ಸನ್ಮಾರ್ಗ ವಾರ್ತೆ
ಬಿಜೆಪಿ ಅಧಿಕಾರ ಕಳಕೊಂಡರೆ ಅಸ್ಸಾಂ ಅನ್ನು ಮುಸ್ಲಿಮರು ವಶಪಡಿಸಿಕೊಳ್ಳುತ್ತಾರೆ ಎಂದು ಹೇಳುವ ವಿಡಿಯೋವನ್ನು ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು ಇದರ ಬಗ್ಗೆ ಎಫ್ಐಆರ್ ದಾಖಲಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಮೇಲೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಬಗ್ಗೆ ಪರಿಶೀಲ ನಡೆಸುವುದಾಗಿ ಹೇಳಿದೆ. ಮುಸ್ಲಿಮರನ್ನು ಖಳನಾಯಕರಂತೆ ಬಿಂಬಿಸುವ ಮತ್ತು ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವ ಈ ವಿಡಿಯೋದ ವಿರುದ್ಧ ಪಾರ್ಟ್ನ ನ್ಯಾಯಾಲಯದ ನ್ಯಾಯಾಧೀಶ ಅಂಜನ ಪ್ರಕಾಶ್ ಮತ್ತು ಪತ್ರಕರ್ತ ಕುರ್ ಬಾನ್ ಅಲಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರ ಪರ ನ್ಯಾಯವಾದಿ ನಿಜಾಮ್ ಪಾಷಾ ಅವರು ಸುಪ್ರೀಂ ಕೋರ್ಟಿನಲ್ಲಿ ಹಾಜರಾದರು. ನ್ಯಾಯಾಧೀಶರಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹೆತ ಅವರಿದ್ದ ಪೀಠದ ಮುಂದೆ ವಿಚಾರಣೆ ನಡೆಯಿತು. ಎಕ್ಸ್ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿದೆ ಮತ್ತು ಸುಪ್ರೀಂ ಕೋರ್ಟ್ ನ ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದರು.
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಫ್ಲ್ಯಾಟ್ ಫಾರ್ಮ್ ನಿಂದ ಕಿತ್ತು ಹಾಕುವಂತೆ ಮತ್ತು ಎಫ್ಐಆರ್ ದಾಖಲಿಸುವಂತೆ ಆದೇಶಿಸಬೇಕು ಎಂದು ನ್ಯಾಯಾಧೀಶರಲ್ಲಿ ಅವರು ವಿನಂತಿಸಿದರು. ಅವರ ವಾದವನ್ನು ಆಲಿಸಿದ ನ್ಯಾಯಾಧೀಶರ ಪೀಠವು ಸಂಬಂಧಿತರಿಗೆ ನೋಟಿಸು ಜಾರಿ ಮಾಡಿತಲ್ಲದೆ ಅಕ್ಟೋಬರ್ 28ಕ್ಕೆ ವಿಚಾರಣೆಯನ್ನು ಮುಂದೊಡಿತು.
ಈ ವಿಡಿಯೋವನ್ನು ಸೆಪ್ಟೆಂಬರ್ 15ರಂದು ಅಸ್ಸಾಂನ ಬಿಜೆಪಿ ಯೂನಿಟ್ ಎಕ್ಸ್ ಜಾಲತಾಣದಲ್ಲಿ ಹಂಚಿಕೆ ಮಾಡಿದೆ. ಒಂದು ವೇಳೆ ಬಿಜೆಪಿ ಅಧಿಕಾರದಿಂದ ಕೆಳಗಿಳಿದರೆ ಅಸ್ಸಾಮನ್ನು ಮುಸ್ಲಿಮರು ವಶಪಡಿಸಿಕೊಳ್ಳುತ್ತಾರೆ ಎಂಬ ಅರ್ಥದಲ್ಲಿ ಈ ವಿಡಿಯೋವನ್ನು ತಯಾರಿಸಲಾಗಿದೆ.
ಈ ವಿಡಿಯೋದಲ್ಲಿ ಟೋಪಿ ಮತ್ತು ಬುರ್ಖಾ ಧರಿಸಿರುವವರು ಚಾದಂಗಡಿಯನ್ನು ವಶಪಡಿಸಿಕೊಳ್ಳುತ್ತಿರುವುದು, ಗುವಾಹಟಿ ವಿಮಾನ ನಿಲ್ದಾಣ, ಗುವಾಹಟಿ ಸ್ಟೇಡಿಯಂ, ಗುವಾಹಟಿ ನಗರ ಇತ್ಯಾದಿ ಪ್ರಮುಖ ನೆಲೆಗಳನ್ನು ಕೈವಶ ಮಾಡಿಕೊಳ್ಳುತ್ತಿರುವ ರೀತಿಯಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ.












