೋಟ, ಸ್ಪರ್ಧೆಯು ಮಾನಸಿಕ ಆರೋಗ್ಯವನ್ನು ಬಾಧಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಜನರ ಮನಸ್ಸಿಗೆ ಅಗತ್ಯವಾದ ಸಾಂತ್ವನದ ಮಾತುಗಳು ಆರೋಗ್ಯಕರವಾದ ಸಾಮೀಪ್ಯದ ರೀತಿ ನೀತಿಗಳು ಮನುಷ್ಯ ಮನಸ್ಸುಗಳ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ ಎಂದು ಮನುಷ್ಯ ಮನಸ್ಸಿನ ಬಗ್ಗೆ ಅತೀ ಹೆಚ್ಚು ತಿಳಿದಿರುವ ಸೃಷ್ಟಿಕರ್ತ ಪವಿತ್ರ ಕುರ್‌ಆನಿನಲ್ಲಿ ಹಲವೆಡೆ ಹೇಳಿರುತ್ತಾನೆ. ನಿರಾಶೆಯು ಮನುಷ್ಯನನ್ನು ನಿಷ್ಕ್ರೀಯನಾಗಿ, ದುಃಖಿತನಾಗಿ ಮಡುತ್ತದೆ. ತಾನು ಅಂದು ಕೊಂಡಿದ್ದು ನಡೆಯದೇ ಹೋದಾಗ ಅನಿರೀಕ್ಷಿತವಾಗಿ ಅವಘಡಗಳು ಸಂಭವಿಸಿದಾಗ ಮನುಷ್ಯನು ನಿರಾಶೆಯ ಕೂಪಕ್ಕೆ ಬೀಳುತ್ತಾನೆ. ಆದರೆ ಅಲ್ಲಾಹನ ಕಾರುಣ್ಯದ ಕುರಿತು ನಿರಾಶೆಯಾಗುವುದು ಸತ್ಯನಿಷೇಧಿಗಳ ಗುಣವೆಂದು ನಿರಾಶೆಯ ಬಾಗಿಲನ್ನೇ ಅಲ್ಲಾಹನು ಮುಚ್ಚಿದ್ದಾನೆ.

ಪ್ರವಾದಿ ಯಾಕೂಬ್(ಅ) ತಾನು ಹೆಚ್ಚು ಪ್ರೀತಿಸಿದ್ದ ತನ್ನೆರಡು ಮಕ್ಕಳನ್ನು ಕಳೆದುಕೊಂಡಾಗಲೂ ಅವರು ನಿರಾಶರಾಗದೆ ಅವರನ್ನು ಹುಡುಕಿ ತರಲು ಹೇಳಿದರು. “ಓ ನನ್ನ ಮಕ್ಕಳೇ, ನೀವು ಹೋಗಿ ಯೂಸುಫನನ್ನೂ, ಅವನ ತಮ್ಮನನ್ನೂ ಪತ್ತೆ ಹಚ್ಚಿರಿ. ಅಲ್ಲಾಹನ ಅನುಗ್ರಹದಿಂದ ನಿರಾಶರಾಗಬೇಡಿರಿ. ಅವನ ಅನುಗ್ರಹದಿಂದ ಸತ್ಯನಿಷೇಧಿಗಳು ಮಾತ್ರ ನಿರಾಶರಾಗುತ್ತಾರೆ. (ಯೂಸುಫ್: 87)

ತನ್ನ ಸೃಷ್ಟಿಗಳೊಂದಿಗೆ ತಮ್ಮ ದೂರನ್ನು ಹೇಳಿದಾಗ ಅವರಿಗೆ ಸಾಧ್ಯವಾಗಬೇಕೆಂದಿಲ್ಲ. ಆದರೆ ಸೃಷ್ಟಿಗಳ ನೋವು ದುಃಖಗಳನ್ನು ಆಲಿಸಲು ಸೃಷ್ಟಿಕರ್ತನು ಸದಾ ಸಿದ್ಧನಿರುತ್ತಾನೆ. ಮಾತ್ರವಲ್ಲ ಆತನಲ್ಲಿ ಪ್ರಾರ್ಥಿಸುತ್ತಾ ಯಾಚಿಸುತ್ತಾ ಇರುವವರೊಂದಿಗೆ ಆತನಿಗೆ ಹೆಚ್ಚು ಪ್ರೀತಿ ಇರುತ್ತದೆ. ಹೆಚ್ಚು ದುಃಖಿತರಾಗಿ ಭಯದಿಂದ ಆತನೊಂದಿಗೆ ತಮ್ಮ ಬೇಡಿಕೆಗಳನ್ನು ಇಡ ಬೇಕೆಂದು ಆತನು ಹೇಳಿರುತ್ತಾನೆ.

