ಇಸ್ರೇಲ್ ಉಪಸ್ಥಿತಿಗೆ ಪ್ರತಿಭಟನೆ: ಮನಾಮ ಸಮ್ಮೇಳನದಲ್ಲಿ ಭಾಗವಹಿಸದಿರಲು ಕುವೈಟ್ ನಿರ್ಧಾರ

0
715

ಕುವೈಟ್‍ಸಿಟಿ, ಜೂ. 26: ಪ್ರಗತಿಗಾಗಿ ಶಾಂತಿ ಎಂಬ ಹೆಸರಿನಲ್ಲಿ ಬಹ್ರೈನ್‍ನಲ್ಲಿ ನಡೆಯುವ ಸಮ್ಮೇಳನದಲ್ಲಿ ಕುವೈಟ್ ಭಾಗವಹಿಸದಿರಲು ನಿರ್ಧರಿಸಿದೆ. ಜೂನ್ 25, 26 ರಂದು ನಡೆಯುವ ಸಮ್ಮೇಳನದಲ್ಲಿ ಇಸ್ರೇಲ್‍ನೊಂದಿಗೆ ವೇದಿಕೆ ಹಂಚಿಕೊಳ್ಳಲು ತಮಗೆ ಇಷ್ಟವಿಲ್ಲ ಎಂದು ಕುವೈಟ್ ಸ್ಪಷ್ಟೀಕರಣ ನೀಡಿದೆ. ಅಮೆರಿಕ, ಇಸ್ರೇಲ್ ಮತ್ತು ಕೆಲವು ಅರಬ್ ದೇಶಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಫೆಲಸ್ತೀನ್ ಬಹಿಷ್ಕರಿಸಿದೆ. ಫೆಲಸ್ತೀನ್‍ಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಕುವೈಟ್ ಈ ನಿರ್ಧಾರ ತಳೆದಿದೆ ಎನ್ನಲಾಗಿದೆ.

ಫೆಲಸ್ತೀನನ್ನು ಬೆಂಬಲಿಸುವ ವಿದೇಶನೀತಿಯ ಪ್ರಕಾರ ಸಮ್ಮೇಳನದಿಂದ ದೂರ ಉಳಿದಿರುವುದಾಗಿ ಕುವೈಟ್ ವಿದೇಶ ಸಚಿವ ಶೇಖ್ ಸಬಾಹ್ ಖಾಲಿದ್ ಅಸ್ಸಬಾಹ್ ತಿಳಿಸಿದರು. ಸಮ್ಮೇಳನಲದಲ್ಲಿ ಭಾಗವಹಿಸಬಾರದೆಂದು ಕಳೆದ ದಿವಸ ಕುವೈಟ್ ಪಾರ್ಲಿಮೆಂಟು ಒಕ್ಕೊರಳಿನಿಂದ ಆಗ್ರಹಿಸಿತ್ತು. ಪಾರ್ಲಿಮೆಂಟಿನ ಭಾವನೆಯನ್ನು ಗೌರವಿಸಿ ಫೆಲಸ್ತೀನಿಗೆ ಇಷ್ಟವಿಲ್ಲದ ನಿರ್ದೇಶಗಳನ್ನು ಕುವೈಟ್ ಒಪ್ಪುವುದಿಲ್ಲ ಎಂದು ಸಚಿವರು ತಿಳಿಸಿದರು. ಕುವೈಟ್‍ನ ವಿದೇಶ ನೀತಿ ರೂಪಿಸಲು ಮತ್ತು ಜಾರಿಗೊಳಿಸಲು ಸಾಮರ್ಥ್ಯ ನಮ್ಮಲ್ಲಿದೆ. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಸಚಿವರು ಹೇಳಿದರು.