ಹಿಂದೂ ಮುಸ್ಲಿಂ ಘರ್ಷಣೆ ತಪ್ಪಿಸಿದ ಎಎಪಿ ಮುಖಂಡರು: ಎರಡೂ ಸಮುದಾಯಗಳ ನಡುವೆ ರಾಜಿ, ಬಿಜೆಪಿ ವಿರೋಧ

0
571

ಸನ್ಮಾರ್ಗ ವಾರ್ತೆ

ಹಿಂದೂ ಮುಸ್ಲಿಂ ಘರ್ಷಣೆಗೆ ಕಾರಣವಾಗಬಹುದಾಗಿದ್ದ ಪ್ರಕರಣ ಒಂದನ್ನು ಪಂಜಾಬ್‌ನ ಸಚಿವ ಮೊಹಿಂದರ್ ಭಗತ್ ಮತ್ತು ಜಲಂಧರ್‌ನ ಮೇಯರ್ ಯೋಗೇಶ್ ಧೀರ್ ಅವರ ಸಮಯೋಚಿತ ಮಧ್ಯಪ್ರದೇಶದಿಂದಾಗಿ ಸುಖಾಂತ್ಯದಲ್ಲಿ ಕೊನೆಗೊಂಡಿದೆ.

ಐ ಲವ್ ಮೊಹಮ್ಮದ್ ಎಂಬ ಅಭಿಯಾನದಲ್ಲಿ ಪಾಲ್ಗೊಂಡವರನ್ನು ಉತ್ತರಪ್ರದೇಶದಲ್ಲಿ ಪೊಲೀಸರು ದಮನಿಸುತ್ತಿರುವುದನ್ನು ಪ್ರತಿಭಟಿಸಿ ಪಂಜಾಬ್‌ನ ಜಲಂಧರ್‌ನಲ್ಲಿ ಅಕ್ಟೋಬರ್ 4ರಂದು ಮುಸ್ಲಿಮರು ಪ್ರತಿಭಟನಾ ಸಭೆ ನಡೆಸಿದ್ದರು. ಬಳಿಕ ಕಮಿಷನರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲು ಹೊರಟಿದ್ದರು. ಈ ಸಂದರ್ಭದಲ್ಲಿ ಸ್ಕೂಟರ್‌ನಲ್ಲಿ ಬಂದ ಯೋಗೇಶ್ ಮೆನಿ ಎಂಬವ ಗುಂಪಿನ ಬಳಿ ಬಂದು ಜೈ ಶ್ರೀರಾಮ್ ಎಂದು ಘೋಷಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಅದು ಘರ್ಷಣೆಯ ಸ್ಥಿತಿಗೆ ಕಾರಣವಾಗಿತ್ತು. ಆತನ ಪರ ಬಿಜೆಪಿ ಮತ್ತು ಪರಿವಾರ ಸೇರಿಕೊಂಡಿತ್ತು ಮತ್ತು ಆತ ಮುಸ್ಲಿಮರ ವಿರುದ್ಧವೇ ದೂರು ನೀಡಿದ್ದ.

ಈ ಹಿನ್ನೆಲೆಯಲ್ಲಿ ಮುಸ್ಲಿಂ ಮತ್ತು ಹಿಂದೂ ಸಮುದಾಯದ ನಾಯಕರನ್ನು ಜೊತೆ ಸೇರಿಸಿದ ಎಎಪಿ ಮುಖಂಡರು ಪರಸ್ಪರ ನಡುವೆ ಸಂವಾದ ನಡೆಸಿದ್ದಾರೆ. ಬಳಿಕ ಎರಡು ಗುಂಪುಗಳು ದ್ವೇಷವನ್ನು ಮರೆತು ಒಂದಾಗುವುದಕ್ಕೆ ಒಪ್ಪಿಕೊಂಡಿದೆ ಮತ್ತು ದೂರನ್ನು ಹಿಂಪಡೆದುಕೊಂಡಿವೆ.

ಈ ರಾಜೀ ಒಪ್ಪಂದ ನಡೆದ ಬಳಿಕ ಬಿಜೆಪಿಯ ಮಾಜಿ ಶಾಸಕ ಶೀತಲ್ ಅಂಗುರಾಲ್ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದವನ್ನು ಅವರು ವಿರೋಧಿಸಿದ್ದಾರೆ. ಎಫ್ಐಆರ್ ದಾಖಲಿಸುವಂತೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದವರು ಹೇಳಿದ್ದಾರೆ.

ಆದರೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೆರಡು ಈ ಪ್ರಕರಣವನ್ನು ಮುಂದುವರಿಸದಂತೆ ಪರಸ್ಪರ ಸಹಮತಕ್ಕೆ ಬಂದಿವೆ.