“ಮತ್ತು ಅವನು ಊಹಿಸಿಯೂ ಇರದಂತಹ ಕಡೆಗಳಿಂದ ಅವನಿಗೆ ಜೀವನಾಧಾರ ನೀಡುವನು. ಅಲ್ಲಾಹನ ಮೇಲೆ ಭರವಸೆ ಇಡುವವನ ಪಾಲಿಗೆ ಅವನೇ ಸಾಕು. ಅಲ್ಲಾಹನು ತಮ್ಮ ಕಾರ್ಯವನ್ನು ಪೂರ್ತಿಗೊಳಿಸಿಯೇ ತೀರುತ್ತಾನೆ. ಅಲ್ಲಾಹನು ಪ್ರತಿಯೊಂದು ವಸ್ತುವಿಗೂ ಒಂದು ವಿಧಿಯನ್ನು ನಿಶ್ಚಯಿಸಿಟ್ಟಿರುತ್ತಾನೆ” (ಅತ್ತಲಾಕ್: 3)

ಗತಕಾಲದ ಬಗ್ಗೆ ಸ್ಮರಿಸಿ ಹೇಳುವಾಗ ಹೆಚ್ಚು ದುಃಖ ಎಂಬ ಪದ, ಭವಿಷ್ಯದ ಬಗ್ಗೆ ಹೇಳುವಾಗ ಭಯ ಎಂಬ ಪದವನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ. ಮನುಷ್ಯ ಮನಸ್ಸನ್ನು ಬಾಧಿಸುವ ಡಿಪ್ರೆಶನ್ ಎನಕ್ಸಿಟಿಯ ಪ್ರಮುಖವಾದ ಕಾರಣ ಈ ಎರಡೂ ಆಗಿದೆ. ಆದರೆ ಅಲ್ಲಾಹನನ್ನು ಸ್ಮರಿಸಿ ಸೂಕ್ಷ್ಮವಾಗಿ ಜೀವಿಸುವವನಿಗೆ ಇದರಿಂದ ಮುಕ್ತಿ ದೊರೆಯುತ್ತದೆ ಎಂದು ಅಲ್ಲಾಹನೇ ವಾಗ್ದಾನ ಮಾಡಿದ್ದಾನೆ.

“ಕೇಳಿರಿ! ನಿಶ್ಚಯವಾಗಿಯೂ ಅಲ್ಲಾಹನ ಮಿತ್ರರಾಗಿರುವವರಿಗೆ, ಯಾವತ್ತು ಭಯ ಮತ್ತು ವ್ಯಥೆಯ ಸಂಭವವೇ ಇಲ್ಲ.” (ಯೂನುಸ್; 62)

ಅನಾಥತೆ, ಆಪ್ತರ ಬಂಧುಗಳ ಮಕ್ಕಳ ಸಾವುಗಳು, ದೈಹಿಕ ಹಿಂಸೆಗಳು, ಮಾನಸಿವಾಗಿ ದುರ್ಬಲಗೊಳಿಸುವ ಪ್ರಯತ್ನಗಳು, ಬಡತನ ಮುಂತಾದ ನೋವು ಯಾತನೆಗಳನ್ನು ಅನುಭವಿಸಿ ಬದುಕಿದ ನಮ್ಮ ಪ್ರಿಯ ಪ್ರವಾದಿಯವರನ್ನು(ಸ) ಅಭಿಮುಖೀಕರಿಸಿ ಮಾನವ ಸಮೂಹದೊಂದಿಗೆ ಅಲ್ಲಾಹನು ಎರಡು ಬಾರಿ “ವಾಸ್ತವದಲ್ಲಿ ಸಂಕಿರ್ಣತೆಯೊಂದಿಗೆ ವೈಶಾಲ್ಯವೂ ಇದೆ. ಖಂಡಿತವಾಗಿಯೂ ಸಂಕೀರ್ಣತೆಯಲ್ಲಿ ವೈಶಾಲ್ಯವೂ ಇದೆ” ಎಂದು ಪುನರಾವರ್ತಿಸಿದ್ದಾನೆ. (ಅಶ್ಸರ್ಹ್; 5-6)

ಲೌಕಿಕ ಬದುಕಿನ ಸ್ಪರ್ಧೆಗಳು ಮಾನಸಿಕ ಅಸಂತುಷ್ಟಿ ಸೃಷ್ಟಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸುಖ ಸೌಲಭ್ಯತೆಯಲ್ಲಿ, ಶ್ರೀಮಂತಿಕೆಯನ್ನು ಪ್ರಕಟಗೊಳಿಸುವ ಪರಸ್ಪರ ಸ್ಪರ್ಧೆಯ ಅಂತ್ಯವಿಲ್ಲದ್ದು. ಇತರರನ್ನು ಮಕಾಡೆ ಮಲಗಿಸಿ ಹೆಚ್ಚೆಚ್ಚು ಲೌಕಿಕ ಸೌಲಭ್ಯ ಪಡೆಯುವ ವ್ಯಾಮೋಹ ನಿಮ್ಮನ್ನು ಮತಿಹೀನರನ್ನಾಗಿ ಮಾಡುತ್ತದೆ ಎಂದೂ ಅದು ಗೋರಿಯ ಕೊನೆಯಾಗುವಂತಹದ್ದಲ್ಲವೆಂದೂ ಅಲ್ಲಾಹನು ಎಚ್ಚರಿಸಿದ್ದಾನೆ.(ಅತ್ತಕಾಸುರ್: 1-2)

“ನಿಮ್ಮ ಪ್ರಭುವಿನ ಕ್ಷಮೆಯ ಕಡೆಗೆ ಮತ್ತು ಭೂಮಿ-ಆಕಾಶಗಳಷ್ಟು ವಿಶಾಲವಾಗಿರುವ ಸ್ವರ್ಗದ ಕಡೆಗೆ ಧಾವಿಸಿರಿ. ಅದು ದೇವಭಯವುಳ್ಳವರಿಗಾಗಿ ಸಿದ್ಧ ಗೊಳಿಸಲ್ಪಟ್ಟಿರುತ್ತದೆ.” (ಆಲೆ ಇಮ್ರಾನ್: 133)

ಬದುಕಿನ ಸಂತೃಪ್ತಿಯ ಕಡೆಗಿನ ಹಾದಿಯನ್ನು ಪ್ರವಾದಿವರ್ಯರು(ಸ) ಕಲಿಸಿದ್ದಾರೆ. “ನಿನಗೆ ನಿಶ್ಚಯಗೊಳಿಸಿದ ಅನುಗ್ರಹಗಳ ಬಗ್ಗೆ ನೀನು ತೃಪ್ತನಾಗು. ಆಗ ನೀನು ಜನರಲ್ಲಿ ಅತೀ ಹೆಚ್ಚು ಸಂಪನ್ನನಾಗಿರುವೆ.” (ಇಮಾಮ್ ಅಹ್ಮದ್)

ನೀವು ನಿಮಗಿಂತ ಕೆಳಗಿನವರ ಬಗ್ಗೆ ನೋಡಿರಿ. ನಿಮಗಿಂತ ಮೇಲಿರುವವರ ಬಗ್ಗೆ ನೋಡಬೇಡಿರಿ.” ನಿಮಗೆ ನೀಡಲಾದ ಅಲ್ಲಾಹನ ಅನುಗ್ರಹಗಳನ್ನು ನಿರ್ಲಕ್ಷಿಸದಿರಲು ಇದು ಉತ್ತಮ.” (ಬುಖಾರಿ ಮುಸ್ಲಿಮ್)

ಮಾಡಿದ ಪಾಪಗಳ ಬಗ್ಗೆ ಚಿಂತಿಸುತ್ತಾ ಪಾಪ ಭಾರದಿಂದ ವ್ಯಥೆ ಪಡುವವರು. ಜೀವನವನ್ನು ನೂಕುತ್ತ ಸಾಗುವಂತಹ ಅವಸ್ಥೆಯನ್ನು ಮನುಷ್ಯರಿಗೆ ಅಲ್ಲಾಹನು ನಿಶ್ಚಯಿಸಿಲ್ಲ. ಅಲ್ಲಾಹನು ಕ್ಷಮಾಶೀಲನಾಗಿದ್ದಾನೆ. ಪಾಪ ಕೃತ್ಯ ಎಸಗಿಸದವರಿಗೆ ಪಶ್ಚಾತ್ತಾಪ ಪಡಲು ತೌಬಾ ಮಾಡಲು ಕರುಣಾಮಯಿಯಾದ ಅಲ್ಲಾಹನು ಸಾಕಷ್ಟು ಅವಕಾಶ ಒದಗಿಸಿದ್ದಾನೆ. ಮನುಷ್ಯನು ಬದಲಾವಣೆ ಬಯಸುವುದಾದರೆ ಸ್ವಯಂ ಮುಂದೆ ಬರಬೇಕೆಂದು ಕುರ್‌ಆನ್ ಕಲಿಸುತ್ತದೆ. “ಒಂದು ಜನತೆ ತನ್ನ ಸ್ಥಿತಿಯನ್ನು ಸ್ವತಃ ತಾನೇ ಬದ ಲಾಯಿಸುವ ತನಕ ಅಲ್ಲಾಹನು ಅವರ ಸ್ಥಿತಿಯನ್ನು ಬದಲಯಿಸುವುದಿಲ್ಲ.” (ಅರ‍್ರಅದ್: 11)

ಮಾನಸಿಕವಾಗಿ ಆರೋಗ್ಯಪ್ರದವಾಗಿರಲು ಇರುವ ಫಲಪ್ರದವಾಗುವ ಗುಣವಾಗಿದೆ ಯಾವಾಗಲೂ ಧನಾತ್ಮಕವಾಗಿರುವುದು. ಚಿಂತನೆ, ಕಾರ್ಯ ಚಟುವಟಿಕೆಯಲ್ಲಿ ಧನಾತ್ಮಕ ಗುಣಗಳನ್ನು ಬೆಳೆಸಲು ಸಾಕಷ್ಟು ಸಲಹೆಗಳನ್ನು ಕುರ್‌ಆನ್ ಮತ್ತು ಹದೀಸ್ ನೀಡುತ್ತದೆ. “ಸತ್ಯವಿಶ್ವಾಸಿಯ ವಿಚಾರಗಳು ಆಶ್ಚರ್ಯಕರವಾದುದು. ಒಂದು ಒಳಿತು ಆತನಲ್ಲಿ ಉಂಟಾದರೆ ಅದರ ಬಗ್ಗೆ ಆತ ಕೃತಜ್ಞತೆ ಸಲ್ಲಿಸುವನು. ಅದು ಆತನಿಗೆ ಒಳಿತಾಗುತ್ತದೆ. ಆತನಿಗೆ ಒಂದು ಕಿರುಕುಳ ತೊಂದರೆ ಸಂಭವಿಸಿದರೂ ಆತ ಸಹನೆ ವಹಿಸುತ್ತಾನೆ. ಆದು ಆತನಿಗೆ ಒಳಿತಾಗಿ ಪರಿಣಮಿಸುವುದು. (ಮುಸ್ಲಿಮ್)

ಸಂಭವಿಸುವುದೆಲ್ಲವನ್ನೂ ಒಳಿತಾಗಿ ಮಾರ್ಪಡಿಸುವ ಸತ್ಯವಿಶ್ವಾಸಿಗೆ ದೂರು ದುಮ್ಮಾನಗಳಲ್ಲಿ ಪರಿತಪಿಸಿರಲು ಅವ ಕಾಶವಿರುವುದಿಲ್ಲ. ಮಾತಿನಲ್ಲಿ ಧನಾತ್ಮಕವಾಗಿರುವುದು ಧನಾತ್ಮಕವಾದ ಚಿಂತನೆಯ ಮೊದಲ ಹೆಜ್ಜೆಯಾಗಿದೆ. ಧನಾತ್ಮಕವಾದ ಮಾತುಗಳು ಧನಾತ್ಮಕವಾದ ಚಿಂತನೆಯನ್ನು ಉಂಟು ಮಾಡಬಲ್ಲವು. “ಸತ್ಯವಿಶ್ವಾಸಿಗಳೇ ಅಲ್ಲಾಹನನ್ನು ಭಯ ಪಡಿರಿ. ಮತ್ತು ಸರಿಯಾದ ಮಾತನ್ನೇ ಆಡಿರಿ. ಅಲ್ಲಾಹನು ನಿಮ್ಮ ಕರ್ಮಗಳನ್ನು ಸರಿಪಡಿಸುವನು ಮತ್ತು ನಿಮ್ಮ ಅಪರಾಧಗಳನ್ನು ಕ್ಷಮಿಸುವನು.” (ಅಲ್ ಅಹ್‌ಝಾಬ್: 70-71)

“ಅಲ್ಲಾಹನಲ್ಲಿ ಮತ್ತು ಅಂತಿಮ ದಿನದ ಮೇಲೆ ವಿಶ್ವಾಸವಿಡುವವನು ಉತ್ತಮವಾದುದನ್ನೇ ಆಡಲಿ. ಇಲ್ಲವಾದರೆ ಮೌನವಾಗಿರಲಿ.” (ಬುಖಾರಿ ಮುಸ್ಲಿಮ್)

ಆಲಸ್ಯತೆಯಿಂದ ದೂರವಿದ್ದು ಕರ್ಮನಿರತನಾಗಿ ಸರ್ವವನ್ನು ಅಲ್ಲಾಹನಲ್ಲಿ ಸಮರ್ಪಿಸಿ ಶುಭ ನಿರೀಕ್ಷೆಯಿಂದ ಮುಂದೆ ಸಾಗುವ ಸತ್ಯವಿಶ್ವಾಸಿಗೆ ಅಲ್ಲಾಹನು ಶಕ್ತಿ ನೀಡುವಾಗ ಇನ್ನೇನು ತಾನೇ ಬೇಕು? ತಿಳಿಯಿರಿ. ಮನಶ್ಶಾಂತಿಯೊದಗುವುದು ಅಲ್ಲಾಹನ ಸ್ಮರಣೆಯಿಂದಲೇ ಎಂಬುದು ಖಚಿತ. (ಅರ‍್ರಅದ್: 28)